ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಸ್ಟೇಟ್‌ಬ್ಯಾಂಕ್‌ನ ತಾತ್ಕಾಲಿಕ ಸರ್ವಿಸ್ ಬಸ್ ನಿಲ್ದಾಣವನ್ನು ಸ್ಮಾರ್ಟ್‌ಗೊಳಿಸುವ ಮುಂದುವರಿದ ಕಾಮಗಾರಿಯನ್ನು ಮುಂದಿನ ಮೂರು ತಿಂಗಳೊಳಗೆ ಮುಗಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ಸರ್ವಿಸ್ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆಯ ಕುರಿತಂತೆ ಸಾರ್ವಜನಿಕರ ದೂರಿನನ್ವಯ ಶಾಸಕ ವೇದವ್ಯಾಸ ಕಾಮತ್ ಅವರ ಜತೆ ಪಾಲಿಕೆಯ ಉಪ ಮೇಯರ್, ಸ್ಥಾಯಿಸಮಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
“ಸಾಕಷ್ಟು ಸಮಸ್ಯೆ ಇದೆ. ಬಸ್ ನಿಲ್ದಾಣದ ಮೇಲ್ಛಾವಣಿ, ಶೌಚಾಲಯ, ಸ್ಪೀಡ್ ಬ್ರೇಕರ್, ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಹಾಗೂ ಬೀದಿ ವ್ಯಾಪಾರಿಗಳ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು. ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಯಿಂದ ಮುಂದುವರೆದ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು” ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, “ಹಲವು ವರ್ಷಗಳ ಹಿಂದೆ ಇಲ್ಲಿ ಬಸ್ ನಿಲ್ದಾಣವೇ ಇರಲಿಲ್ಲ. ಸ್ಮಾರ್ಟ್ ಸಿಟಿ ಹಾಗೂ ಮನಪಾದ ಮೂಲಕ ಇದಕ್ಕೊಂದು ಹೊಸ ರೂಪು ನೀಡಲು ನಿರ್ಧರಿಸಿ ಈಗಾಗಲೇ 4 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಕಾಂಕ್ರಿಟೀಕರಣ ನಡೆದಿದೆ. ವ್ಯವಸ್ಥಿತವಾಗಿ ಮೇಲ್ಛಾವಣಿ, ಬಸ್ ರೂಟ್‌ಗೆ ಸಂಬಂಧಿಸಿ ನಾಮಫಲಕ, ಶೌಚಾಲಯ, ಕ್ಯಾಂಟೀನ್, ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಮುಂದುವರರೆದ ಕಾಮಗಾರಿಗಾಗಿ ತಯಾರಿಸಲಾಗಿರುವ ಯೋಜನಾ ವರದಿಯ ಪ್ರಸ್ತಾವನೆಯನ್ನು ಮುಂದಿನ ಸ್ಮಾರ್ಟ್ ಸಿಟಿ ಸಭೆಯಲ್ಲಿ ಸಲ್ಲಿಸಲು ನಿರ್ಧರಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಮುಂದುವರೆದ ಬಂಡಾಯ; ಕಾಂಗ್ರೆಸ್‌ಗೆ ಮಾಜಿ ಶಾಸಕ ಶಫಿ ಅಹಮದ್
ಉಪ ಮೇಯರ್ ಸುನೀತಾ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಭರತ್ ಕುಮಾರ್, ರೋಹಿತ್ ಅಮೀನ್, ವರುಣ್ ಚೌಟ, ದಕ್ಷಿಣ ಕನ್ನಡ ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಮಾಜಿ ಅಧ್ಯಕ್ಷ ದಿಲ್‌ರಾಜ್ ಆಳ್ವ, ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭ, ಮನಪಾ ಕಾರ್ಯನಿರ್ವಾಹಕ ಎಂಜಿನಿಯರ್ ನರೇಶ್ ಶೆಣೈ ಸೇರಿದಂತೆ ಇತರರು ಇದ್ದರು.