ನಮಗೆಲ್ಲರಿಗೂ ಕರಳುಬಳ್ಳಿ ಸಂಬಂಧ ಇರುವ ಈ ಪ್ರದೇಶದಲ್ಲಿ ಅನೇಕ ವೈಶಿಷ್ಟ್ಯಗಳು ಇವೆ. ಅವು ಇದಕ್ಕೆ ಇರುವ ಹೆಸರುಗಳಿಂದ ಶುರು ಆಗುತ್ತವೆ. ಈಶಾನ್ಯ ಕರ್ನಾಟಕ ಎನ್ನುವುದು ಭೌಗೋಳಿಕ ಹೆಸರಾದರೆ, ಹೈದರಾಬಾದು ಕರ್ನಾಟಕ ಎನ್ನುವುದು ಇಲ್ಲಿನ ರಾಜಕೀಯ ಇತಿಹಾಸದ ಹಿನ್ನೆಲೆಯಿಂದ ಬಂದ ಹೆಸರು. ಕಲ್ಯಾಣ ಕರ್ನಾಟಕ ಎನ್ನುವುದು ಇಲ್ಲಿನ ನೆಲಮೂಲ ಸಂಸ್ಕೃತಿಯ ಪ್ರತೀಕ
ಕೆಲವು ದಿನಗಳ ಹಿಂದೆ ಒಂದು ವಿಚಾರ ಸಂಕಿರಣದಲ್ಲಿ ನಾನು ಸಹಬಾಳ್ವೆಯ ಬಗ್ಗೆ ಮಾತಾಡಿದೆ. ನಾನು ಮಾತು ಮುಗಿಸಿದ ನಂತರ ಒಬ್ಬರು ಒಂದು ಪ್ರಶ್ನೆ ಕೇಳಿದರು- “ಈ ಸೌಹಾರ್ದ – ಸಹಬಾಳ್ವೆ ನಮಗೆ ಯಾಕೆ ಬೇಕು?”. ಅದು ಮುಗ್ಧತೆಯಿಂದ ಕೇಳಿದ ಸರಳ ಪ್ರಶ್ನೆ ಆಗಿದ್ದರೂ, ನನಗೆ ಅದು ಅತ್ಯಂತ ಗಹನವಾದ ತತ್ವಜ್ಞಾನದ ಜಿಜ್ಞಾಸೆಯಂತೆ ಕಂಡಿತು. ಅದು ಕೇವಲ ಅವರೊಬ್ಬರ ತಲೆಯಲ್ಲಿ ಮೂಡಿದ್ದು ಅಲ್ಲ, ಈ ದುರಿತ ಕಾಲದಲ್ಲಿ ಸರ್ವರ ಮನಸಿನಲ್ಲಿ ಮನೆ ಮಾಡಿರುವ ಪ್ರಶ್ನೆ ಅಂತ ಅನ್ನಿಸಿ ನಾನು ಮುಗುಳುನಕ್ಕೆ. ಅವರ ಪ್ರಶ್ನೆಗೆ ಉತ್ತರವನ್ನೂ ಕೊಟ್ಟೆ.
ನಾವು ಬೇರೆಯವರ ಬಗ್ಗೆ ಅನಿಸಿಕೆ ರೂಪಿಸಿಕೊಳ್ಳುವುದು ಮತ್ತು ಅಭಿಪ್ರಾಯ ಸೃಷ್ಟಿ ಮಾಡಿಕೊಳ್ಳುವುದು ನಮ್ಮ ಜೀವನದಲ್ಲಿ ನಿಯಮಿತವಾಗಿ ನಡೆಯುವ ಕ್ರಿಯೆಗಳು. ಇದರ ಬಗ್ಗೆ ಮನೋವಿಜ್ಞಾನಿಗಳು ನೀಡುವ ವ್ಯಾಖ್ಯಾನ ಹೀಗಿದೆ. “ಇದು ಒಂದು ರೀತಿಯಲ್ಲಿ ಉಸಿರಾಟ ಇದ್ದಂತೆ- ಅದು ಎಷ್ಟು ಸರಳ ಹಾಗೂ ಸಹಜ ಪ್ರಕ್ರಿಯೆ ಎಂದರೆ, ಅದು ನಿಂತು ಹೋಗುವವರೆಗೆ ಅದರ ಇರುವಿಕೆ ನಮಗೆ ಗೊತ್ತಾಗುವುದೇ ಇಲ್ಲ. ಹಾಗೆಯೇ ನಾವು ಪ್ರತಿ ಕ್ಷಣ ಇನ್ನೊಬ್ಬರ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ಅಭಿಪ್ರಾಯ ರೂಪಿಸುತ್ತಾ ಇರುತ್ತೇವೆ. ಆದರೆ ಅದು ನಮ್ಮ ಅರಿವಿಗೆ ಬರುವುದೇ ಇಲ್ಲ. ಅದು ನಮಗೆ ಸಾಧ್ಯ ವಾಗದೇ ಹೋದಾಗ ಮಾತ್ರ ನಮಗೆ ಅದರ ಪ್ರಾಮುಖ್ಯ ತಿಳಿಯುತ್ತದೆ”.
ಸೌಹಾರ್ದದ ಬಗ್ಗೆ ತಿಳಿಯುವಾಗಲೂ ಕೂಡ ನಾವು ಇದೇ ವ್ಯಾಖ್ಯಾನವನ್ನು ಬಳಸಿಕೊಳ್ಳಬಹುದು. ಅದು ಇದ್ದಾಗ ನಮಗೆ ಅದರ ಮಹತ್ವ ತಿಳಿಯುವುದಿಲ್ಲ. ಅದು ಅಪರೂಪವಾದಾಗ, ಅಥವಾ ಇಲ್ಲವಾದಾಗ ಮಾತ್ರ ಅದರ ಕೊರತೆ ಕಾಡುತ್ತದೆ. ಹಾಗಾದಾಗ ಮಾತ್ರ ಭಾಗವತದ ಕತೆಯಲ್ಲಿ ಶ್ರೀಕೃಷ್ಣನಿಗೆ ತಾಯಿಯ ಕೈತುತ್ತ ನೆನಪು ಕಾಡಿದಂತೆ, ನಗರದ ವೈಭೋಗದ ಬದುಕನ್ನು ಬದಿಗೊತ್ತಿದ ಆ ಭಗವಂತ ಗೊಲ್ಲರ ಹಟ್ಟಿಯ ಬೆರಗಿಗೆ ಮರಳಿದಂತೆ ನಾವು ಸೌಹಾರ್ದವನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ.
ಇನ್ನು ನಾವು ಸೌಹಾರ್ದ, ಸಹಬಾಳ್ವೆಯ ಮಾತಾಡಿದಾಗ ಕೇವಲ ಎರಡು ಕೋಮುಗಳ ನಡುವಿನ ಸಂಬಂಧದ ಬಗ್ಗೆ ಮಾತ್ರ ಮಾತಾಡುತ್ತೇವೆ ಅಂತ ಅನ್ನಿಸುತ್ತದೆ. ಆದರೆ ಅದು ಸೀಮಿತವಾದದ್ದು. ಸೌಹಾರ್ದ ಇರಬೇಕಾದದ್ದು ವಿವಿಧ ಧರ್ಮ, ಜಾತಿ, ವರ್ಗ ಹಾಗೂ ಲಿಂಗದವರ ನಡುವೆ, ಬೇರೆ ಬೇರೆ ಭಾಷೆ ಮಾತಾಡುವವರ ನಡುವೆ. ಅಷ್ಟೇ ಅಲ್ಲ, ಈ ದುರಿತ ಕಾಲದಲ್ಲಿ ಬೇರೆ ಬೇರೆ ರಾಜಕೀಯ – ಆರ್ಥಿಕ- ಸಾಮಾಜಿಕ ಸಿದ್ಧಾಂತಗಳನ್ನು ಹೊಂದಿದವರ ನಡುವೆ ಸಹಿತ ಸೌಹಾರ್ದ ಅಗತ್ಯ.
