ಎರಡು ವರ್ಷದಿಂದ ಬಾಕಿ ಇರುವ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ಒತ್ತಾಯಿಸಿದೆ.
ಉಡುಪಿಯ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶಶಿಧರ್ ಗೊಲ್ಲ, “1996ರ ಕಟ್ಟಡ ಕಾರ್ಮಿಕರ ಕಾಯ್ದೆಯ ಪ್ರಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದ್ದು, ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಬಾಲವಾಡಿಯಿಂದ ಉನ್ನತ ಶಿಕ್ಷಣದವರೆಗೆ ₹5,000ದಿಂದ 75,000ದವರೆಗೆ ಶೈಕ್ಷಣಿಕ ಸಹಾಯ ದೊರೆಯುತ್ತಿದ್ದು, ಶಾಲಾ ವಾರ್ಷಿಕ ಅವಧಿಯಲ್ಲಿ ಕಲಿಯುವ ಮಕ್ಕಳಿಗೆ ಹಿಂದಿನ ವರ್ಷಗಳಲ್ಲಿ ಕ್ಲಪ್ತ ಸಮಯದಲ್ಲಿ ಸಹಾಯಧನ ಬರುತ್ತಿತ್ತು. ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಯಾಗಲಿಲ್ಲ. ಅಲ್ಲದೆ, 2023-24ನೇ ಕಲಿಕೆಯ ವರ್ಷಕ್ಕೆ, ಶೈಕ್ಷಣಿಕ ಸಹಾಯಧನಕ್ಕೆ ಕಲ್ಯಾಣ ಮಂಡಳಿ ಅರ್ಜಿ ಕರೆದಿಲ್ಲದಿರುವುದು ಬಹಳ ನೋವನ್ನುಂಟುಮಾಡಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಎರಡು ದಶಕಗಳಿಂದ ವಾಸ; ಹಕ್ಕುಪತ್ರಕ್ಕೆ ಹರಸಾಹಸ
ಕಟ್ಟಡ ಸಂಘದ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಖಜಾಂಚಿ ಗಣೇಶ್ ನಾಯ್ಕ, ಉಪಾಧ್ಯಕ್ಷ ಸುಭಾಷ್ ನಾಯಕ್, ಮುಖಂಡರುಗಳಾದ ಮುರಳಿ, ರಾಮ ಕಾರ್ಕಡ, ಸೈಯದ್, ರಮೇಶ್, ಸುರೇಶ್ ಪಡುಬಿದ್ರಿ, ಉದಯ ಪೂಜಾರಿ, ಶಾರದ ಗುಡ್ಮಿ, ರಾಘುನಾಥ, ರವಿ, ಶೇಖರ್ ಮರಕಾಲ, ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್, ಮೊಹನ್ ಇದ್ದರು.