ದಲಿತ ಯುವಕನ ಶವ ಸಂಸ್ಕಾರದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆಯೊಡ್ಡಿರುವ ಘಟನೆ ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮದ ಸಮೀಪದ ಸಸ್ಯಕ್ಷೇತ್ರದಲ್ಲಿ ನಡೆದಿದೆ.
24 ವರ್ಷದ ದಲಿತ ಯುವಕ ಸುರೇಶ್, ಅಕ್ಟೋಬರ್ 24ರ ಮಂಗಳವಾರ ತಡರಾತ್ರಿ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದ.
ಕುಟುಂಬಸ್ಥರು ಅಂತ್ಯ ಸಂಸ್ಕಾರಕ್ಕೆಂದು ಸಸ್ಯಕ್ಷೇತ್ರದಲ್ಲಿ ಗುಂಡಿ ತೆಗೆಯಲು ಹೋದ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ತಡೆಯೊಡ್ಡಿದ್ದಾರೆ. ಈ ವೇಳೆ ಗ್ರಾಮಸ್ಥರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.
ಘಟನೆಯ ವಾಸ್ತವತೆ ಅರಿತ ಕಂದಾಯ ಮತ್ತು ಸರ್ವೇ ಅಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಮಸ್ಥರ ಮನ ಒಲಿಸುವ ಪ್ರಯತ್ನ ಮಾಡಿದರು. ಗ್ರಾಮಸ್ಥರು ಪಟ್ಟುಬಿಡದೆ ಸಸ್ಯಕ್ಷೇತ್ರದಲ್ಲೇ ಯುವಕನ ಅಂತ್ಯಸಂಸ್ಕಾರ ನಡೆಸಿದರು.
ಕೇವಲ ಕಂದಾಯ ಇಲಾಖೆ ಮಾತ್ರ ಸರ್ವೆ ನಡೆಸಿ 20 ಗುಂಟೆ ಭೂಮಿಯನ್ನು ಬೈಚಾಪುರ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಸ್ಮಶಾನ ಮಂಜೂರು ಮಾಡಿದೆ. ಆದರೆ, ಗ್ರಾಮದ ಸರ್ವೇ ನಂ.43ರಲ್ಲಿ ಒಂದು ಎಕರೆ 07ಗುಂಟೆ ಸರ್ಕಾರಿ ಭೂಮಿಯಿದ್ದು, 1983ರಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯ ನೇಡುತೋಪು ಹೆಸರಿನಲ್ಲೇ ಪಹಣಿ ಬರುತ್ತಿದೆ.
ಇಲ್ಲಿ ಪ್ರಸ್ತುತ ಸಸ್ಯಕಾಶಿ ನಿರ್ಮಾಣವಾಗಿದ್ದು, ಇದರಲ್ಲಿಯೇ 20 ಗುಂಟೆ ಜಮೀನನ್ನು ಕಂದಾಯ ಇಲಾಖೆ ಸ್ಮಶಾನಕ್ಕಾಗಿ ಮೀಸಲಿರಿಸಿದೆ. ಅರಣ್ಯ ಭೂಮಿಯನ್ನು ಉಳಿಸಿಕೊಳ್ಳಲಿಕ್ಕಾಗಿಯೇ ಇಲಾಖಾ ಅಧಿಕಾರಿಗಳು ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿರುವುದಾಗಿ ಸಿಬ್ಬಂದಿ ಹೇಳುತ್ತಿದ್ದಾರೆ.
2019ರಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿರುವುದಿಲ್ಲ ಮತ್ತು ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ಯಾವುದೇ ನೋಟಿಸ್ ನೀಡದೆ ಅಥವಾ ಸಂವಹನ ನಡೆಸದೆ ನಿರ್ಧಾರ ತೆಗೆದುಕೊಂಡಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ದಲಿತರಿಗೆ 50 ವರ್ಷದಿಂದ ಸ್ಮಶಾನವೇ ಇಲ್ಲದೆ ನದಿ-ಕೆರೆಯ ದಂಡೆಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. 30 ವರ್ಷದ ಹೋರಾಟ ಫಲವಾಗಿ ನಮ್ಮ ಗ್ರಾಮಕ್ಕೆ ಸ್ಮಶಾನದ ಜಾಗ ಮಂಜೂರು ಆಗಿದೆ. ಸರಕಾರ ನಮಗೆ ಮಂಜೂರು ಮಾಡಿದ 20 ಗುಂಟೆ ಜಮೀನು ಸಾಕು. ಸಾಮಾಜಿಕ ವಲಯ ಅರಣ್ಯ ಇಲಾಖೆಯು ಬೈಚಾಪುರದ ಸಸ್ಯಕ್ಷೇತ್ರವನ್ನ ಬೇರೆಕಡೆ ಸ್ಥಳಾಂತರ ಮಾಡಲಿ ಎಂದು ಆಗ್ರಹಿಸುತ್ತಾರೆ ಗ್ರಾಪಂ ಸದಸ್ಯ ವೆಂಕಟಾರೆಡ್ಡಿ.