ನನಗೆ ಇಲ್ಲಿ ಶ್ರೀ ರಮಣ ಮಹರ್ಷಿಗಳ ಮಾತೊಂದು ನೆನಪಾಗುತ್ತದೆ. “ಇತರರ ಜೊತೆಗೆ ನಮ್ಮ ಸಂಬಂಧ ಹೇಗೆ ಇರಬೇಕು?” ಅಂತ ಅವರಿಗೆ ಭಕ್ತನೊಬ್ಬ ಕೇಳಿದಾಗ ಅವರು ಕೊಟ್ಟ ಉತ್ತರ, “ಇತರರು ಅನ್ನುವವರು ಇಲ್ಲಿ ಯಾರೂ ಇಲ್ಲ”. ಇದು ಸದಾ ಕಾಲಕ್ಕೂ ನಮಗೆ ಮಾರ್ಗದರ್ಶಿ ಆದೀತು ಅಂತ ನನಗೆ ಅನ್ನಿಸುತ್ತದೆ. ಮಾನವ ಸಂಬಂಧಗಳು ಅತೀ ಎನ್ನುವಷ್ಟರ ಮಟ್ಟಿಗೆ ಸಂಕೀರ್ಣವಾಗಿ ಹೋಗಿರುವ ಈ ಸಂದರ್ಭದಲ್ಲಿ ಈ ಸೌಹಾರ್ದ, ಸಹಬಾಳ್ವೆ ಎನ್ನುವುದು, ʼಬಿನ್ನರು ಜೊತೆ ಜೊತೆಗೆ ಇರುವುದು’ ಎನ್ನುವುದಕ್ಕಿಂತ ಒಬ್ಬರನ್ನು ಒಬ್ಬರು ಸಹಿಸಿಕೊಂಡು ಇರುವುದು, ಜಾಸ್ತಿ ಕಿರಿಕಿರಿ ಮಾಡಿಕೊಳ್ಳಲಾರದೇ ಜೊತೆಗೆ ಇರುವುದು ಅಂತ ಆದರೆ ಸಾಕು. ಹೆಚ್ಚಿನದ್ದು ನಮ್ಮ ಕೈಯಲ್ಲಿ ಸಾಧ್ಯವಾದರೆ ಅದು ಬೋನಸ್ ಅಂತ ನನಗೆ ಅನಿಸುತ್ತಾ ಇರುತ್ತದೆ.
ನಮಗೆಲ್ಲರಿಗೂ ಕರಳುಬಳ್ಳಿ ಸಂಬಂಧ ಇರುವ ಈ ಪ್ರದೇಶದಲ್ಲಿ ಅನೇಕ ವೈಶಿಷ್ಟ್ಯಗಳು ಇವೆ. ಅವು ಇದಕ್ಕೆ ಇರುವ ಹೆಸರುಗಳಿಂದ ಶುರು ಆಗುತ್ತವೆ. ಈಶಾನ್ಯ ಕರ್ನಾಟಕ ಎನ್ನುವುದು ಭೌಗೋಳಿಕ ಹೆಸರಾದರೆ, ಹೈದರಾಬಾದು ಕರ್ನಾಟಕ ಎನ್ನುವುದು ಇಲ್ಲಿನ ರಾಜಕೀಯ ಇತಿಹಾಸದ ಹಿನ್ನೆಲೆಯಿಂದ ಬಂದ ಹೆಸರು. ಕಲ್ಯಾಣ ಕರ್ನಾಟಕ ಎನ್ನುವುದು ಇಲ್ಲಿನ ನೆಲಮೂಲ ಸಂಸ್ಕೃತಿಯ ಪ್ರತೀಕ.
ಭಾರತ ವಿವಿಧ ಧರ್ಮಗಳಿಗೆ ಜನ್ಮ ಕೊಟ್ಟ ನಾಡು ಅಂತೆಯೇ, ಕಲ್ಯಾಣ ಕರ್ನಾಟಕ ವಿವಿಧ ಅಧ್ಯಾತ್ಮ ಪರಂಪರೆಗಳ ನೆಲೆ. ಈ ಮಾತಿಗೆ ಸಾಕ್ಷಿ ಹುಡುಕಲು ನಾವು ಬಹಳ ದೂರ ಹೋಗಬೇಕಾಗಿಲ್ಲ. ಬಹಳ ಕಷ್ಟ ಪಡಬೇಕಾಗಿಲ್ಲ. ಸುಮ್ಮನೇ ನಮ್ಮ ಸುತ್ತಮುತ್ತ ಕಣ್ಣು ಹಾಯಿಸಿದರೆ ನಮಗೆ ಅವುಗಳ ಇರುವಿಕೆ ಅನುಭವಕ್ಕೆ ಬರುತ್ತದೆ.
ವಿಶ್ವದ ಪ್ರಮುಖ ಆಸ್ಥೆಗಳಾದ ಯಹೂದಿ ಧರ್ಮ, ಕ್ರೈಸ್ತ ಧರ್ಮ ಹಾಗೂ ಇಸ್ಲಾಂ ಧರ್ಮದ ಸಂತರು ಹುಟ್ಟಿದ್ದು ಮಧ್ಯ ಪೂರ್ವ ಏಷಿಯಾದ ಮೂರು ನಗರಗಳಲ್ಲಿ. ಪೂರ್ವ ಪಿತೃ ಅಬ್ರಹಾಂನ ಹುಟ್ಟೂರು ಇರಾಕಿನ ಉರ್ ಖಾಸದೆಮ, ಪ್ರಮಥ ಯೇಸು ಜನಿಸಿದ್ದು ಪ್ಯಾಲೆಸ್ತೀನ್‌ನ ಬೆಥ್ಲೆಹೆಮ್ ಹಾಗೂ ಪ್ರವಾದಿ ಮಹಮದ್ ಅವರ ಹುಟ್ಟೂರು ಸೌದಿ ಅರೇಬಿಯಾದ ಮೆಕ್ಕಾ. ಇವು ಮೂರು ಒಂದು ತ್ರಿಕೋನದ ಬಿಂದುಗಳಾದರೆ ಆ ಆಕೃತಿಯ ಸುತ್ತಳತೆ 3,500 ಕಿಲೋಮೀಟರ್ ಅಷ್ಟು. ಇದನ್ನುʼಪವಾಡ ಸದೃಶ ತ್ರಿಕೋನ’ , ʼಪವಿತ್ರ ಭೂಮಿ’, ʼಜಾದೂ ಪ್ರದೇಶ’ ಎಂದು ಕರೆಯಲಾಗುತ್ತದೆ. ಈ ಮೂರನ್ನೂ ನೋಡಬೇಕು ಎಂದು ಹೋರಾಟ ಪ್ರವಾಸಿಗಳು ರಸ್ತೆಯ ಮೂಲಕ ಪ್ರಯಾಣಿಸಿದರೆ ಅವರಿಗೆ ಎರಡು ಹಗಲು, ಒಂದು ರಾತ್ರಿ ಸಾಕು. ಅವರು ವಿಮಾನದಲ್ಲಿ ತೆರಳಿದರೆ ಕೇವಲ ನಾಲ್ಕು ಗಂಟೆಗಳಲ್ಲಿ ಈ ಮೂರೂ ನಗರಗಳ ಮೇಲೆ ಹಾಯ್ದು ಹೋಗಬಹುದು. ಇದು ಇಲ್ಲಿನ ಸ್ಥಳ ಮಹಿಮಾ ವೈಶಿಷ್ಟ್ಯ.
ನನ್ನ ಪ್ರಕಾರ ಇಷ್ಟೇ ಜಾಗತಿಕ ಮಹತ್ವದ, ಇದೇ ರೀತಿ ಬೆರಗು ಹುಟ್ಟಿಸುವ ಸ್ಥಳ ಮಹಿಮೆ ಇರುವುದು ಕಲ್ಯಾಣ ಕರ್ನಾಟಕ ಪ್ರದೇಶ ಪವಿತ್ರವಾದ ನೆಲಕ್ಕೆ.
