ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಕ್ಟೋಬರ್ 31ರಂದು ನಡೆಯಲಿರುವ ಒಳ ಮೀಸಲಾತಿ ಸಾಂಕೇತಿಕ ಹೋರಾಟದ ಕರಪತ್ರಗಳನ್ನು ವಿಜಯನಗರ ಜಿಲ್ಲೆ ಹೊಸಪೇಟೆಯ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಬಿಡುಗಡೆ ಮಾಡಿದೆ.
ಸುಮಾರು 30 ದಶಕಗಳ ಕಾಲ ಒಳ ಮೀಸಲಾತಿಗಾಗಿ ಹೋರಾಟವನ್ನು ನಮ್ಮ ಸಮಾಜ ನಿರಂತರವಾಗಿ ಮಾಡುತ್ತಾ ಬಂದಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡುತ್ತಾ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿವೆ. ಈ ನಿಟ್ಟಿನಲ್ಲಿ, ಇದೇ ತಿಂಗಳು 31ರಂದು ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಸಾಂಕೇತಿಕ ಧರಣಿ ನಡೆಸುತ್ತಿದ್ದೇವೆ ಎಂದು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಕರಿಯಪ್ಪ ಗುಡಿಮನಿ ಅವರು ಹೇಳಿದ್ದಾರೆ.
ಈ ಹಿಂದೆ ಹರಿಹರದಿಂದ ಬೆಂಗಳೂರಿಗೆ 14 ದಿನ 410ಕಿ.ಮೀ ನಡೆದು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಿದ್ದೆವು. ಆದರೆ, ಸಿಕ್ಕ ಫಲ ಹತ್ತು ಮಂದಿ ನಾಯಕರ ಮೇಲೆ ಕೇಸ್. ನಂತರ ಎದೆಗುಂದದೆ ಸಮಾಜ ನಿರಂತರವಾಗಿ 112 ದಿವಸ ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಸುಳ್ಳು ಆಶ್ವಾಸನೆ ನೀಡಿ ಅದಕ್ಕೊಂದು ಉಪಸಮಿತಿ ರಚಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿತು. ಆದರೆ, ಕಾನೂನು ಬದ್ಧವಾಗಿ ಮಾಡಬೇಕಾದರೆ ಸದನದಲ್ಲಿ 224 ವಿಧಾನಸಭಾ ಸದಸ್ಯರ ಅನುಮೋದನೆ ತೆಗೆದುಕೊಂಡು ರಾಜ್ಯಪಾಲರ ಅಂಕಿತದೊಂದಿಗೆ ಕೇಂದ್ರಕ್ಕೆ ಶಿಫಾರಸು ಮಾಡಬಹುದಿತ್ತು. ಅದನ್ನು ಮಾಡದೆ ತರಾತುರಿಯಲ್ಲಿ ಮಾದಿಗ ಜನಾಂಗದ ಮತ ಸೆಳೆಯಲು ಅವೈಜ್ಞಾನಿಕವಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಈ ಸಂಬಂಧ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಬೇಕಾಯಿತು ಎಂದು ತಮ್ಮ ಆಕ್ರೋಶ ಹೊರಹಾಕಿದರು.
ದಲಿತ ಸಂಘರ್ಷ ಸಮಿತಿಯ ವಿಜಯನಗರ ಜಿಲ್ಲೆಯ ಸಂಚಾಲಕ ಕೊಟಿಗಿನಾಳ್ ಮಲ್ಲಿಕಾರ್ಜುನ ಮಾತನಾಡಿ, ಈ ಹಿಂದೆ ಬಿಜೆಪಿ 2019ರಲ್ಲಿ ಸರ್ಕಾರ ಸಂಸದರಿಗೆ ಈ ಮಸೂದೆಯ ಪ್ರತಿಗಳನ್ನು ನೀಡದೆ ಮತ್ತು ಚರ್ಚೆಯಲ್ಲಿ ನಡೆದ ತಕರಾರುಗಳನ್ನು ದಾಖಲಿಸದೆ ಸಂವಿಧಾನದ 103ನೇ ತಿದ್ದುಪಡಿ ಮಾಡಿ ರಾತ್ರಿ 10 ಗಂಟೆಗೆ ಇವಿಎಸ್ 10% (ಎಕನಾಮಿಕಲಿ ವೀಕರ್ ಸೆಕ್ಷನ್) ಜನವರಿ 08 , 2019 (323 ಪರ 3 ವಿರೋಧ) ದಿಂದ ಅಂಗೀಕರಿಸಲಾಯಿತು. ಆದರೆ, ಬಹುಜನರಾದ ನಾವು 2005ರಿಂದ ಇಲ್ಲಿಯವರೆಗೆ, ಸದಾಶಿವ ಆಯೋಗ ಜಾರಿ ಮಾಡಲು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಇದರಲ್ಲಿ ಅದೆಷ್ಟೋ ಹೋರಾಟ ಮಾಡಿದ ನಮ್ಮ ಹಿರಿಯರು ಈಗ ಜೀವಂತವಾಗಿಲ್ಲ. ಆದ ಕಾರಣ ಮುಂದಿನ ದಿನಗಳಲ್ಲಿ ರಾಜ್ಯ ನಾಯಕರ ಜೊತೆ ಚರ್ಚೆ ಮಾಡಿ ಒಳ ಮೀಸಲಾತಿ ನೀಡುವವರೆಗೆ ತೀವ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಗೋವಿಂದರಾಜು, ರಾಮಚಂದ್ರ, ಬಿಎಡ್ ಹನುಮಂತಪ್ಪ, ಸ್ವರೂಪರಾಣಿ, ಸ್ಲಂಶೇಷು, ವಾಸು ನಾಥ, ಶೇಖರ್, ಮಹದೇವ, ಮರಿದಾಸ, ಜಯರಾಮ, ಸೇಲ್ವಂ ಇತರರು ಇದ್ದರು.