ರಾಜ್ಯ ರಾಜಧಾನಿ ಬೆಂಗಳೂರಿನ ಎಚ್‌ಎಎಲ್ ಬಳಿ ಇರುವ ವಿಭೂತಿಪುರ ಕೆರೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು ಎಂದು ಕೆರೆ ಕಾರ್ಯಕರ್ತರು ಮತ್ತು ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಹಿಂದೆ ವಿಭೂತಿಪುರ ಕೆರೆಯಲ್ಲಿ 33 ವರ್ಷದ ವ್ಯಕ್ತಿಯೊಬ್ಬರು ಮುಳುಗಿ ಸಾವನ್ನಪ್ಪಿದರು. ಈ ಘಟನೆಯ ಬಳಿಕ ಕೆರೆಯ ಸುತ್ತಮುತ್ತ ಸಿಸಿಟಿವಿ ಮತ್ತು ಬ್ಯಾರಿಕೇಡ್ ಹಾಕುವಂತೆ ತಲಕಾವೇರಿ ಲೇಔಟ್, ಬೃಂದಾವನ ಲೇಔಟ್, ವೀರಭದ್ರ ಲೇಔಟ್, ಅನ್ನಸಂದ್ಯಾಪಾಳ್ಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಐದು ವರ್ಷಗಳಲ್ಲಿ ಇಬ್ಬರು ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 45 ಎಕರೆ ಪ್ರದೇಶದಲ್ಲಿರುವ ಈ ಕೆರೆಯ ಸುತ್ತ ಹೆಚ್ಚುವರಿ ಭದ್ರತೆ ಸಿಬ್ಬಂದಿ ನೇಮಕ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ವಿಭೂತಿಪುರ ಕೆರೆಸಂರಕ್ಷಣಾ ಸಮಿತಿಯ ಸದಸ್ಯೆ ಸತ್ಯವಾಣಿ ಶ್ರೀಧರ್ ಮಾತನಾಡಿ, “ಕೆರೆಯ ಅಭಿವೃದ್ಧಿಗೆ ಈ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದ್ದರೂ, ಸುರಕ್ಷತೆಯ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಕೆರೆಯ ಸುತ್ತಮುತ್ತ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಕೆರೆಯ ಸುತ್ತ ಹಾಕಲಾಗಿದ್ದ ಬೇಲಿ ಮುರಿದು ಹೋದ ಕಾರಣ ಜಾನುವಾರುಗಳು ಕೆರೆಗೆ ಸುಲಭವಾಗಿ ಹೋಗುವಂತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎನ್‌ಸಿಇಆರ್‌ಟಿ: ಶಿಕ್ಷಣತಜ್ಞ ನಿರಂಜನಾರಾಧ್ಯ ಆರೋಪ
“ಈ ಹಿಂದೆ ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆಗಳು ವರದಿಯಾಗುತ್ತಿದ್ದವು. ಇದೀಗ ಮತ್ತೊಂದು ಘಟನೆ ವರದಿಯಾಗಿದೆ. ಹುಡುಗರು ಮತ್ತು ಮಾದಕ ವ್ಯಸನಿಗಳು ಕೆರೆ ಪ್ರದೇಶದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಾರೆ. ಕೆರೆಯ ಅಧಿಕಾರಿಗಳು ಮತ್ತು ಪೊಲೀಸರು ನಿಯಮಿತವಾಗಿ ಕ್ರಮಕೈಗೊಳ್ಳಬೇಕೇ ಹೊರತು ಘಟನೆ ಸಂಭವಿಸಿದಾಗ ಅಥವಾ ಯಾರಾದರೂ ದೂರು ನೀಡಿದಾಗಲ್ಲ” ಎಂದು ಹೇಳಿದರು.
“ಇದಲ್ಲದೇ ಮಾಂತ್ರಿಕರು ಅಥವಾ ಶಾಸ್ತ್ರಗಳನ್ನು ನೆರವೇರಿಸಿ ಕೆರೆಯ ಬಳಿಗೆ ಬಂದು ಹೂವು, ತೆಂಗಿನಕಾಯಿ, ವೀಳ್ಯದೆಲೆ ಎಸೆದ ಘಟನೆಗಳೂ ನಡೆದಿವೆ” ಎಂದರು.