ಇಲ್ಲಿನ ಸಸ್ಯಕ್ಷೇತ್ರಕ್ಕೆ 40 ವರ್ಷದ ಇತಿಹಾಸ ಇದೆ. ಲಕ್ಷಾಂತರ ರೂ. ವೆಚ್ಚದಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸಸ್ಯಕ್ಷೇತ್ರದಲ್ಲಿ ಪ್ರತಿವರ್ಷ ಒಂದು ಲಕ್ಷ ಸಸಿ ಪೋಷಣೆ ಮಾಡಿ ರೈತರಿಗೆ ನೀಡಲಾಗುತ್ತಿದೆ. ಸಸ್ಯಕ್ಷೇತ್ರದ ಭೂಮಿ ಉಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆ ಪರಿಶೀಲನೆ ನಡೆಸಿ ಸಸ್ಯಕ್ಷೇತ್ರದ ಉಳಿಸಲು ಅನುಕೂಲ ಕಲ್ಪಿಸಬೇಕಿದೆ ಎನ್ನುತ್ತಾರೆ ಕೊರಟಗೆರೆ ಸಾಮಾಜಿಕ ವಲಯ ಅರಣ್ಯಾಧಿಕಾರಿ ಶಿಲ್ಪಾ.ಎನ್.ಇ.
ಪ್ರಭಾರ ತಹಶೀಲ್ದಾರ್ ರಂಜಿತ್.ಕೆ.ಆರ್, ಸಸ್ಯಕ್ಷೇತ್ರದ ನಿರ್ವಹಣೆಯ ಜಮೀನು ಸ್ಮಶಾನಕ್ಕಾಗಿ ಮಂಜೂರು ಮಾಡಿರುವ ಪರಿಣಾಮ ಸಮಸ್ಯೆ ಅಗಿದೆ. ಮಂಜೂರು ಮಾಡುವ ವೇಳೆ ಕೆಲವು ನ್ಯೂನತೆ ಆಗಿರುವುದು ಕಂಡು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಸ್ಮಶಾನಕ್ಕೆ ಪ್ರತ್ಯೇಕ ಜಮೀನು ಗುರುತಿಸಿ ಸಸ್ಯಕ್ಷೇತ್ರದ ಜಮೀನು ಉಳಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.
ಬೈಚಾಪುರ ಗ್ರಾಮದಲ್ಲಿ 125ಕ್ಕೂ ಅಧಿಕ ದಲಿತ ಕುಟುಂಬಗಳಿವೆ. 50 ವರ್ಷದಿಂದ ಬೈಚಾಪುರದ ದಲಿತರಿಗೆ ಸ್ಮಶಾನ ಮರೀಚಿಕೆ ಆಗಿದೆ. ಜಯಮಂಗಲಿ ನದಿಯ ದಡ ಮತ್ತು ಕೆರೆಕಟ್ಟೆಗಳಲ್ಲಿ ಮೃತವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ಮಳೆಯಾದರೆ ನದಿಯು ರಭಸವಾಗಿ ಹರಿದು ಸಮಾಧಿಗಳೇ ಕೊಚ್ಚಿಹೋಗುತ್ತಿವೆ. ಬೈಚಾಪುರ ಗ್ರಾಮದ ಅಕ್ಕಪಕ್ಕದಲ್ಲಿ ಸರಕಾರಿ ಜಮೀನೇ ಇಲ್ಲದಾಗಿದೆ. ಮೂರು ಕಿ.ಮೀ ದೂರಕ್ಕೆ ಮೃತದೇಹ ಸಾಗಿಸಲು ನಮ್ಮಿಂದ ಆಗುವುದಿಲ್ಲ. ಸರಕಾರ ನಮಗೆ ಈಗ ಮಂಜೂರು ಮಾಡಿರುವ ಜಾಗವೆ ಬೇಕು ಎಂಬುದು ಗ್ರಾಮಸ್ಥರ ಆಗ್ರಹ.