ಈ ದಿನ ಸಂಪಾದಕೀಯ | ‘ಅಗ್ನಿವೀರ’ ಯೋಜನೆ ಟೊಳ್ಳೆಂದು ಸಾರಿದೆ ಇಸ್ರೇಲ್ ಯುದ್ಧ!

Date:

Advertisements
ಅಗ್ನಿವೀರರ ನೇಮಕ ಕುರಿತು ಮಿಲಿಟರಿ ತಜ್ಞರು ಈ ಕ್ರಮದ ಕುರಿತು ಆಶ್ಚರ್ಯಾಘಾತ ಪ್ರಕಟಿಸಿದ್ದರು. ಮಿಲಿಟರಿ ನೇಮಕಾತಿಯನ್ನು ಮಾತ್ರವಲ್ಲದೆ ಯೋಧನೊಬ್ಬ ಹೇಗಿರಬೇಕೆಂಬ ಮಿಲಿಟರಿ ಗೊತ್ತುಗುರಿಗಳನ್ನೇ ಈ ಯೋಜನೆ ಬುಡಮೇಲು ಮಾಡಲಿದೆ ಎಂಬುದು ಅವರ ಆತಂಕವಾಗಿತ್ತು.


‘ಹಾರೆಟ್ಜ್’
ಎಂಬುದು ನೂರು ವರ್ಷಗಳಿಗೂ ಹೆಚ್ಚು ಹಳೆಯದಾದ ಇಸ್ರೇಲಿ ಪತ್ರಿಕೆ. ಇಂಗ್ಲಿಷ್ ಮತ್ತು ಹೀಬ್ರೂ ಭಾಷೆಯಲ್ಲಿ ಪ್ರಕಟವಾಗುತ್ತದೆ. ಕೆಲ ದಿನಗಳ ಹಿಂದೆ ಈ ಪತ್ರಿಕೆ ವಿಶೇಷ ವರದಿಯೊಂದನ್ನು ಮುಖಪುಟದಲ್ಲಿ ಪ್ರಧಾನವಾಗಿ ಪ್ರಕಟಿಸಿತು. ತಲೆಬರೆಹದ ಕನ್ನಡ ಅನುವಾದ ಹೀಗಿದೆ- ಇಸ್ರೇಲು ಕಾವಲು ಬತೇರಿಯಲ್ಲಿ ವರ್ಷಗಟ್ಟಲೆ ಮಲಗಿ ನಿದ್ರಿಸುತ್ತಿತ್ತು; ಆಗ ಸ್ಫೋಟಿಸಿತು ಸಂಘರ್ಷ. ಇದೇ ಅಕ್ಟೋಬರ್ ಏಳರಂದು ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಗರೆದಿತ್ತು ಹಮಾಸ್. 1200ರಿಂದ 1500ರಷ್ಟು ಹಮಾಸ್ ಯೋಧರು ಗಾಝಾದಿಂದ ಹನ್ನೆರಡು ತಾವುಗಳಲ್ಲಿ ಇಸ್ರೇಲಿಗೆ ನುಗ್ಗಿ ತಾಸುಗಟ್ಟಲೆ ಅಲ್ಲಿ ದಾಳಿನಿರತರಾಗಿದ್ದರು. ಇಸ್ರೇಲ್ ಸೈನ್ಯ ಅಸಹಾಯಕವಾಗಿತ್ತು.

