ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಂಧನವಾಗಿದ್ದ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯದಿಂದ ಜಾಮೀನು ದೊರೆತಿದೆ.
₹4 ಸಾವಿರ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ನ್ಯಾಯಾಲಯ ಷರತ್ತು ಹಾಕಿದೆ. ಅಕ್ಟೋಬರ್ 27ರಂದು ಸಂಜೆ ವೇಳೆಗೆ ವರ್ತೂರು ಸಂತೋಷ್ ಅವರು ಬಿಡುಗಡೆ ಆಗಲಿದ್ದಾರೆ.
ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿರುವ ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುವಾಗಲೇ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದರು. ಈ ವೇಳೆ, ಸಂತೋಷ್ ಧರಿಸಿದ ಹುಲಿ ಉಗುರನ್ನು ವಶಕ್ಕೆ ಪಡೆದುಕೊಂಡಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಂಧನವಾಗುತ್ತಿದ್ದಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅ.27ರಂದು ಎರಡನೇ ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.
ಅ. 26ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಎರಡನೇ ಎಸಿಜೆಎಂ ನ್ಯಾಯಾಲಯವು ಅ.27ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಸಂತೋಷ್ ಪರ ವಕೀಲ ನಟರಾಜ್ ಹಾಗೂ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ವಿಚಾರಣೆ ಮಂಡಿಸಿದರು.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | 100 ದಿನದಲ್ಲಿ 718 ಮೀಟರ್ ಸುರಂಗ ಕೊರೆದು ಹೊರಬಂದ ‘ಟಿಬಿಎಂ ರುದ್ರ’
ವಿಚಾರಣೆ ನಡೆಸಿ ಆಕ್ಷೇಪಣಾ ಅರ್ಜಿಯನ್ನು ಬುಧವಾರ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿತ್ತು. ಅ.25ರಂದು ಆಕ್ಷೇಪಣಾ ಅರ್ಜಿ ಸಲ್ಲಿಸದೆ ಒಂದು ದಿನ ಕಾಲಾವಕಾಶ ಪಡೆದು ಸರ್ಕಾರಿ ಅಭಿಯೋಜಕರು ಅ.26ರಂದು ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.
ಸದ್ಯ ವರ್ತೂರು ಸಂತೋಷ್ ಅವರು ಜಾಮೀನಿನ ಮೇಲೆ ಹೊರಬಂದಿದ್ದು, ಮತ್ತೆ ಅವರು ಬಿಗ್ ಬಾಸ್ನಲ್ಲಿ ಸ್ಪರ್ಧಿಸುತ್ತಾರಾ ಎಂಬ ಕುತೂಹಲ ಮೂಡಿದೆ.