ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 10 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಂಗಳವಾರ ಕನಿಷ್ಠ 17.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಅಕ್ಟೋಬರ್ ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನವಾಗಿದೆ. ನಗರದಲ್ಲಿ ಸಂಜೆಯಾದರೆ, ಚಳಿಯ ವಾತಾವರಣ ಉಂಟಾಗುತ್ತಿದೆ. ಇದು ಚಳಿಗಾಲದ ಆರಂಭದ ಮುನ್ಸೂಚನೆಯನ್ನು ನೀಡುತ್ತಿದೆ.
ಕಳೆದ 2013ರಲ್ಲಿ ದಾಖಲಾಗಿದ್ದ ಚಳಿಯ ವಾತಾವರಣದ ಮಾದರಿಯಲ್ಲಿಯೇ ಈ ವರ್ಷವೂ ಹೆಚ್ಚಿನ ಚಳಿಯ ವಾತಾವರಣ ಅಕ್ಟೋಬರ್ನಲ್ಲಿಯೇ ಶುರುವಾಗಿದೆ. ಆದರೆ, ರಾಜ್ಯದಲ್ಲಿ ಈ ವರ್ಷ ವಾಡಿಕೆಯಂತೆ ಮಳೆ ಬಿದ್ದಿಲ್ಲ. ರಾಜ್ಯದ ಹಲವೆಡೆ ಮಳೆ ಕೊರತೆ ಎದುರಾಗಿದೆ. ಜಲಾಶಯಗಳು ನೀರಿನಿಂದ ಭರ್ತಿಯಾಗಿಲ್ಲ. ಈ ವರ್ಷ ಭೀಕರ ಬರಗಾಲ ಎದುರಾಗಿದೆ. ರಾಜ್ಯ ಸರ್ಕಾರ 216 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. ಇದೀಗ, ಮುಂಗಾರು ಮಳೆಯ ಅವಧಿ ಮುಗಿದು ಹಿಂಗಾರು ಮಳೆ ಆರಂಭವಾಗಿದೆ. ಮಳೆ ಬೀಳುವ ಸಮಯದಲ್ಲಿಯೇ ಚಳಿ ಆರಂಭವಾಗಿದೆ.
ಈಶಾನ್ಯ ಗಾಳಿ ಆರಂಭ ಆಗಿರುವುದನ್ನು ಹವಾಮಾನ ಇಲಾಖೆ ಅಧಿಕೃತಗೊಳಿಸದಿದ್ದರೂ, ಬೆಂಗಳೂರಿನಲ್ಲಿ ಚಳಿ ವಾತಾವರಣ ಶುರುವಾಗಿದೆ.
“2014ರ ಅಕ್ಟೋಬರ್ 31ರಂದು ತಾಪಮಾನವು 17.5 ಡಿಗ್ರಿ ಸೆಲ್ಸಿಯಸ್ಗೆ ಇಳಿದಿತ್ತು. ಬಳಿಕ, 2023ರ ಅಕ್ಟೋಬರ್ 24 ರಂದು 17.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ” ಎಂದು ಭಾರತೀಯ ಹವಾಮಾನ ಇಲಾಖೆಯ ತಿಳಿಸಿದೆ.
“ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಸಿಯಸ್, ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ” ಎಂದು ಮಾಹಿತಿ ನೀಡಿದೆ.
ಈ ಬಾರಿ ಹೆಚ್ಚು ಮಳೆಯಾಗದೇ ಇದ್ದರೂ ಬೆಂಗಳೂರಿನಲ್ಲಿ ಮಂಗಳವಾರದಂದು ಅಕ್ಟೋಬರ್ನಲ್ಲಿ ಅತಿ ಹೆಚ್ಚು ಚಳಿಯನ್ನು ಕಂಡಿದೆ. ಇನ್ನು ಅಕ್ಟೋಬರ್ 18 ಅನ್ನು ಹೊರತುಪಡಿಸಿದರೆ, ಅಕ್ಟೋಬರ್ನಲ್ಲಿ ಉಳಿದ ದಿನಗಳಲ್ಲಿ ಬೆಳಗ್ಗೆ ತಾಪಮಾನ 18.6 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕ್ರಮೇಣ 19 ಮತ್ತು 21 ಡಿಗ್ರಿ ಸೆಲ್ಸಿಯಸ್ ನಡುವೆ ತಾಪಮಾನ ಇರುತ್ತದೆ. ಹೀಗಾಗಿ, ನಗರದಲ್ಲಿ ಮಂಗಳವಾರ 17.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದು ಒಂದು ರೀತಿಯಲ್ಲಿ ಆಶ್ಚರ್ಯ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಲ್ಟಿಪ್ಲೆಕ್ಸ್ ಗೋಲ್ಡ್ ಕಾರ್ಡ್ ಆಸೆಗೆ ಬಿದ್ದು ₹1 ಲಕ್ಷ ಕಳೆದುಕೊಂಡ ವ್ಯಕ್ತಿ
ಕಡಿಮೆ ತಾಪಮಾನ ಚಳಿಯನ್ನು ಸೂಚಿಸಿದರೆ, ಗರಿಷ್ಠ ತಾಪಮಾನ ಅತ್ಯಂತ ಬಿಸಿಯನ್ನು ಸೂಚಿಸುತ್ತದೆ.
“ಅಕ್ಟೋಬರ್ ತಿಂಗಳಲ್ಲಿ ಇದು ಕನಿಷ್ಠ ತಾಪಮಾನವಾಗಿದೆ. ನವೆಂಬರ್ ಕೊನೆಯ ವಾರದಿಂದ ನಗರದಲ್ಲಿ ಚಳಿಗಾಲದ ಪರಿಣಾಮವ ಬೀರುವ ಸಾಧ್ಯತೆಯಿದೆ. ಎಲ್ ನಿನೋ ಪ್ರಭಾವದಿಂದಾಗಿ ಕಳೆದ ವರ್ಷದಂತೆ ಕಠಿಣ ಚಳಿಗಾಲದ ಸಂಭವನೀಯತೆ ಈ ವರ್ಷ ತುಂಬಾ ಕಡಿಮೆಯಾಗಿದೆ. ನವೆಂಬರ್ನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ” ಎಂದು ಹವಾಮಾನ ಇಲಾಖೆ ತಜ್ಞ ಎ ಪ್ರಸಾದ್ ತಿಳಿಸಿದರು.