- ಮೋದಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ?: ಸಿಎಂ ಸಿದ್ದರಾಮಯ್ಯ
- ‘ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೆ ಧಕ್ಕೆ, ಹೀಗಾಗಿ ಇದರ ವಿರುದ್ಧ ಧ್ವನಿಯೆತ್ತಿದ್ದೇವೆ’
ಕರ್ನಾಟಕ ಎಂದು ಮರುನಾಮಕರಣಗೊಂಡು 50 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಎಂಬ ಅಭಿಯಾನವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ನಮ್ಮ ನಾಡು ಕರ್ನಾಟಕ ಎಂದು ಮರುನಾಮಕರಣಗೊಂಡು 50 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಕರ್ನಾಟಕವು ಸಾಗಿಬಂದ ಹಾದಿಯನ್ನು ಸ್ಮರಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದ್ದಾರೆ.
“ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಅನುದಾನ, ತೆರಿಗೆಯಲ್ಲಿ ಪಾಲು, ಬರ ಮತ್ತು ಜಿಎಸ್‌ಟಿ ಪರಿಹಾರ ಪೂರ್ಣಪ್ರಮಾಣದಲ್ಲಿ ಬಂದಿಲ್ಲ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳು ಮತ್ತು ಐಬಿಪಿಎಸ್ ನೇಮಕಾತಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಎದುರಿಸಲು ಅವಕಾಶ ನೀಡದೆ ಲಕ್ಷಾಂತರ ಯುವ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗುತ್ತಿದೆ. ನಾಡಿನ ರೈತರ ಜೀವನಾಧಾರವಾಗಿರುವ ಕಾವೇರಿ, ಮಹದಾಯಿ, ಕೃಷ್ಣಾ, ಭದ್ರಾಮೇಲ್ದಂಡೆ ಮೊದಲಾದ ನದಿಗಳ ನೀರಾವರಿ ಯೋಜನೆಗಳಿಗೆ ಬೆಂಬಲ ನೀಡದೆ, ಅನ್ನದಾತನನ್ನು ಸಂಕಷ್ಟಕ್ಕೆ ನೂಕಲಾಗಿದೆ” ಎಂದಿದ್ದಾರೆ.
2017ರಲ್ಲಿ ಬರದಿಂದ ತತ್ತರಿಸಿಹೋಗಿದ್ದ ಕರ್ನಾಟಕದ ಜನತೆ ಕೇಂದ್ರದ ನೆರವಿಗಾಗಿ ನಿಮ್ಮತ್ತ ನೋಡುತ್ತಿದ್ದರು. ಆದರೆ ನಿಮ್ಮಿಂದ ನಮಗೆ ಸಿಕ್ಕಿದ್ದು ಬಿಡಿಗಾಸು ಪರಿಹಾರ.
ಪ್ರಧಾನಿ @narendramodi ಅವರೇ,
ಕನ್ನಡಿಗರ ಮೇಲೇಕೆ ಈ ಮಲತಾಯಿ ಧೋರಣೆ?ನಿಮ್ಮ ನೇತೃತ್ವದ @BJP4India ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ?
ಇದು ನನ್ನ… pic.twitter.com/WmVs5zpHD4— Siddaramaiah (@siddaramaiah) October 27, 2023
“ಕನ್ನಡಿಗರೇ ಬೆವರು-ರಕ್ತ ಸುರಿಸಿ ಕಟ್ಟಿ ಬೆಳೆಸಿದ ಕರ್ನಾಟಕದ ಹೆಮ್ಮೆಯ ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೊದಲಾದ ಲಾಭದಲ್ಲಿದ್ದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕನ್ನಡಿಗರಿಗೆ ದ್ರೋಹ ಎಸಗಲಾಗಿದೆ. ಹೀಗೆ ಕರ್ನಾಟಕದ ವಿರುದ್ಧ ಕೇಂದ್ರದ ಬಿಜೆಪಿ ಸರ್ಕಾರ ನಡೆಸುತ್ತಿರುವ ಅನ್ಯಾಯದ ಸರಮಾಲೆ ಮುಂದುವರೆದಿದೆ, ನಿರಂತರವಾಗಿ ಸ್ವಾಭಿಮಾನಿ ಕನ್ನಡಿಗರನ್ನು ನಿರ್ಲಕ್ಷಿಸಿ ಅವಮಾನಿಸಲಾಗುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರದ ಈ ನಡವಳಿಕೆಗಳು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೆ ವಿರುದ್ಧವಾಗಿರುವುದರಿಂದ ಅದರ ವಿರುದ್ಧ ಧ್ವನಿಯೆತ್ತುವುದು ಅನಿವಾರ್ಯವೆಂದು ಭಾವಿಸಿ, ಇಂದಿನಿಂದ #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ ಎಂಬ ಹ್ಯಾಷ್‌ಟ್ಯಾಗ್ ಅಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೇಡು ತೀರಿಸಿಕೊಳ್ಳುತ್ತಿದೆಯೇ?
ರಾಜ್ಯದ 216 ತಾಲೂಕುಗಳು ಭೀಕರ ಬರದಿಂದ ಕಂಗೆಟ್ಟಿವೆ, ಈವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಪ್ರಧಾನಿ ನರೇಂದ್ರ ಅವರೇ, ಜಗತ್ತಿನ ಕಷ್ಟ – ದು:ಖಕ್ಕೆಲ್ಲ ಮಿಡಿಯುವ ನಿಮ್ಮ ‘ವಿಶಾಲ ಹೃದಯ’ ಕನ್ನಡಿಗರ ಬಗ್ಗೆ ಇಷ್ಟೊಂದು ಕಟುವಾಗಿರುವುದು ಯಾಕೆ? ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ. ಇದಕ್ಕೆ ಉತ್ತರಿಸಿ ಮೋದಿ” ಎಂದು ಆಗ್ರಹಿಸಿದ್ದಾರೆ.