ಕಲ್ಯಾಣ ಕರ್ನಾಟಕ ದಾಸ ಸಾಹಿತ್ಯದ, ವಚನ ಸಾಹಿತ್ಯದ, ತತ್ವಪದ ಕಾರರ, ಸೂಫಿ ಸಂತರ ನೆಲ. ಇಲ್ಲಿನ ಗಾಳಿಗೆ ಇವೆಲ್ಲರ ಗಂಧವೂ ಪೂಸಿದೆ. ಅನೇಕ ಪ್ರಮಥರು ತಮ್ಮ ತಮ್ಮ ಪ್ರಯತ್ನದಿಂದಾಗಿ ಬೇರೆ ಬೇರೆ ಕಾಲಘಟ್ಟದಲ್ಲಿ ಕಂಡು ಕೊಂಡ ಈ ಸತ್ಯದ ನೆಲೆಗಳು ಈಗಿನ ಕಾಲದಲ್ಲಿಯೂ ಸಹವಾಸಿಗಳಾಗಿ ಇಲ್ಲಿ ಏಕ ಕಾಲಕ್ಕೆ ಜೀವಂತ ಇರುವುದು ಇಲ್ಲಿನ ವೈಶಿಷ್ಟ್ಯ. ʼನಾನು ಹೇಳುವುದಷ್ಟೇ ಸತ್ಯ, ನೀನು ಹೇಳುವುದು ಎಲ್ಲಾ ಸುಳ್ಳುʼ ಎನ್ನುವ ಭಾವನೆ ಇಲ್ಲಿ ಇಲ್ಲ. ʼನನ್ನ ಧರ್ಮ ನನಗೆ, ನಿಮ್ಮ ಧರ್ಮ ನಿಮಗೆ. ಇಬ್ಬರ ಹಾದಿ ಬೇರೆ ಇದ್ದೀತು, ಆದರೆ ನಮ್ಮ ನಡೆ ಅಧ್ಯಾತ್ಮದ ಎಡೆಗೆ’ ಎನ್ನುವ ಧೋರಣೆಯೇ ಇದೆ.

ನಾನು ಕಲ್ಯಾಣ ಕರ್ನಾಟಕದ ತುಂಬ ಓಡಾಡಿದ್ದೇನೆ. ಇಲ್ಲಿನ ಅಸಂಖ್ಯ ಸಂತರು. ಇವರಲ್ಲಿ ಕೆಲವರು ತುಂಬ ಜನಪ್ರಿಯತೆ ಗಳಿಸಿ ಈ ನಾಡಿನ ಆಚೆಗೂ ಪರಿಚಿತರಾಗಿದ್ದಾರೆ. ಅವರಿಗೆ ರಾಷ್ಟ್ರೀಯ- ಅಂತರ ರಾಷ್ಟ್ರೀಯ ಮಟ್ಟದ ಭಕ್ತರಿದ್ದಾರೆ. ಅಂತ ಕೆಲವರನ್ನು ಹೊರತುಪಡಿಸಿ ನೋಡಿದರೆ, ಇಲ್ಲಿ ಪ್ರತಿ ಹಳ್ಳಿ- ಹಳ್ಳಿಯಲ್ಲಿಯೂ ಗುರು ಪಂಥದ ಪ್ರತಿನಿಧಿಗಳು ಇದ್ದಾರೆ. ಸೂಫಿ ಸಂತರು- ದಾಸರು- ಶರಣರು- ತತ್ವಪದಕಾರರು, ಸ್ಥಳೀಯ ಶ್ರದ್ಧಾ ಕೇಂದ್ರದ ಗುರುಗಳು- ಪೀರರು, ಇದ್ದಾರೆ. ಹಿಂದೊಮ್ಮೆ ವಿದೇಶಿ ಪ್ರವಾಸಿಯೊಬ್ಬರು ನನ್ನನ್ನು ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ವೈಶಿಷ್ಟ್ಯ ಏನು? ಇಲ್ಲಿನ ಜೀವಂತ ಪರಂಪರೆ ಯಾವುದು ? ಅಂತ ಕೇಳಿದ್ದಾಗ ನಾನು “ಇದು ಮಲ್ಲಿಕಾರ್ಜುನ ಸ್ವಾಮಿ ದರ್ಗಾ ಹಾಗೂ ಖಾದರ ಲಿಂಗನಮಠ ಇರುವ ಭೂಮಿ. ಅವು ಕೇವಲ ಕಟ್ಟಡಗಳಾಗಿ ಉಳಿದಿಲ್ಲ. ಅವುಗಳ ಹಿಂದಿನ ತತ್ವಗಳನ್ನು ಜನ ಇಂದಿಗೂ ಉಸಿರಡುತ್ತಾರೆ. ಇದೇ ಇಲ್ಲಿನ ಜೀವಂತ ಪರಂಪರೆ’’ ಅಂತ ಹೇಳಿದ್ದೆ.
ಇಲ್ಲಿನ ಗುರು ಪಂಥ, ಅವರಿಗೆ ನಡೆದುಕೊಳ್ಳುವ ಶಿಷ್ಯರು, ವಿಶ್ವಾಸಿಕರ ಪ್ರಶ್ನಾತೀತ ಶ್ರದ್ಧೆ ಇವೆಲ್ಲವೂ ನನ್ನನ್ನು ಮೂಕನನ್ನಾಗಿ ಮಾಡಿದೆ. ನನ್ನ ಪ್ರಕಾರ ಗುರು ಪಂಥ ಎನ್ನುವುದೇ ಅಮೂರ್ತ ಪರಂಪರೆಯ ಪ್ರತೀಕಗಳಲ್ಲಿ ಒಂದು. ಹಾಗೆಂದು ಇದು ಕೇವಲ ಧಾರ್ಮಿಕ ವಿಷಯಗಳಿಗೆ ಸೀಮಿತ ಆಗಿಲ್ಲ. ಅದು ಒಂದು ಜೀವನ ಶೈಲಿಯಾಗಿ ರೂಪುಗೊಂಡು ಬಿಟ್ಟಿದೆ. ಇಲ್ಲಿನ ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪ, ಇಲ್ಲಿನ ಜನ ನಡೆದುಕೊಳ್ಳುವ ರೀತಿ, ಅವರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಆಚರಣೆಗಳು, ಇವೆಲ್ಲವುಗಳ ಮೇಲೆ ಈ ತತ್ವ -ಸಿದ್ಧಾಂತಗಳ ಪ್ರಭಾವ ಇದೆ. ಅಷ್ಟು ಅಲ್ಲದೆ, ಇಲ್ಲಿನ ಜನರ ರೀತಿ – ನೀತಿ- ಸೌಜನ್ಯ, ಭಾಷೆ, ಅವರ ನಾಡುವಳಿಕೆ ಎಲ್ಲರ ಮೇಲೆಯೂ ಈ ಅಧ್ಯಾತ್ಮದ ಪ್ರಭಾವಳಿಯ ಛಾಪು ಮೂಡಿದೆ.
ಬಸವಣ್ಣ ಹಾಗೂ ಇತರ ಶರಣರು ಮುನ್ನಡೆಸಿದ ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿ ಏಳು ನೂರಕ್ಕೂ ಹೆಚ್ಚು ಸಾಮಾನ್ಯರಲ್ಲಿ ಸಾಮಾನ್ಯರನ್ನು ಕವಿ ಹಾಗೂ ಸಂತರನ್ನಾಗಿಸಿತು. ಇವರು ಸಾಧಿಸಿ ತೋರಿದ ಧರ್ಮ ಮನುಕುಲದ ಕಣ್ಣು ತೆರೆಸಿತು. ಇಡೀ ವಿಶ್ವದ ಜನರ ಜಾತಿ, ಜನಾಂಗ, ಲಿಂಗ, ವರ್ಗ, ವರ್ಣ ಅಥವಾ ಇನ್ನು ಯಾವುದೋ ರೀತಿಯ ತಾರತಮ್ಯ ರಾಹಿತ್ಯದ ಬದುಕಿನ ಕನಸು ಕಾಣುವಂತೆ ಮಾಡಿತು.
