ತಮಿಳುನಾಡಿನಿಂದ ಮೈಸೂರು ಕಡೆಗೆ ಪಶ್ಚಿಮ ಬಂಗಾಳದ ಪ್ರವಾಸಿಗರು ಬರುತ್ತಿದ್ದ ಬಸ್‌ವೊಂದು ಪಲ್ಟಿಯಾಗಿ, ಸುಮಾರು 25 ಮಂದಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬಂಡೀಪುರ ಸಮೀಪದ ಮೇಲುಕಾಮನಹಳ್ಳಿ ಇಳಿಜಾರಿನಲ್ಲಿ ಮಂಗಳವಾರ ರಾತ್ರಿ ಘಟನೆ ಸಂಭವಿಸಿದೆ. ಬಸ್‌ನಲ್ಲಿ 65 ಮಂದಿ ಪ್ರಯಾಣಿಸುತ್ತಿದ್ದರು. ಆ ಪೈಕಿ, 25 ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ತಮಿಳುನಾಡಿನ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದ್ದ ಪಶ್ಚಿಮ ಬಂಗಾಳದ ಪ್ರವಾಸಿಗರು ಕರ್ನಾಟಕದ ಪ್ರವಾಸಿ ತಾಣಗಳನ್ನು ನೋಡಲು ರಾಜ್ಯಕ್ಕೆ ಬರುತ್ತಿದ್ದರು. ಈ ವೇಳೆ, ಇಳಿಜಾರಿನ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.