ಉದ್ಯಮದಲ್ಲಿ ಪಾಲುದಾರಳಾಗಿದ್ದ ಮಹಿಳೆಯೊಬ್ಬರು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ, ಉದ್ಯಮಿಯೊಬ್ಬರನ್ನು ಅಪಹರಿಸಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಉದ್ಯಮಿಯನ್ನು ಪೊಲೀಸರು ರಕ್ಷಿಸಿದ್ದಾರೆ.
ಅಭಿಲಾಷ್ ದಾಮೋದರನ್ ಅಪಹರಣಕ್ಕೊಳಗಾದವರು. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಭಿಲಾಷ್ ಅವರು ಕೋಮಲ್ ಎಂಬುವವರೊಂದಿಗೆ ಉದ್ಯಮ ನಡೆಸುತ್ತಿದ್ದರು. ಇಬ್ಬರ ನಡುವೆ ನಡೆದ ಒಂದೂವರೆ ಕೋಟಿ ವ್ಯವಹಾರದಲ್ಲಿ ಕೆಲವು ಸಮಸ್ಯೆ ಉಂಟಾಗಿತ್ತು. ಇದರಿಂದ ಕೋಪಗೊಂಡಿದ್ದ ಕೋಮಲ್ ತನ್ನ ಎಂಟು ಜನ ತಂಡದೊಂದಿಗೆ ಅ.20 ರಂದು ರಾತ್ರಿ ಅಭಿಲಾಷ್ ಸಂಪಿಗೆಹಳ್ಳಿಯ ಮನೆಯ ಬಳಿ ಇದ್ದಾಗ ಅವರನ್ನು ಅಪಹರಿಸಿ ರಾಮಮೂರ್ತಿ ನಗರದ ಗೋಡಾನ್‌ನಲ್ಲಿ ಬಚ್ಚಿಟ್ಟಿದ್ದರು.
ಈ ವೇಳೆ, ಅಭಿಲಾಷ್ ಅವರ ಕುತ್ತಿಗೆಗೆ ಚಾಕು ಇಟ್ಟು, ಗನ್ ತೋರಿಸಿ ಹಣ ನೀಡುವಂತೆ ಬೆದರಿಸಲಾಗುತ್ತಿತ್ತು. ಈ ವೇಳೆ, ₹50 ಲಕ್ಷ ಹಣವನ್ನು ನೀಡುವಂತೆ ಧಮ್ಕಿ ಹಾಕಿದ್ದರು. ಜತೆಗೆ ಅಭಿಲಾಷ್ ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿದ್ದರು. ಅಲ್ಲದೇ, ಅಭಿಲಾಷ್ ಅವರ ಪತ್ನಿ ಮತ್ತು ತಂದೆಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು.
ಎಂಟು ಜನ ಆರೋಪಿಗಳು ಊಟಕ್ಕೆ ತೆರಳಿದಾಗ, ಅವರ ಫೋನ್ ಬಳಸಿ ಅಭಿಲಾಷ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ತಕ್ಷಣ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿ, ಅಕ್ಟೋಬರ್ 21ರಂದು ಬೆಳಗ್ಗೆ ಅಭಿಲಾಷ್ನನ್ನು ರಕ್ಷಿಸಿದರು.
ಈ ಸುದ್ದಿ ಓದಿದ್ದೀರಾ? ಹುಲಿ ಉಗುರು | ವರ್ತೂರು ಸಂತೋಷ್ ಬಳಿಕ ದರ್ಶನ್, ವಿನಯ್ ಗುರೂಜಿ ವಿರುದ್ಧ ದೂರು ದಾಖಲು
ಇದೇ ವೇಳೆ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಇನ್ನು ಕೋಮಲ ಮತ್ತಿತರ ಕೆಲ ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ, ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.