ನನ್ನ ಪ್ರಕಾರ ಸಾಮ್ರಾಟ್ ಅಶೋಕನ ನೀತಿ ಸಂಹಿತೆ, ಪ್ರಾಚೀನ ಗ್ರೀಕ್ ನ ಹೆಲೆನ್ ಸಂಹಿತೆ, ಬುದ್ಧನ ಅನುಯಾಯಿ ಶಿಂತೊನ ಧಮ್ಮ ಸಮ್ಮಿತೆ, ಲಾ ಓತ್ಸು ನ ದಾವ ದಿ ಚಿಂಗ್, ಮೆಸಪಟೋಮಿಯದ ಹಮ್ಮುರಾಬಿಯ ಸಂಹಿತೆ, ಆಫ್ರಿಕಾದ ಯೋರುಬಾ ಮತ್ತು ಇತರ ಧರ್ಮಗಳಿಗೆ ಎಷ್ಟು ಸಾಂಸ್ಕೃತಿಕ ಮಹತ್ವ ಇದೆಯೋ, ಅಷ್ಟೇ ಮಹತ್ವ ಕಲ್ಯಾಣದಲ್ಲಿ ಹುಟ್ಟಿದ ಈ ಮಾನವೀಯ ಧರ್ಮಕ್ಕೆ ಇದೆ.
ಇಸ್ಲಾಂ ಧರ್ಮದ ಹಿನ್ನೆಲೆಯಿಂದ ಬಂದ ಸೂಫಿ ಸಂತರು ಧರ್ಮ ನಿರಪೇಕ್ಷವಾಗಿ ಯೋಚಿಸಿದವರು. ತಮ್ಮ ಬದುಕು ಹಾಗೂ ಬರವಣಿಗೆಯಿಂದ ಸರ್ವರ ಜೀವನ ಹಸನಾಗಲಿ ಎಂದು ಆಶಿಸಿದವರು. ಅವರು ತಮ್ಮ ಗದ್ಯ – ಪದ್ಯಗಳಲ್ಲಿ ಬಳಸಿದ ಅನೇಕ ನುಡಿಗಟ್ಟುಗಳನ್ನು ಕನ್ನಡ- ಉರ್ದು- ತೆಲುಗು- ಮರಾಠಿ ಮಾತಾಡುವ ಜನ ಸಮುದಾಯಗಳು ಇಂದಿಗೂ ಬಳಸುತ್ತಾರೆ.
ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿಗೂ ಜೀವಂತವಿರುವ ಶ್ರೀಮಂತ ದಾಸ ಪರಂಪರೆ ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಅತಿ ವಿಶಿಷ್ಟ ವಾದದ್ದು. ಐದಾರು ಶತಮಾನ ಗಳ ಹಿಂದೆ ವಿವಿಧ ಹಳ್ಳಿ – ಪಟ್ಟಣಗಳಲ್ಲಿ ಜೀವಿಸಿದ್ದ ದಾಸರು ಕೇವಲ ಕವಿ- ಹಾಡುಗಾರರಲ್ಲ. ಅವರು ತೀವ್ರ ಭಕ್ತಿ ಭಾವದ ಅಧ್ಯಾತ್ಮ ಜೀವಿಗಳು. ತಮ್ಮ ಸರಳ ಜೀವನ, ಉದಾತ್ತ ದರ್ಶನ ದಿಂದ ಜಗತ್ತಿಗೆ ತತ್ವಜ್ಞಾನದ ಪಾಠ ಮಾಡಿದವರು. ಅತಿ ಕ್ಲಿಷ್ಟ ಪಠ್ಯ ಸೂತ್ರಗಳನ್ನು ಸರಳ ಭಾಷೆಯಲ್ಲಿ ಹಾಡಿ ಸುಸೂತ್ರವಾಗಿಸಿದರು. ಜನ ಸಾಮನ್ಯರ ಭಾಷೆಯಾಗಿದ್ದ ಕನ್ನಡವನ್ನು ಬಳಸಿ ಅತ್ಯಂತ ಕಠಿಣ ಜಿಜ್ಞಾಸೆಯನ್ನು ತಿಳಿಸಿ ಕೊಟ್ಟವರು. ಸುಲಭವಾಗಿ ಕಂಠಪಾಠ ಮಾಡಬಲ್ಲ ದಾಸರ ಪದಗಳ ಮೂಲಕ ಸೃಷ್ಟಿಕರ್ತ ಹಾಗೂ ಮನುಷ್ಯರ ನಡುವೆ ಹಾಗೂ ಮನುಷ್ಯ – ಮನುಷ್ಯರ ನಡುವಿನ ಸಂಬಂಧಗಳ ಬಗ್ಗೆ ಸರ್ವ ಕಾಲಕ್ಕೂ ಸಲ್ಲ ಬಲ್ಲ ಸುಲಲಿತ ನಿಯಮಗಳನ್ನು ರೂಪಿಸಿದವರು.

ಹಿಂದೊಮ್ಮೆ ನಾನು ಒಂದು ಲೇಖನ ಬರೆಯುವಾಗ ಹಿರಿಯ ಕವಿ, ಜಾನಪದ ಸಂಶೋಧಕರಾಗಿದ್ದ ದೇಶಾಂಶ ಹುಡಗಿ ಅವರನ್ನು “ತತ್ವಪದಕಾರರು ಯಾವ ಊರಿನಲ್ಲಿ ಸಿಗುತ್ತಾರೆ ಸರ್?” ಎಂದು ಕೇಳಿದ್ದೆ. ಅವರು ಮುಗುಳು ನಗುತ್ತಾ “ತತ್ವಪದಕಾರರು ಯಾವ ಊರಾಗ ಸಿಗೋದಿಲ್ಲ ಅಂತ ಕೇಳರಿ” ಅಂತ ಹೇಳಿದ್ದರು. ಇಂದಿಗೂ ಕಲ್ಯಾಣ ಕರ್ನಾಟಕದ ಅಸಂಖ್ಯ ಹಳ್ಳಿಗಳಲ್ಲಿ ಇಂದಿಗೂ ತತ್ವಪದಗಳನ್ನು ಹಾಡುವವರು, ಬರೆಯುವವರು, ಸಿಗುತ್ತಾರೆ. ಈ ಜೀವಂತ ಪರಂಪರೆ ನಮ್ಮ ಬದುಕನ್ನು ಸಮೃದ್ಧಗೊಳಿಸುತ್ತಲೇ ಇದೆ.
ಬೀದರ್‌ನಿಂದ ಎರಡೇ ಕಿಲೋಮೀಟರ್ ದೂರ ಇರುವ ಅಷ್ಟೂರನ ನಾಗರಿಕರು ಎರಡು ಹಬ್ಬಗಳನ್ನು ಆಚರಿಸುತ್ತಾರೆ. ಅವು ಹದಿನಾಲ್ಕನೇ ಶತಮಾನದಲ್ಲಿ ಭಾರತದ ಬಹುಭಾಗವನ್ನು ಆಳಿದ, ದೊರೆ ಅಹ್ಮದ್ ಷಾ ಬೆಹಮನಿಯ ಜಯಂತಿ ಹಾಗೂ ಪುಣ್ಯತಿಥಿ.
ಬೀದರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಹತ್ತು ವರ್ಷಕ್ಕೂ ಮೀರಿ ಆಡಳಿತ ನಡೆಸಿದ, ತನ್ನ ರಾಜ್ಯವನ್ನು ದಖನ್ ಪ್ರಸ್ಥ ಭೂಮಿಯ ಆಚೆ ಬೆಳೆಸಿದ ಅಹ್ಮದ್ ಷಾ ತನ್ನ ಕೊನೆಗಾಲಕ್ಕೆ ಅಧ್ಯಾತ್ಮದ ರುಚಿ ಹಚ್ಚಿಸಿಕೊಂಡ. ಪರ್ಶಿಯಾದ ಧರ್ಮಗುರು ಮೊಹಮ್ಮದ್ ಕಲಿ ಉಲ್ಲಾ ಅವರನ್ನು ಬೀದರ್‌ಗೆ ಕರೆಸಿದ. ತನ್ನ ಹೆಸರಿಗೆ ʼವಲಿ’ (ಸಂತ) ಎನ್ನುವ ಪದ ಸೇರಿಸಿಕೊಂಡ, ತನ್ನ ಗುರುಗಳ ಗೋರಿಯ ಹತ್ತಿರ ತನ್ನ ಗೋರಿಯನ್ನು ತಾನೇ ನಿಂತ ಕಟ್ಟಿಸಿಕೊಂಡ. ಅಷ್ಟೂರಲ್ಲಿ ಇರುವ ವಲಿಯ ಗೋರಿ ಇಡೀ ಏಷ್ಯಾದ ದೇಶದಲ್ಲಿ ವೈಶಿಷ್ಟ್ಯವಾಗಿದೆ. ಅದರ ಹೊರ ಮೈಯಲ್ಲಿ ನೀಲಿ ಟೈಲ್ಸ್ ಹೊಂದಿಸಿರುವ, ಒಳಮೈಗೆ ಬಹುವರ್ಣದ ಚಿತ್ತಾರಗಳು ಇರುವ ಈ ಸ್ಮಾರಕವನ್ನು ಅಧ್ಯಯನ ಮಾಡಲು ಜಗತ್ತಿನ ಮೂಲೆ – ಮೂಲೆಯಿಂದ ಆಸಕ್ತರು ಬರುತ್ತಾರೆ.
ಈ ವಲಿಯ ಸಮಾಧಿಯನ್ನು ಇಲ್ಲಿನ ಜನ ಅಲ್ಲಮ ಪ್ರಭು ಗುಡಿ ಎಂದು ಕರೆಯುತ್ತಾರೆ. ಅದಕ್ಕೆ ಒಬ್ಬ ಹಿಂದೂ ಪೂಜಾರಿ, ಒಬ್ಬ ಮುಸ್ಲಿಂ ಮುತಾವಲ್ಲಿಗಳು ಇದ್ದಾರೆ. ಇದರ ಎದುರು ಇರುವ ರಾಜನ ರಾಣಿಯ ಸಮಾಧಿಯನ್ನು ಅಲ್ಲಮ ಪ್ರಭುವಿನ ಮಡದಿ ಮಾಯಿದೇವಿಯ ಗುಡಿ ಎಂದು ಕರೆಯುತ್ತಾರೆ. ಅಹ್ಮದ್ ಷಾನ ಹುಟ್ಟಿದ ದಿನವನ್ನು ಅಲ್ಲಮ ಪ್ರಭು ಜಯಂತಿ ಎಂದು ಹಿಗ್ಗಿನಿಂದ ಆಚರಿಸುತ್ತಾರೆ. ಊರ ಮುಂದಿನ ದೊಡ್ಡ ಜಾಗೆಯಲ್ಲಿ ಜಾತ್ರೆ ನಡೆಯುತ್ತದೆ. ಹಳ್ಳಿಯ ಪಾಟೀಲರ ಮನೆಯ ಹಿರಿಯರು ಜಾತ್ರಾ ಸಮಿತಿಯ ಅಧ್ಯಕ್ಷರಾಗುತ್ತಾರೆ. ಜಾತ್ರೆ ಯಲ್ಲಿ ಕುಸ್ತಿ- ಹಾಡು ಕುಣಿತ- ಮಕ್ಕಳ ಆಟದ ಸಾಮಾನುಗಳನ್ನು ಇರಿಸಲಾಗುತ್ತದೆ. ಪಕ್ಕದ ಕಲಬುರ್ಗಿಯ ಮಾಡಯಾಳ್ ಗ್ರಾಮದ ಶಿವಪ್ಪ ಒಡೆಯರ್ ಸ್ವಾಮೀಜಿ ಅವರು ಪಾದಯಾತ್ರೆಯಲ್ಲಿ ಬಂದು ಇಲ್ಲಿ ಕುಸ್ತಿ ಪಂದ್ಯ ಉದ್ಘಾಟಿಸಿದ ನಂತರ ಜಾತ್ರೆ ಆರಂಭ ಆಗುತ್ತದೆ.
ವಲಿಯ ಪುಣ್ಯತಿಥಿಯ ದಿವಸ ಉರುಸು ಆಯೋಜಿಸಲಾಗುತ್ತದೆ. ಹಳ್ಳಿಯ ಉರುಸು ಕಮಿಟಿಯಲ್ಲಿ ವಿವಿಧ ಧರ್ಮದ ಜನ ಇರುತ್ತಾರೆ. ಈ ಎರಡೂ ದಿನಗಳನ್ನು ಹಿಂದೂ – ಮುಸ್ಲಿಮರು ಒಟ್ಟಿಗೆ ಆಚರಿಸುತ್ತಾರೆ. ಜಾತ್ರೆ – ಉರುಸಿನ ದಿನಗಳಲ್ಲಿ ಒಂದು ಮೂಲೆಯಲ್ಲಿ ತತ್ವಪದ ಗಾಯನ ನಡೆಯುತ್ತಿದ್ದರೆ ಇನ್ನೊಂದು ಮೂಲೆಯಲ್ಲಿ ಕವಾಲಿ ಕಾರ್ಯಕ್ರಮ ನಡೆಯುತ್ತಾ ಇರುತ್ತದೆ. ಅಲ್ಲಿಗೆ ಹೋಗಿ ಬಂದವರಿಗೆ ಸಂತನ ಸಮಾಧಿಯ ಪಕ್ಕದ ಬಕುಲದ ಹೂವಿನ ಪರಿಮಳ, ಸ್ಮಾರಕಕ್ಕೆ ಲೇಪಿಸಿದ ಚಂದನ- ಆರತಿಯ ಕರ್ಪೂರ – ಲೋಬಾನ ಮಾತ್ರ ನೆನಪಿರುತ್ತದೆ. ಮತ – ಕುಲಗಳ ವ್ಯತ್ಯಾಸದ, ಮೇಲು ಕೀಳಿನ ಘಾಟು ಅವರ ಮೂಗಿಗೆ ಬಡಿಯುವುದಿಲ್ಲ. ದ್ವೇಷದ ಭಾವನೆ ಅಲ್ಲಿ ಸುಳಿಯುವುದಿಲ್ಲ.