ಪ್ರಪಂಚದಲ್ಲೇ ಅತ್ಯಧಿಕ ಮಾನಸಮ್ಮಾನ ಗಳಿಸಿದ್ದ ಸೇನೆ ಇಸ್ರೇಲಿನದು. ಅದರ ಕಣ್ಗಾವಲು, ವಿಚಕ್ಷಣೆ, ಶಕ್ತಿ ಸಾಮರ್ಥ್ಯಗಳು ಬೆರಗು ಬಡಿಸುವ ಎಚ್ಚರ ಮತ್ತು ಕಾರ್ಯದಕ್ಷತೆಗೆ ಇತ್ತೀಚಿನ ತನಕ ಹೆಸರಾಗಿದ್ದವು. ನಿದ್ರಿಸುತ್ತಿದ್ದಾಗಲೂ ಎಚ್ಚರವಿರುತ್ತದೆಂದು ಎಂದು ಇಸ್ರೇಲಿ ಸೇನೆಯನ್ನು ಬಣ್ಣಿಸಲಾಗುತ್ತಿತ್ತು. ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಮೊಸಾದ್‌ ಗೂ ಇವೇ ಮಾತುಗಳು ಅನ್ವಯಿಸುತ್ತಿದ್ದವು. ಇತ್ತೀಚಿನ ಹಮಾಸ್ ದಾಳಿ ಈ ಮಿಥ್ಯೆಯ ಗುಳ್ಳೆಯನ್ನು ಒಡೆದಂತೆ ತೋರುತ್ತಿದೆ. ತನ್ನ ಮೇಲೆ ಪ್ರಯೋಗಿಸಲಾಗುವ ಶೇ.90ರಷ್ಟು ಕ್ಷಿಪಣಿಗಳು ಭೂಸ್ಪರ್ಶ ಮಾಡಲು ಬಿಡದೆ ಅಂತರಿಕ್ಷದಲ್ಲೇ ಹೊಡೆದು ನಿರಸ್ತಗೊಳಿಸುವ ತಂತ್ರಜ್ಞಾನ ಕೂಡ ಕೆಲಸಕ್ಕೆ ಬರಲಿಲ್ಲ. ಹಮಾಸ್ ಯೋಧರು ಗಾಝಾದ ಉದ್ದಕ್ಕೆ ನಿರ್ಮಿಸಿದ್ದ ತಡೆಗೋಡೆಗಳನ್ನು ಹತ್ತಿ ಇಸ್ರೇಲಿ ನೆಲಕ್ಕೆ ಇಳಿದರೂ ಆ ದೇಶದ ಎಚ್ಚರಿಕೆಯ ಗಂಟೆಗಳು ಮೊಳಗಲಿಲ್ಲ.

ಗಾಝಾ ಪಟ್ಟಿಯ ಉದ್ದಕ್ಕೆ ಮೂರು ಲಕ್ಷ ಸೈನಿಕರನ್ನು ಹೂಡಿ ಹದಿನೈದು ದಿನಗಳಾದರೂ ಹಮಾಸ್ ಮೇಲೆ ನಿಯಂತ್ರಣ ಸಾಧಿಸಲು ಅಸಮರ್ಥವಾಗಿದೆ ಇಸ್ರೇಲು. ಒತ್ತೆಯಾಳುಗಳನ್ನು ಈ ತನಕ ಹಮಾಸ್ ವಶದಿಂದ ಬಿಡಿಸಿ ತರುವುದೂ ಸಾಧ್ಯವಾಗಿಲ್ಲ ಮೊಸಾದ್ ಗೆ. ಇತ್ತೀಚಿನ ಯುದ್ಧದಲ್ಲಿ ಇಸ್ರೇಲ್ ಅವಲಂಬಿಸಿರುವ ಅರೆಕಾಲಿಕ ಮತ್ತು ತಾತ್ಕಾಲಿಕ ಸೇನಾ ನೀತಿಯೇ ಇಸ್ರೇಲಿಗೆ ಮುಳುವಾಗಿದೆ, ಮಾನವಸಂಪನ್ಮೂಲಗಳಿಗೆ ಬದಲಾಗಿ ತಂತ್ರಜ್ಞಾನಕ್ಕೆ ಒತ್ತು ನೀಡಲಾಗಿರುವುದು ದೊಡ್ಡ ಕಾರಣ ಎನ್ನುತ್ತಿದ್ದಾರೆ ರಕ್ಷಣಾ ತಜ್ಞರು.

Advertisements

ವಿಶ್ವದಲ್ಲಿ ಸೇನೆಯ ಮತ್ತು ಶಸ್ತ್ರಾಸ್ತ್ರಗಳ ಮೇಲೆ ಅತಿ ಹೆಚ್ಚು ವೆಚ್ಚ ಮಾಡುವ ದೇಶಗಳ ಪೈಕಿ ಎರಡನೆಯ ಸ್ಥಾನ ಇಸ್ರೇಲಿನದು. 1.70 ಲಕ್ಷ ಯೋಧರನ್ನು ಹೊಂದಿರುವ ಇಸ್ರೇಲಿ ಸೇನೆ ಅರೆವೃತ್ತಿಪರ ನಾಲ್ಕೂವರೆ ಲಕ್ಷ ಮೀಸಲು ಬಲವನ್ನು ಹೊಂದಿದೆ. ಹದಿನೆಂಟು ವರ್ಷ ತುಂಬಿದ ಇಸ್ರೇಲಿ ಯುವಕರು-ಯುವತಿಯರಿಗೆ ಅನುಕ್ರಮವಾಗಿ 32 ಮತ್ತು 24 ತಿಂಗಳುಗಳ ಸೇನಾ ತರಬೇತಿ ಕಡ್ಡಾಯ. ತರಬೇತಿಯ ನಂತರ ಕೆಲ ಕಾಲ ಸೇನೆಯಲ್ಲಿದ್ದು ತೊರೆದು ಹೋಗಿ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿರುತ್ತಾರೆ. ಅವಶ್ಯಕತೆ ಬಿದ್ದ ಸಂದರ್ಭಗಳಲ್ಲಿ ಇವರನ್ನು ಸೇನೆಗೆ ಕರೆಯಿಸಿಕೊಳ್ಳಲಾಗುತ್ತದೆ. ಇಂತಹ ನಾಲ್ಕು ಲಕ್ಷ ಮಂದಿ ಇಸ್ರೇಲಿನಲ್ಲಿದ್ದಾರೆ. ವರ್ಷದ ಹಿಂದೆ ಭಾರತದಲ್ಲೂ ಅಗ್ನಿಪಥ ಯೋಜನೆಯ ಮೂಲಕ ಭಾರತೀಯ ರಕ್ಷಣಾ ಪಡೆಗಳಿಗೆ ಅಗ್ನಿವೀರರ ನೇಮಕ ಮೊದಲಾಯಿತು. ಅಗ್ನಿವೀರರಿಗೆ ಕೇವಲ ಆರು ತಿಂಗಳ ತರಬೇತಿ ನೀಡಿ ಮೂರೂವರೆ ವರ್ಷ ದುಡಿಸಿಕೊಂಡು ಮನೆಗೆ ಕಳಿಸಲಾಗುತ್ತದೆ.

