ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತಗೊಳಿಸಿರುವ ಆದೇಶ ಹಿಂಪಡೆದು, ಮೂಲ ಸ್ವರೂಪದಲ್ಲಿ ಯೋಜನೆಯನ್ನು ಮುಂದುವರೆಸುವಂತೆ ಎಸ್‌ಐಒ ಕರ್ನಾಟಕ ಆಗ್ರಹಿಸಿದೆ.
ಫೆಲೋಶಿಪ್ ಕಡಿತವನ್ನು ಖಂಡಿಸಿ ಎಸ್‌ಐಒ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. “ವಿಶ್ವವಿದ್ಯಾಲಯಗಳಲ್ಲಿ ಅಭ್ಯಸಿಸುತ್ತಿರುವ ರಾಜ್ಯದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಎಂಫಿಲ್ ಮತ್ತು ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜೆಆರ್‌ಎಫ್ ಮಾದರಿಯಲ್ಲಿ ಎಂಫಿಲ್ ಕೋರ್ಸಿಗೆ 2 ವರ್ಷದ ಅವಧಿಗೆ ಮತ್ತು ಪಿಹೆಚ್‌ಡಿ ಕೋರ್ಸಿಗೆ 3 ವರ್ಷದ ಅವಧಿಗೆ ಮಾಹೆಯಾನ ₹25,000 ನೀಡಲಾಗುತ್ತಿದ್ದ ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಿ ಹೊರಡಿಸಲಾದ ಹೊಸ ಆದೇಶದ ಪ್ರಕಾರ 2022-23ರ ಸಾಲಿನ ಎಂಫಿಲ್ ವಿದ್ಯಾರ್ಥಿಗಳಿಗೆ 2 ವರ್ಷದ ಅವಧಿಗೆ ₹8,000 ಮತ್ತು ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ 3 ವರ್ಷದ ಅವಧಿಗೆ ₹10,000 ನೀಡುವುದಾಗಿ ತಿಳಿಸಿರುವುದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಿದ್ದುಪಡಿಯಾದ ಹೊಸ ಸರ್ಕಾರಿ ಸೇರ್ಪಡೆ ಆದೇಶ ಸಂಖ್ಯೆ- ಎಂಡಬ್ಲ್ಯೂಡಿ 198 ಎಂಡಿಎಸ್ 2022 ಬೆಂಗಳೂರು. 2022 ಜೂನ್ 28ರ ಅನ್ವಯ 2020-21ನೇ ಸಾಲಿನಲ್ಲಿ ನೋಂದಣಿಯಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ 2021-22 ನೇ ಸಾಲಿನಿಂದ ಎಂಫಿಲ್ ವಿದ್ಯಾರ್ಥಿಗಳಿಗೆ ಗರಿಷ್ಠ 1 ವರ್ಷ ಮತ್ತು ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಗರಿಷ್ಠ 2 ವರ್ಷ ಮಾಹೆಯಾನ ₹25000 ಫೆಲೋಶಿಪ್ ನೀಡುವ ನಿರ್ಧಾರವು ಮೂರು ವರ್ಷದವರೆಗಿದ್ದ ಫೆಲೋಶಿಪ್ ಅವಧಿಯನ್ನು 2 ವರ್ಷಕ್ಕೆ ಇಳಿಸುವ ಮೂಲಕ ವಿದ್ಯಾರ್ಥಿಗಳನ್ನು ಒಂದು ವರ್ಷದ ಫೆಲೋಶಿಪ್‌ನಿಂದ ವಂಚಿತಗೊಳಿಸುವುದಾಗಿದೆ. ಇದರಿಂದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಿಹೆಚ್‌ಡಿ ಪದವಿ ಅಧ್ಯಯನ ಮಾಡಿ ಗುಣಮಟ್ಟದ ಸಂಶೋಧನಾ ಪ್ರಬಂಧ ಮಂಡಿಸಲು ಯುಜಿಸಿ ನಿಯಮಾವಳಿಗಳ ಪ್ರಕಾರ ಕೋರ್ಸ್ ಪೂರ್ಣಗೊಳಿಸಲು ಕನಿಷ್ಠ 3 ರಿಂದ 5 ವರ್ಷಗಳ ಕಾಲಮಿತಿ ಇರುತ್ತದೆ. ಇದು ಸ್ವತಃ ಯುಜಿಸಿಯ ಪಿಹೆಚ್‌ಡಿ ಮತ್ತು ಎಂಫಿಲ್ ನಿಯಮಾವಳಿಗಳಿಗೆ ವಿರುದ್ಧವಾಗಿದೆ.