ಹಿಂದೊಮ್ಮೆ ನಾವು ಬೀದರ್‌ನಲ್ಲಿ ಪಾರಂಪರಿಕ ಮ್ಯಾರಥಾನ್ ಆಯೋಜಿಸಿದಾಗ ಅಲ್ಲಿಗೆ ಬಂದ ದೆಹಲಿಯ ಪ್ರವಾಸಿಯೊಬ್ಬರು ಗುರುದ್ವಾರದ ರಸ್ತೆ ಕೇಳಿದರು. ನಾನು ನಿಮಗೆ ಯಾವುದು ಬೇಕು- ಗುರು ನಾನಕ ಅವರದೋ, ಸಾಹಿಬ್ ಸಿಂಗ್ ಅವರದೋ ಅಥವಾ ಮಾಯಿ ಭಾಗೋ ಅವರದೋ ಅಂತ ಕೇಳಿದೆ. ಅವರಿಗೆ ಆಶ್ಚರ್ಯವಾಗಿ ಈ ಸಣ್ಣ ಊರಿನಲ್ಲಿ ಮೂರು ಗುರುದ್ವಾರ ಇವೆಯಾ ಅಂತ ಗಾಬರಿ ಹಾಗೂ ಸಂತೋಷದಿಂದ ಕೇಳಿದರು. ಇದು ಅನೇಕರಿಗೆ ಗೊತ್ತಿಲ್ಲ. ಸುಮಾರು ಐದು ನೂರು ವರ್ಷ ಹಿಂದೆ ತಮ್ಮ ದಕ್ಷಿಣಾಪಥದ ಯಾತ್ರೆಯಲ್ಲಿ ಗುರು ನಾನಕರು ನಾಂದೇಡ್‌ದಿಂದ ಇಲ್ಲಿಗೆ ಬಂದಿದ್ದರು ಎನ್ನುವ ನಂಬಿಕೆ ಇದೆ. ಅವರು ಬಂದಾಗ ಬರಗಾಲ ಬಿದ್ದಿತ್ತು. ಗುರುಗಳು ತಮ್ಮ ಕಾಲು ಬೆರಳಿನಿಂದ ಒಂದು ಕಲ್ಲು ಸಾರಿಸಿದಾಗ ಅಲ್ಲಿಂದ ಸಿಹಿ ನೀರಿನ ಝರಿ ಹರಿಯಿತು ಎಂದು ಆಸಕ್ತರು ನಂಬುತ್ತಾರೆ. ನಗರ ಬಸ್ ನಿಲ್ದಾಣದ ಎದುರು ಗುರುದ್ವಾರ ಇದೆ. ಗುರು ನಾನಕ ಝೀರಾ ಈಗಲೂ ಹರಿಯುತ್ತಿದೆ.
ಅಂತೆಯೇ, ಸುಮಾರು ಮೂರು ನೂರು ವರ್ಷದ ಹಿಂದೆ ಸಾಹಿಬ್ ಚಂದ ಎನ್ನುವ ಸವಿತಾ ಸಮಾಜದ ಬಾಲಕ ಇಲ್ಲಿಂದ ಪಂಜಾಬಿನ ಆನಂದಪುರ ಸಾಹಿಬ್ ನಗರಕ್ಕೆ ಹೋಗಿ ಗುರು ಗೋವಿಂದ ಸಿಂಗ್ ಅವರ ಕರೆಗೆ ಓಗೊಟ್ಟು ಖಾಲಸಾ ಪಂಥ ಸೇರಿದ ಎನ್ನುವ ನಂಬಿಕೆಯೂ ಇದೆ.
ಇವರ ನೆನಪಿನಲ್ಲಿ ಬೀದರ್- ನಾಂದೇಡ್ ರಸ್ತೆಯಲ್ಲಿ ಸಾಹಿಬ್ ಸಿಂಗ್ ಗುರುದ್ವಾರ ಇದೆ. ಬೀದರ್ ಹಾಗೂ ಮಾಯಿ ಭಾಗೋ ಅವರ ನಂಟಿಗೆ ಐತಿಹಾಸಿಕ ಪುರಾವೆ ಇದೆ. ಗುರು ಗೋವಿಂದ ಸಿಂಗ್ ಅವರ ಮಹಿಳಾ ರಕ್ಷಣಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಮಾಯಿ ಭಾಗೋ ಅವರು ನಾಂದೇಡ್ ಯುದ್ಧದಲ್ಲಿ ತಮ್ಮ ಸಂಬಂಧಿಕರೆಲ್ಲರನ್ನೂ ಕಳೆದುಕೊಂಡು ಬೀದರ್ ಹತ್ತಿರದ ಜೈನ ಕುಟುಂಬಗಳು ಹೆಚ್ಚಾಗಿದ್ದ ʼಜಿನಾವಾಡ’ಕ್ಕೆ ಬರುತ್ತಾರೆ. ಅಲ್ಲಿ ಒಬ್ಬರ ಮನೆಯಲ್ಲಿ ಇದ್ದುಕೊಂಡು ತಮ್ಮ ಉಳಿದ ಜೀವನವನ್ನು ವೈರಾಗ್ಯ – ಅಧ್ಯಾತ್ಮದಲ್ಲಿ ಕಳೆಯುತ್ತಾರೆ. ಅವರು ಇದ್ದ ಮನೆಯನ್ನು ಈಗ ಗುರುದ್ವಾರವಾಗಿ ಪರಿವರ್ತಿಸಲಾಗಿದೆ.
ಹೈದರಾಬಾದ್ ನಿಂದ ಸುಮಾರು 1890 ರ ಸುಮಾರಿಗೆ ಕ್ರಿಶ್ಚಿಯನ್ ಮಿಷಿನರಿಗಳು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಕಡೆ ಬಂದರು. ಅದು ಇನ್ನೂ ನಿಜಾಮರ ಪ್ರದೇಶ ಆಗಿತ್ತು. ಆಗ ಅವರು ಮೊದಲು ಉಳಿದುಕೊಂಡಿದ್ದು, ಬೀದರಿನ ಒಬ್ಬ ಮುಸ್ಲಿಂ ವರ್ತಕರ ಮನೆಯಲ್ಲಿ. ಆ ಮಿಷಿನರಿಗಳು 1892ರಲ್ಲಿ ಇಡೀ ಪ್ರದೇಶದ ಮೊದಲ ಕನ್ನಡ ಶಿಕ್ಷಕ ತರಬೇತಿ ಕೇಂದ್ರ ಶುರು ಮಾಡಿದರು. ಕನ್ನಡ ಕಲಿಕೆಗೆ ಅನುಕೂಲ ಆಗಲು ಕೈ ಬರಹದ ಪಠ್ಯ ಪುಸ್ತಕ ಮಾಡಿದರು. ಇಂದಿಗೂ ಸೇಂಟ್ ಜೋಸೆಫ್ ಶಾಲೆಯ ಹಾಗೂ ಹಬಶಿ ಕೋಟೆಯ ಸೂರ್ಯೋದಯದ ಗುಹಾಂತರ್ಗತ ಚರ್ಚಿನ ವಾರ್ಷಿಕೋತ್ಸವ ಆರಂಭ ಆಗುವುದು ಆ ವರ್ತಕರ ಮನೆಯ ಅಂಗಳದಿಂದ.
ಹುಟ್ಟಿನಿಂದ ಮುಸ್ಲಿಮನಾಗಿ ಕೊನೆಗೆ ಹರಿದಾಸನಾಗಿ ಮಾರ್ಪಟ್ಟ ಗೋನವಾರದ ಬಡೆ ಸಾಬನ ನಾಡು ಇದು. ಮಂತ್ರಾಲಯ ಮಠಕ್ಕೆ ಅನುದಾನ ನೀಡಿದ, ರಾಘವೇಂದ್ರ ಸ್ವಾಮಿಗಳ ಪಾಂಡಿತ್ಯವನ್ನು ಮೆಚ್ಚಿ ಅವರೊಂದಿಗೆ ಅನ್ಯೋನ್ಯ ಸಂಬಂಧ ಬೆಳೆಸಿದ, ಆದೋನಿ ನವಾಬರ ನಾಡು.
ಇಲ್ಲಿನ ಇಂಡೋ ಸಾರ್ಸೇನಿಕ್ ವಾಸ್ತುಶಿಲ್ಪ ಶೈಲಿ ತನ್ನ ಗಾಢ ಛಾಯೆಯನ್ನು ಎಲ್ಲ ಕಡೆ ಬೀರಿದೆ. ಮಂತ್ರಾಲಯವೂ ಸೇರಿದಂತೆ ಇಲ್ಲಿನ ಅನೇಕ ಮುಸ್ಲಿಮೇತರ ಸಂತರ ಬೃಂದಾವನ, ಸಮಾಧಿ, ಸ್ಮಾರಕ, ಆಲಯ, ಮನೆ ಇತ್ಯಾದಿಗಳಲ್ಲಿ ಈ ವಸ್ತು ಶಿಲ್ಪದ ಪ್ರಭಾವ ಕಾಣಬಹುದು.