ಮೋದಿಯವರು ಭಾರತೀಯ ಸೇನೆಗೆ ಅಗ್ನಿವೀರರ ನೇಮಕ ಶುರು ಮಾಡಿದ್ದು ಇಸ್ರೇಲಿನ ಸ್ಫೂರ್ತಿಯಿಂದಲೇ ಎನ್ನಲಾಗಿದೆ. 2030-32ರ ಹೊತ್ತಿಗೆ ಭಾರತದ 12 ಲಕ್ಷ ಸೇನೆಯ ಅರ್ಧದಷ್ಟು ಸಂಖ್ಯೆ ಅಗ್ನಿವೀರರದೇ ಆಗಿರುತ್ತದೆ ಎಂದು ಸೇನೆಯ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರ ಹೇಳಿಕೆ ಉಲ್ಲೇಖಾರ್ಹ.

ಅಗ್ನಿವೀರರ ನೇಮಕ ಕುರಿತು ಮಿಲಿಟರಿ ತಜ್ಞರು ಈ ಕ್ರಮದ ಕುರಿತು ಆಶ್ಚರ್ಯಾಘಾತ ಪ್ರಕಟಿಸಿದ್ದರು. ಮಿಲಿಟರಿ ನೇಮಕಾತಿಯನ್ನು ಮಾತ್ರವಲ್ಲದೆ ಯೋಧನೊಬ್ಬ ಹೇಗಿರಬೇಕೆಂಬ ಮಿಲಿಟರಿ ಗೊತ್ತುಗುರಿಗಳನ್ನೇ ಈ ಯೋಜನೆ ಬುಡಮೇಲು ಮಾಡಲಿದೆ ಎಂಬುದು ಅವರ ಆತಂಕವಾಗಿತ್ತು.

ಹದಿನೈದು ವರ್ಷಗಳ ಸೇವಾವಧಿ ಮತ್ತು ಬದುಕಿರುವ ತನಕ ನಿವೃತ್ತಿವೇತನ ಸೌಲಭ್ಯವನ್ನು ಒಳಗೊಂಡ ಸೇನಾ ನೌಕರಿ ಈಗ ಕೇವಲ ಕನಸು. ಸೇನೆಗೆ ಕಾಯಂ ಸಿಬ್ಬಂದಿಯ ನೇಮಕಾತಿ ಸದ್ಯಕ್ಕೆ ಸ್ಥಗಿತಗೊಂಡಿದೆ. ಆಕ್ರಮಣಕಾರಿ ಧೋರಣೆ ತಳೆದಿರುವ ಚೀನಾ ಭಾರತದ ಗಡಿಗಳ ಒತ್ತುವರಿ ಮಾಡುತ್ತಲೇ ನಡೆದಿರುವ ಮತ್ತು ಧರ್ಮಾಂಧ ತೀವ್ರವಾದಿಗಳನ್ನು ಭಾರತದೊಳಕ್ಕೆ ನುಗ್ಗಿಸಲು ಸದಾ ಹೊಂಚು ಹಾಕುತ್ತಿರುವ ಪಾಕಿಸ್ತಾನದ ಸನ್ನಾಹಗಳನ್ನು ತಡೆಯುವುದು ಈಗಲೇ ದುಸ್ತರವಾಗಿ ಪರಿಣಮಿಸಿದೆ. ಶತ್ರುದೇಶಗಳ ಹಂಚಿಕೆಗಳನ್ನು ವಿಫಲಗೊಳಿಸಲು ನಮ್ಮ ಸೇನೆ ಸದಾ ಸನ್ನದ್ಧವಾಗಿರಬೇಕಿದೆ.

