ಬಸವ ಪ್ರಣೀತ ಲಿಂಗಾಯತ ಧರ್ಮ ಜಗತ್ತಿನ ಎಲ್ಲಾ ಧರ್ಮಗಳಿಗಿಂತ ತುಂಬಾ ವಿಭಿನ್ನವಾದ, ವೈಶಿಷ್ಟ್ಯ ಪೂರ್ಣವಾದ ಧರ್ಮವಾಗಿದೆ ಎಂದು ಚಿಂತಕ, ಹೋರಾಟಗಾರ ಪ್ರೊ. ಆರ್.ಕೆ. ಹುಡುಗಿ, ಲಿಂ.ವೀರಣ್ಣ ಗುರಪ್ಪ ಹುಗ್ಗಿ ಅವರ ನಾಲ್ಕನೆ ಸ್ಮರಣಾರ್ಥ ಶಹಾಪುರದಲ್ಲಿ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು-108 ಸಭೆಯಲ್ಲಿ ಮಾತನಾಡುತ್ತಿದ್ದರು.
ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಏರ್ಪಡಿಸಿದ್ದ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಅವರು ಮಾತನಾಡಿದರು. ಹನ್ನೆರಡನೆಯ ಶತಮಾನದಲ್ಲಿ ತಳವರ್ಗದ ಜನ ಸಮೂಹಕ್ಕೆ ಶಿಕ್ಷಣ ಕಲಿಸಿ, ಅವರೆಲ್ಲರನ್ನು ಜ್ಞಾನವಂತರನ್ನಾಗಿ ಮಾಡಿದ್ದು, ಪಟ್ಟಭದ್ರರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿತು. ಆದ್ದರಿಂದಲೆ ಆ ಪಟ್ಟಭದ್ರರು ಶರಣರನ್ನು ಅಕ್ಷರಶಃ ಕಗ್ಗೊಲೆ ಮಾಡಿದರು. ವಚನ ಸಾಹಿತ್ಯ ಮುಂದೆಯೂ ಉಳಿದರೆ ತಮ್ಮ ಬಂಡವಾಳ ಬಯಲಾಗುತ್ತದೆ ಎಂದರಿತು ರಾಶಿ ರಾಶಿ ವಚನಗಳ ಕಟ್ಟುಗಳನ್ನು ಸುಟ್ಟರು. ದುರ್ಭಕ್ತಿ, ದುರಾಚಾರಗಳನ್ನೇ ಧರ್ಮವೆಂದು ಅಲ್ಲಿಯವರೆಗೆ ನಂಬಿದ್ದ ಜನಗಳಿಗೆ ಅರಿವನ್ನು ನೀಡಿ ದಯವೇ ಧರ್ಮದ ಮೂಲವೆಂದು ತಿಳಿಸಿದರು ಎಂದು ಮಾರ್ಮಿಕವಾಗಿ ನುಡಿದರು.
ಮುಂದುವರೆದು, ಪ್ರಶ್ನೆ ಮಾಡುವುದು, ಒಳ ಹೊಕ್ಕು ನೋಡುವುದು, ತರ್ಕಬದ್ಧವಾಗಿ ವಿಚಾರ ಮಾಡುವ ಕ್ರಮವನ್ನು ಜನ ಸಾಮಾನ್ಯರಿಗೆ ತಿಳಿಸಿ ಅವರ ಮೂಲಕವೆ ವೇದ ಆಗಮ ಶಾಸ್ತ್ರ ಪುರಾಣಗಳ ಕುರಿತು ಮಾತನಾಡಲು ಹಚ್ಚಿದರು. ಆಗ ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ. ತರ್ಕದ ಬೆನ್ನ ಬಾರವನೆತ್ತುವೆ. ಆಗಮದ ಮೂಗಕೊಯ್ಯುವೆ ಎನ್ನುತ್ತಾ ಆ ಚಳವಳಿ ಪ್ರಶ್ನೆ ಮಾಡಲು ಆರಂಭಿಸಿತು. ಅದುವರೆಗೆ ಪಟ್ಟಭದ್ರರು ತಾವು ಹೇಳಿದ್ದೆ ಆಟ. ಮಾಡಿದ್ದೆ ಮಾಟ ಎಂಬಂತೆ ಇದ್ದ ಜನಗಳ ಇಭ್ರತಿಯನ್ನು ಬಸವಣ್ಣನವರು ಬಟಾಬಯಲು ಮಾಡಿದರು ಎಂದವರು ವಿವರಿಸಿದರು.