ಎಲ್ಲಾ ರೀತಿಯ ತತ್ವ- ಆದರ್ಶ- ಸಿದ್ಧಾಂತಗಳನ್ನು ಅರಿತು ಕೊಂಡು ತಮ್ಮ ಭಕ್ತರಿಗೆ ಅವೆಲ್ಲದರ ರಸಸ್ವಾದ ಉಣಿಸಿದ ಸಕಲ ಮತಾಚಾರ್ಯ ಮಾಣಿಕ ಪ್ರಭು ಮಹಾರಾಜರು ಹುಮಾನಬಾದ್‌ನಲ್ಲಿ ತೆರೆದ ಬಾಗಿಲ ಆಶ್ರಮ ಕಟ್ಟಿದ್ದಾರೆ. ಪ್ರತಿ ವರ್ಷ ದತ್ತ ಜಯಂತಿಯನ್ನು ಎಷ್ಟು ವಿಜ್ರಂಭಣೆಯಿಂದ ಅಚ್ಚರಿಸುತ್ತಾರೋ, ಅಷ್ಟೇ ಶ್ರದ್ಧಾ ಭಕ್ತಿಯಿಂದ ಸೂಫಿ ಸಂತ ಮೆಹಬೂಬ್ ಸುಬಾನಿಯ ಗ್ಯಾರಾಹವಿಯನ್ನು ಆಚರಿಸುತ್ತಾರೆ. ಮಾಣಿಕ ನಗರದಲ್ಲಿ ಆ ಸೂಫಿ ಸಂತನ ಸ್ಮಾರಕವನ್ನು ಜತನದಿಂದ ರಕ್ಷಿಸಿ ಇಟ್ಟಿದ್ದಾರೆ.
ಇಳಿ ವಯಸ್ಸಿನಲ್ಲಿ ಕಲಬುರ್ಗಿಗೆ ಬಂದು ಇಲ್ಲಿನ ಭಾಷೆಯಲ್ಲಿ ಸಾಹಿತ್ಯ ರಚಿಸಿ, ಸಾಮ್ರಾಟ್‌ನಿಗೂ, ಸಾಮಾನ್ಯರಿಗೂ ದಾರಿ ತೋರಿದ, ʼಪ್ರೀತಿಗೂ ಮುಂದೆ ಯಾವುದೇ ಸಿದ್ಧಾಂತ ಇಲ್ಲʼ ಎಂಬಂತೆ ಬದುಕಿದ ಖಾಜಾ ಬಂದೇ ನವಾಜರು ಹೇಳಿದ ಮಾತು ಒಂದನ್ನು ಇಲ್ಲಿ ನೆನಪಿಸುತ್ತೇನೆ.
“ಪಾನಿ ಮೇ ನಮಕ ಡಾಲ, ಔರ ದೇಖ ಉಸೆ. ಪಾನಿ ಮೇ ನಮಕ ಘುಲ್ ಜಾಯೆಗಾ ತೋ ನಮಕ ಕಹೆಂ ಕಿಸೆ?’’ (ನೀರಿನಲ್ಲಿ ಉಪ್ಪು ಹಾಕು. ನೀರಿನಲ್ಲಿ ಅದು ಕರಗಿದ ಮೇಲೆ ಉಪ್ಪು ಅಂತ ಕರೆಯುವುದು ಯಾವುದನ್ನು?)

ಯಾದಗಿರಿ ಜಿಲ್ಲೆ ಸುರಪುರ ಹತ್ತಿರದ ತಿಂಥಣಿ ಮನೇಶ್ವರನ ಆಲಯದಲ್ಲಿ ಬೆಳಿಗ್ಗೆನ ಪ್ರಾರ್ಥನೆ ʼಏಕ ಲಾಖಯಸ್ಸಿ ಹಜಾರ ಪಾಂಚೊ ಪೀರ್ ಪೈಗಂಬರ ಮೌನಾಧೀನ ಕಾಶಿಪತಿ ಗಂಗಾಧರ ಹರ ಹರ ಮಹಾದೇವ್ʼ ಎಂದು ಆರಂಭವಾಗುತ್ತದೆ. ಈ ಶ್ಲೋಕ ಮೌನೇಶ್ವರನ ಸ್ವರೂಪದ ಬಗ್ಗೆ ತಿಳಿಸಿದಷ್ಟೇ, ಅವನ ಭಕ್ತರ ಮನಸ್ಸಿನ ಆಳದ ಬಗೆಗೂ ತಿಳಿಸುತ್ತದೆ.
ಐದು ಶತಮಾನಗಳ ಹಿಂದೆ ಸಮಾನತೆಯ ಸಂದೇಶ ಸಾರುವ ಒಂದು ಲಕ್ಷ 96 ಸಾವಿರ ವಚನ ಬರೆದ, ʼಬಜಾರದಾಗ ಹಸಿರು ಪಲ್ಲಕ್ಕಿ ಮೆರದ’ ಬಸವಣ್ಣ ನೆಲೆಸಿದ ಕೊಡೆಕಲ್, ಸಕಲ ಧರ್ಮಿಯರನ್ನು ಆಕರ್ಷಿಸುತ್ತದೆ.
ಇಂಡೋ ಸಾರಸೇನಿಕ ವಸ್ತು ಶಿಲ್ಪದ ಮಠದಲ್ಲಿ ಇರುವುದು ಸಾವಳಗಿ ಶಿವಲಿಂಗನ ಸನ್ನಿಧಿ. ಬಂದೇ ನವಾಜರ ಸಹವಾಸ – ಸಾಂಸ್ಕೃತಿಕ ಸ್ನೇಹ ಹೊಂದಿದ್ದ ಶಿವಲಿಂಗೇಶ್ವರರು ಅಧ್ಯಾತ್ಮ ಎನ್ನುವುದು ಧರ್ಮದ ಎಲ್ಲೆಗಳನ್ನು ಮೀರಿದ್ದು. ಅದನ್ನು ಕೇವಲ ಪ್ರವಾದಿಗಳು, ಸಂತರು ಮಾತ್ರ ಸಾಧಿಸಿದರೆ ಸಾಲದು. ಎಲ್ಲರೂ ಸಾಧಿಸಬೇಕು ಎಂದು ತಿಳಿ ಹೇಳಿದರು.
ಕಲಬರುಗಿಯ ನಾರಾಯಣಪುರ ಹತ್ತಿರ, ಕೃಷ್ಣಾ ನದಿ ದಂಡೆಯ ಮೇಲೆ ಇರುವ ಛಾಯಾ ಭಗವತಿ, ಬೌದ್ಧ ತಾಂತ್ರಿಕ ಪಂಥದ ನೆಲೆ. ಇಡೀ ವಿಶ್ವದಲ್ಲಿಯೇ ವಿಶಿಷ್ಟವಾದ ಸಾಮ್ರಾಟ್ ಅಶೋಕ ಚಕ್ರವರ್ತಿಯ ಹೆಸರು ಹಾಗೂ ಚಿತ್ರ ಇರುವ ಶಿಲ್ಪ ಸನ್ನತಿಯಲ್ಲಿ ಸಿಕ್ಕಿದೆ. ಇಲ್ಲಿ ಬರೆದಿರುವ ರಾಯಾ ಅಸೋಕ ಎನ್ನುವ ಒಂದು ಸಾಲು ವಿಶ್ವದ ಮೂಲೆ ಮೂಲೆಯಿಂದ ಸಂಶೋಧಕರನ್ನು ಸೆಳೆಯುತ್ತದೆ. ಅದು ಕೇವಲ ಬೌದ್ಧ ಧರ್ಮದ ಬಗ್ಗೆ ಅಲ್ಲ, ಭಾರತದ ಭಾಷಾ ಬೆಳವಣಿಗೆಯ ಬಗ್ಗೆ ಸಹಿತ ನಮ್ಮ ಕಣ್ಣು ತೆರೆಸುತ್ತದೆ. ಬೀದರನಲ್ಲಿ ಕಮಠಾಣ. ಗುಲಬರ್ಗಾದ ಮಳಖೇಡ. ಪಟ್ಟಣ, ಹರಸೂರ, ಹೆಬ್ಬಾಳ, ಹುಣಸಿ ಹಡಗಿಲಗಳಲ್ಲಿ ಜೈನ ಪರಂಪರೆ ಕಾಣುತ್ತೇವೆ.