ಹೀಗಿರುವಾಗ ಆರೇ ತಿಂಗಳ ಅವಸರದಲ್ಲಿ ಅರೆಬರೆ ತರಬೇತಿ ಪಡೆದ ನಾಲ್ಕು ವರ್ಷಗಳ ಸೇವಾವಧಿಯ, ಕಸುಬು ತಿಳಿಯದ ‘ಅಗ್ನಿವೀರ’ರ ಕೈಯಲ್ಲಿ ದೇಶದ ಗಡಿಗಳು ಅದೆಷ್ಟು ಸುರಕ್ಷಿತ? ದೀರ್ಘಾವಧಿಯ ಉದ್ಯೋಗಭದ್ರತೆ ಇಲ್ಲದೆ ಕೇವಲ ನಾಲ್ಕು ವರ್ಷಗಳ ಗುತ್ತಿಗೆಯ ಮೇರೆಗೆ ನೇಮಕಗೊಂಡವರಿಗೆ ದೇಶರಕ್ಷಣೆಯ ಪ್ರೇರಣೆ ಎಲ್ಲಿಂದ ಬಂದೀತು? ನಾಗರಿಕರಿಗೆ ಸೇನಾ ತರಬೇತಿ ನೀಡುವುದರಿಂದ ಆತ ಪೂರ್ಣಕಾಲಿಕ ಸೈನಿಕ ಆಗುವುದಿಲ್ಲ ಮತ್ತು ಪೂರ್ಣಕಾಲಿಕ ಸೈನಿಕರಿಗೆ ಅವರನ್ನು ಹೋಲಿಸಲಾಗುವುದಿಲ್ಲ.

ಯೋಧರ ಸಂಬಳ ಸಾರಿಗೆಯೇ ರಕ್ಷಣಾವೆಚ್ಚದ ಬಹುಪಾಲನ್ನು ನುಂಗುತ್ತಿದ್ದು, ಶಸ್ತ್ರಾಸ್ತ್ರ ಖರೀದಿಗೆ ಹಣ ಸಾಲುತ್ತಿಲ್ಲ. ಹೀಗಾಗಿ ಸಂಬಳ ಸಾರಿಗೆಯನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಬೇಕೆಂಬುದೇ ಅಗ್ನಿಪಥದ ಹಿಂದಿನ ಅಸಲು ಉದ್ದೇಶ. ಆದರೆ ಅತ್ಯಾಧುನಿಕ ಬೇಹುಗಾರಿಕೆ ಉಪಕರಣಗಳು, ಶಸ್ತ್ರಾಸ್ತ್ರಗಳು ಹಮಾಸ್ ದಾಳಿಯನ್ನು ತಡೆಯುವಲ್ಲಿ ವಿಫಲವಾದವು.

ಅಗ್ನಿ ವೀರರು ಅಥವಾ ಇಸ್ರೇಲಿನ ಮೀಸಲು ಪಡೆಯವರ ಸೇನೆಯ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಹೋರಾಡಲು ಅಗತ್ಯವಿರುವ ಮತ್ತು ಶಸ್ತ್ರಾಸ್ತ್ರ ಚಲಾಯಿಸಲು ಬೇಕಾದ ಪೂರ್ಣಪ್ರಮಾಣದ ತರಬೇತಿ ಅವರಿಗೆ ಇರುವುದಿಲ್ಲ. ಸೇನೆಯಲ್ಲಿ ಹೋರಾಡುವಷ್ಟು ದೇಹದಾರ್ಢ್ಯವನ್ನೂ ಹೊಂದಿರುವುದಿಲ್ಲ. ದೇಶದ ರಕ್ಷಣೆಯನ್ನು ಗುತ್ತಿಗೆ ತೆಗೆದುಕೊಂಡಿರುವ ಏಕೈಕ ಗುತ್ತಿಗೆದಾರರಂತೆ ದೊಡ್ಡ ದೊಡ್ಡ ಮಾತಾಡುವ ಮೋದಿ ಸರ್ಕಾರ ಅಗ್ನಿವೀರರ ನೇಮಕದ ಮೂಲಕ ದೇಶ ಹಿತವನ್ನು ಕಡೆಗಣಿಸಿತೇ ಎಂಬ ಅನುಮಾನವನ್ನು ಇಸ್ರೇಲ್ ಉದಾಹರಣೆ ಗಟ್ಟಿಗೊಳಿಸಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X