ತಿದ್ದುಪಡಿಯಾದ ಈ ಹೊಸ ಸರ್ಕಾರಿ ಆದೇಶವು 2022-23ನೇ ಸಾಲಿನಲ್ಲಿ ನೋಂದಣಿಯಾಗಿ ಪ್ರವೇಶಾತಿ ಪಡೆದಿರುವ ಹೊಸ ವಿದ್ಯಾರ್ಥಿಗಳಿಗೆ ಅನ್ವಯಿಸಲಾಗಿದ್ದು, ಕೋರ್ಸಿಗೆ ತಗುಲುವ ವೆಚ್ಚಕ್ಕೆ ಸಂಪೂರ್ಣ ಫೆಲೋಶಿಪ್ ಅವಲಂಬಿಸಿದ್ದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ಆಘಾತ ನೀಡಿದೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರದ 2016-17ರ ಅವಧಿಯಲ್ಲಿ ಜಾರಿಯಾಗಿದ್ದ ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿಲ್ಲಿಸುವ ಪ್ರಯತ್ನ ನಡೆಸಿ ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಯೋಜನೆಯನ್ನು ಮುಂದುವರೆಸಿತ್ತು. ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಬಿಜೆಪಿಯವರ ಉದ್ದೇಶವನ್ನು ಪೂರ್ಣಗೊಳಿಸುವ ಹಾದಿಯಲ್ಲಿ ಸಾಗುತ್ತಿರುವುದು ಸಮುದಾಯಕ್ಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ಮಾಡುತ್ತಿರುವ ದ್ರೋಹವಾಗಿದೆ.
ಅಲ್ಪಸಂಖ್ಯಾತರ ಸಮುದಾಯದಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪಡೆಯುವುದೇ ವಿರಳ ಇರುವ ಸಂದರ್ಭದಲ್ಲಿ ಅದರಲ್ಲೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿದ್ದು, ಇದೀಗ ಅವರಿಗೆ ಆರ್ಥಿಕವಾಗಿ ನೆರವಾಗುವ ಮೂಲಕ ಅಧ್ಯಯನ ಪೂರ್ಣಗೊಳಿಸಲು ಪ್ರೋತ್ಸಾಹಿಸಬೇಕಾದ ಸರ್ಕಾರವೇ ಸಹಾಯಧನದ ಮೊತ್ತ ಮತ್ತು ಅವಧಿಯನ್ನು ಕಡಿತಗೊಳಿಸಿರುವುದು ಖೇದಕರ.
ವಿಜಯನಗರದ ಜಿಲ್ಲೆಯ ಅಧೀನದಲ್ಲಿ ಬರುವ ಬಹುತೇಕ ಸಂಶೋಧನಾ ವಿದ್ಯಾರ್ಥಿಗಳಿಗೆ 2021 ರಿಂದ ಈವರೆಗೂ ಸಕಾಲಕ್ಕೆ ಫೆಲೋಶಿಪ್ ನೀಡದೆ ಸತಾಯಿಸಲಾಗುತ್ತಿದೆ. ಇದರಿಂದ ಬೇಸತ್ತ ಅಭ್ಯರ್ಥಿಗಳು ಸಾಲ ಪಡೆದು ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದೇ ರೀತಿ ಅನೇಕ ಜಿಲ್ಲೆಯ ವಿದ್ಯಾರ್ಥಿಗಳು ಫೆಲೋಶಿಪ್‌ಗಾಗಿ ಅಲೆದಾಡುವ ದುಃಸ್ಥಿತಿ ಉಂಟಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಎರಡು ದಶಕಗಳಿಂದ ವಾಸ; ಹಕ್ಕುಪತ್ರಕ್ಕೆ ಹರಸಾಹಸ
ರಾಜ್ಯದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸರ್ಕಾರಿ ಆದೇಶ ಸಂಖ್ಯೆ: ಎಂಡಬ್ಲ್ಯೂಡಿ 462 ಎಂಡಿಎಸ್ 2016, 2017ರ ಜನವರಿ 24ರ ನಿಯಮಾವಳಿಗಳನ್ನು ಅನ್ವಯಿಸಿ 2016-17ರ ಯೋಜನೆಯ ಪ್ರಾರಂಭಿಕ ಅಧಿಸೂಚನೆಯಂತೆ ಯಥಾವತ್ತಾಗಿ ಫೆಲೋಶಿಪ್ ಮರು ಜಾರಿಗೊಳಿಸಬೇಕು ಮತ್ತು ಪೂರ್ಣಕಾಲಿಕ ದಾಖಲಾತಿ ಪಡೆದು ಈಗಾಗಲೇ ಅರ್ಜಿ ಸಲ್ಲಿಸಿ ಸಂಶೋಧನೆ ನಡೆಸುತ್ತಿರುವ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಿದಾಗಿನಿಂದ ಪೂರ್ವ ಅನ್ವಯವಾಗುವಂತೆ ಫೆಲೋಶಿಪ್ ನೀಡಬೇಕೆಂದು ಒತ್ತಾಯಿಸಿದ್ದಾರೆ.