ಇವು ಕೇವಲ ಕೆಲವು ಉದಾಹರಣೆಗಳು ಅಷ್ಟೇ. ಇಂತಹ ಧರೆಗೆ ದೊಡ್ಡವರು, ನಮ್ಮೆಲ್ಲರ ಬದುಕನ್ನು ಹಸನು ಮಾಡಿದವರು ಪ್ರತಿ ಹಳ್ಳಿ- ಪಟ್ಟಣ ಶಹರಗಳಲ್ಲಿ ಇದ್ದಾರೆ. ದ್ವೇಷದ ಕೊರೆವ ಚಳಿ ನಮಗೆ ತಾಕದಂತೆ ನಮ್ಮನ್ನು ತಮ್ಮ ತೊಡೆಯ ಮೇಲೆ ಕೂಡಿಸಿಕೊಂಡು ತಮ್ಮ ದಪ್ಪ ಕಂಬಳಿಯಿಂದ ನಮ್ಮನ್ನು ಮುಚ್ಚಿಕೊಂಡಿದ್ದಾರೆ. ದಾವಾನಿಲದ ಬೇಗೆಯಿಂದ ನಮ್ಮನ್ನು ತಪ್ಪಿಸಿದ್ದಾರೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಧಾರ್ಮಿಕ ಪರಂಪರೆಯ ಜನರನ್ನು ನಾವು ಕಾಣುತ್ತೇವೆ. ರಾಜ್ಯದ – ದೇಶದ ಇತರ ಕಡೆಗಳಿಗೆ ಹೋಲಿಸಿದರೆ ಇಲ್ಲಿ ಕೋಮು ಗಲಭೆಗಳು, ದ್ವೇಷ, ಅಸಹಿಷ್ಣುತೆ ಕಂಡು ಬರುವುದು ಕಮ್ಮಿ.
ಬೀದರ್ ಜಿಲ್ಲೆಯ ಇತಿಹಾಸ ತಜ್ಞ ಡಾ ಬಿ ಆರ್ ಕೊಂಡಾ ಅವರು ʼನಾವು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಿಂದೆ ಉಳಿದಿರಬಹುದು. ಆದರೆ ಸಾಂಸ್ಕೃತಿಕವಾಗಿ ಬಹಳ ಮುಂದುವರೆದಿದ್ದೇವೆ’ ಎಂದು ಹೇಳುತ್ತಿದ್ದರು. ಕಲ್ಯಾಣ ಕರ್ನಾಟಕದ ಈ ಸಾತ್ವಿಕ ಗುಣವನ್ನು ನಾವು ಕಷ್ಟಪಟ್ಟಾದರೂ ಕಾಯ್ದುಕೊಳ್ಳಬೇಕು. ಆದರೆ ಶಹರದ ಥಳುಕಿಗೆ, ಅತಿ ಶಿಕ್ಷಿತರ – ಬುದ್ಧಿವಂತರ ಬಣ್ಣದ ಬದುಕಿಗೆ ಮನಸೋತ ನಾವು ನಮ್ಮತನವನ್ನು ಮರೆಯುತ್ತಿದ್ದೇವೆ. ಈ ಕಣ್ಕಟ್ಟು ನಮ್ಮ ಕಣ್ಣು ಮುಂದೆ ಕತ್ತಲೆ ಮೂಡಿಸದಂತೆ ನಾವು ಎಚ್ಚರ ವಹಿಸಬೇಕು.
ʼಅಪಿ ಸ್ವರ್ಣಮಯೀ ಲಂಕಾ, ನಮೇ ಲಕ್ಷಣ ರೋಚತೆ,
ಜನನೀ ಜನ್ಮ ಭೂಮಿ ಶ್ಚ ಸ್ವರ್ಗಾದಪೀ ಗರೀಯಸಿ’
ಉತ್ತರ ರಾಮಾಯಣದಲ್ಲಿ ತನ್ನ ಊರಿನ ಮಣ್ಣಿನ ವಾಸನೆಯ ಬಗ್ಗೆ ಲಕ್ಷ್ಮಣನಿಗೆ ಪ್ರೀತಿಯ ಈ ಪಾಠ ಹೇಳಿದ ಶ್ರೀ ರಾಮನ ಆದರ್ಶ ನಮ್ಮೆಲ್ಲರನ್ನೂ ಕಾಯಲಿ. ಮಹಾನಗರಗಳ ಅತಿ ಜಾಣ್ಮೆ ಹಾಗೂ ಜಾಳು ಶ್ರೀಮಂತಿಕೆಯನ್ನು ಧಿಕ್ಕರಿಸಿ ನಮ್ಮ ಅಸ್ಮಿತೆಯ ಬಗ್ಗೆ ಹೆಮ್ಮೆ ಹೊಂದುವಂತೆ ನಮ್ಮ ಧೀಶಕ್ತಿ ನಮ್ಮನ್ನು ಪ್ರೇರೇಪಿಸಲಿ.
ಇದನ್ನೂ ಓದಿ ಈ ದಿನ ಸಂಪಾದಕೀಯ | ‘ಅಗ್ನಿವೀರ’ ಯೋಜನೆ ಟೊಳ್ಳೆಂದು ಸಾರಿದೆ ಇಸ್ರೇಲ್ ಯುದ್ಧ!
ನಿಡು ಜಡೆಯ ಒಡತಿ ತನ್ನ ಕೂದಲ ಕುಚ್ಚ ನ್ನು ಕಡೆಗಣಿಸಿ ನಡೆವಂತೆ ಸ್ವಾತಂತ್ರ್ಯಾನಂತರದ ವಿವಿಧ ಸರಕಾರಗಳು ಈ ಪ್ರದೇಶವನ್ನು ನಿರ್ಲಕ್ಷಿಸಿವೆ. ಇದು ಕೇವಲ ಭೌತಿಕ ಅಭಿವೃದ್ಧಿಗೆ ಸೀಮಿತವಾದ ಮಾತಲ್ಲ. ಇಲ್ಲಿನ ಶ್ರೀಮಂತ ಪರಂಪುರೆಯ ಸ್ವರೂಪವನ್ನು ಕಾಯ್ದುಕೊಳ್ಳುವ ಅಗತ್ಯದ ನೆನಹು ಕೂಡ ಹೌದು. ಸರ್ವ ರೂಪಿ ಅಧಿಕಾರದ ಕೇಂದ್ರವಾದ ರಾಜಧಾನಿಗೆ ಈ ಭಾಗ ಕೇವಲ ಭೂಪಟದ ಮೇಲಿನ ಚುಕ್ಕೆಯಂತೆ ಕಾಣದೇ ಇರುವಂತೆ, ಅಲ್ಲಿನವರು ಇಲ್ಲಿನ ಆಳವಾದ ಜೀವಂತಿಕೆ ಹಾಗೂ ಸೌಹಾರ್ದವನ್ನು ಗುರುತಿಸಿ, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ನಾವು ಬದುಕಿ ತೋರಿಸೋಣ, ಮುಂದಿನ ಹೆಜ್ಜೆ ಇಡೋಣ ಎಂದು ಆಶಿಸುತ್ತೇನೆ.

ಹೃಷಿಕೇಶ ಬಹದ್ದೂರ ದೇಸಾಯಿ
ಪತ್ರಕರ್ತರು
ಮಾನವೀಯ ಸಂಬಂಧಗಳನ್ನು ಬೆಸೆಯಲು, ಜೀವನ ಪ್ರೀತಿಯನ್ನು ಹೆಚ್ಚಿಸಲು ಇಲ್ಲಿಯ ವಿಚಾರಗಳು ಪೂರಕವಾಗಿವೆ.