ತಳ ಸಮೂಹ ಜನರು ಶಿಕ್ಷಣ ಕಲಿತು ಮೇಲ್ವರ್ಗದವರ ಹುನ್ನಾರಗಳನ್ನು ಪ್ರಶ್ನಿಸತೊಡಗಿದಾಗ ಸಹಜವಾಗಿ ಆ ಜನಗಳಿಗೆ ಮರ್ಮಾಘಾತವಾಯಿತು. ಕಲ್ಯಾಣದ ಪ್ರಣತೆ ಒಡೆಯಿತು, ತೈಲ ಚೆಲ್ಲಿತು, ಜ್ಯೋತಿ ನಂದಿತು ಎಂದು ಹೇಳಲಾಗುವುದಿಲ್ಲ. ಈಗಲೂ ಶರಣರು ನಮ್ಮ ಚಿಂತನೆಗಳ ಮೂಲಕ ಜೀವಂತವಾಗಿದ್ದಾರೆ. ಲಿಂಗಾಯತರು ತಮ್ಮ ಒಂದು ಹೆಗಲ ಮೇಲೆ ಬಸವಣ್ಣನವರನ್ನು, ಇನ್ನೊಂದು ಹೆಗಲ ಮೇಲೆ ಬುದ್ಧನನ್ನು ಹೃದಯದಲ್ಲಿ ಅಂಬೇಡ್ಕರ್ ಅವರನ್ನು ಇಂಬಿಟ್ಟು ನಡೆಯುವ ಅವಶ್ಯಕತೆ ಇದೆ ಎಂದವರು ಹೇಳಿದರು.
ಮನುಷ್ಯರೆಲ್ಲರೂ ತಾಯಿಯ ಗರ್ಭ ಧರಿಸುವಿಕೆಯ ಮೂಲಕವೆ ಹೊರಗೆ ಬಂದಿದ್ದೇವೆ. ಆದರೂ, ನಮ್ಮಲ್ಲಿ ಮೇಲು ಕೀಳುಗಳಿವೆ. ಇದೆಲ್ಲ ಪ್ರಕೃತಿ ಸೃಷ್ಟಿ ಅಲ್ಲ. ಮನುಷ್ಯ ತನ್ನ ಶ್ರೇಷ್ಠತೆಯನ್ನು ಮತ್ತು ಮೈಗಳ್ಳ ಜೀವನಕ್ಕೆ ಅನುವಾಗುವಂತೆ ಮಾಡಿಕೊಂಡ ಹುನ್ನಾರವಾಗಿದೆ ಎಂದು ಅತಿಥಿಯಾಗಿ ಭಾಗವಹಿಸಿದ್ದ ಹೋರಾಟಗಾರ ನೀಲಕಂಠ ಬಡಿಗೇರ ಮಾತನಾಡಿದರು.
ಗುಡಿ, ಚರ್ಚು, ಮಸೀದಿಗಳು ಆರಂಭದ ದಿನಗಳಲ್ಲಿ ಒಳ್ಳೆಯ ಪರಿಪಾಠವನ್ನು ಕಲಿಸಬಹುದೇನೋ ಸರಿ. ಆದರೆ, ಸಾಯುವವರೆಗೂ ಅವುಗಳಲ್ಲೇ ನಾವುಗಳು ಸಮಾಧಿಯಾಗಬಾರದು ಎಂದು ವಿವೇಕಾನಂದರ ಮಾತನ್ನು ಉಲ್ಲೇಖಿಸಿ ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬರುವಂತೆ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಕರೆ ನೀಡಿದರು.
ವೇದಿಕೆಯ ಮೇಲೆ ಶಹಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ. ಸೋಮಲಿಂಗಪ್ಪ , ಕಮಲಮ್ಮ ವೀರಣ್ಣ ಸತ್ಯಂಪೇಟೆ ಇದ್ದರು. ಪ್ರಾರಂಭದಲ್ಲಿ ಬಸವರಾಜ ಶಿನ್ನೂರ ಸ್ವಾಗತಿಸಿದರು. ಫಜಲುದ್ದೀನಖಾಜಿ ವಚನ ಪ್ರಾರ್ಥನೆ ಮಾಡಿದರು. ಚೇತನ ಮಾಲಿ ಪಾಟೀಲ ವಂದನಾರ್ಪಣೆ ಮಾಡಿದರು. ಶಿವಣ್ಣ ಇಜೇರಿ ಸಭೆಯ ಸಂಚಾಲನೆ ಮಾಡಿದರು.
ಸಮಾರಂಭದಲ್ಲಿ ಗುಂಡಣ್ಣ ಕಲ್ಬುರ್ಗಿ, ಚೆನ್ನಮಲ್ಲಿಕಾರ್ಜುನ ಗುಂಡಾನೋರ, ಗುರುಬಸವಯ್ಯ ಗದ್ದುಗೆ, ಮಲ್ಲಿಕಾರ್ಜುನ ಗುಡಿ ಹಳಿಸಗರ, ಶಿವಯೋಗಪ್ಪ ಹವಾಲ್ದಾರ, ಪ್ರಕಾಶ ರಾಜೂರು, ಚಂದ್ರು ಮುಡಬೂಳ, ಪಂಚಾಕ್ಷರಿ ಹಿರೇಮಠ, ಲಕ್ಷ್ಮಣ ಲಾಳಸರಿ, ಎಂ.ಬಿ.ನಾಡಗೌಡ, ಚೆನ್ನಯ್ಯ ಹಿರೇಮಠ,ಅಡಿವೆಪ್ಪ ಜಾಕಾ,ಉಮೇಶ ಗೋಗಿ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ರವೀಂದ್ರ ಹೊಸ್ಮನಿ, ರಾಘವೇಂದ್ರ ಹಾರಣಗೇರಾ, ಷಣ್ಮುಖ ಅಣಬಿ, ಯಂಕಪ್ಪ ಅಲೆಮನಿ ಮುಂತಾದವರು ಇದ್ದರು.