- ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂರಿಂದ ಪ್ರಶಸ್ತಿ ಪ್ರದಾನ
- ಅ.28 (ಶನಿವಾರ) ರಾಜ್ಯದಾದ್ಯಂತ ಸರ್ಕಾರದ ವತಿಯಿಂದ ವಾಲ್ಮೀಕಿ ಜಯಂತಿ
2023ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಎಂಟು ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಶನಿವಾರ ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.
ನ್ಯಾಯಾಂಗ ಕ್ಷೇತ್ರದಿಂದ ಹೈಕೋರ್ಟ್ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎನ್ ವೈ ಹನುಮಂತಪ್ಪ, ಧಾರ್ಮಿಕ ಕ್ಷೇತ್ರದಿಂದ ಮಹಾದೇವಮ್ಮ ಕೋಂ. ರಂಗಸ್ವಾಮಿ, ಶಿಕ್ಷಣ ಕ್ಷೇತ್ರದಿಂದ ರಾಮಣ್ಣ ಮಹಾದೇವ ಗಸಿ, ಸಮಾಜ ಸೇವೆ ಕ್ಷೇತ್ರದಿಂದ ಜಿ ಓ ಮಹಾಂತಪ್ಪ, ಸಾಮಾಜಿಕ ಸಂಘಟನೆ ವಲಯದಿಂದ ಸೋಮಣ್ಣ, ವೈದ್ಯಕೀಯ ಕ್ಷೇತ್ರದಿಂದ ಶಾರದ ಪ್ರಭು ಹುಲಿ ನಾಯಕ, ಸಾಹಿತ್ಯ ಕ್ಷೇತ್ರದಿಂದ ಸುಕನ್ಯಾ ಮಾರುತಿ ಹಾಗೂ ರಂಗಭೂಮಿಯಿಂದ ಸುಜಾತಮ್ಮ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು.
ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಪತಿ ಸಾಧಕರಿಗೆ ಐದು ಲಕ್ಷ ರೂ. ನಗದು, 20 ಗ್ರಾಂ ಚಿನ್ನದ ಪದಕ ನೀಡಿ, ಗೌರವಿಸಲಾಗುತ್ತಿದೆ.
ಇಡೀ ಜಗತ್ತಿಗೆ ರಾಮಾಯಣ ದಂತಹ ಮಹೋನ್ನತ ಮಹಾಕಾವ್ಯವನ್ನು ಕೊಡುಗೆ ನೀಡಿದ ದಾರ್ಶನಿಕ ಮಹರ್ಷಿ ವಾಲ್ಮೀಕಿಯವರ 2023 ನೇ ಸಾಲಿನ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸೀಗೆ ಹುಣ್ಣಿಮೆ ದಿನ ಅ. 28 ರಂದು ರಾಜ್ಯದಾದ್ಯಂತ ಸರ್ಕಾರದ ವತಿಯಿಂದ ಕಾರ್ಯಕ್ರಮ ನಡೆಯಲಿದೆ.
ರಾಜ್ಯಮಟ್ಟದ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದೆ. ಬಸವನಗುಡಿಯಿಂದ ಶ್ರೀ ವಾಲ್ಮೀಕಿ ಜ್ಯೋತಿಯೊಂದಿಗೆ ಸಮುದಾಯದ ಮಹನೀಯರ ಕುರಿತ ಸ್ತಬ್ಧ ಚಿತ್ರಗಳ ಮೆರವಣಿಗೆ, ಬೈಕ್ ರ್ಯಾಲಿ ಆಯೋಜಿಸಲಾಗಿದೆ.
ಬಸವೇಶ್ವರ ವೃತ್ತದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಸಾರೋಟ್ ದೊಂದಿಗೆ ವಿವಿಧ ಬುಡಕಟ್ಟು ಕಲಾ ತಂಡಗಳ ಪ್ರದರ್ಶನ ನಡೆಯಲಿದೆ.
ಸಾಧಕರ ಸಂಕ್ಷಿಪ್ತ ಮಾಹಿತಿ
1 ಹೈಕೋರ್ಟ್ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎನ್ ವೈ ಹನುಮಂತಪ್ಪ
1939 ಸೆಪ್ಟೆಂಬರ್ 25ರಂದು ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಬಳ್ಳಾರಿಯಲ್ಲಿ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನ S.J.R.C. Law College ಕಾನೂನು ಪದವಿ ಪಡೆದು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಯಾಗಿ, ಆಂಧ್ರಪ್ರದೇಶದ ಹೈಕೋರ್ಟಿನ ನ್ಯಾಯಮೂರ್ತಿಗಳಾಗಿ ಗುರುತರವಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರು ಒರಿಸ್ಸಾ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಅನುಪಮ ಸಲ್ಲಿಸಿದ್ದಾರೆ. ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ.
2 ಮಹಾದೇವಮ್ಮ ಕೋಂ. ರಂಗಸ್ವಾಮಿ
ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪುಣ್ಯಾನಂದ ಪುರಿ ಮಹಾಸ್ವಾಮಿಜಿಯವರ ಮಾತೃಶ್ರೀ. ಧಾರ್ಮಿಕ ಕ್ಷೇತ್ರಕ್ಕೆ ಅಪರಿಮಿತ ಸೇವೆ ಹಾಗೂ ಸಮಾಜದ ಸಂಘಟನೆಗೆ ಮಹತ್ತರ ಪಾತ್ರ ವಹಿಸಿದ್ದಾರೆ. ಹಾಗಾಗಿ ಸಮುದಾಯ ಹಾಗೂ ಸರ್ಕಾರ ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ 2023 ನೇ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
3 ರಾಮಣ್ಣ ಮಹಾದೇವ ಗಸ್ತಿ
ಬೆಳಗಾವಿ ಜಿಲ್ಲೆಗೆ ಸೇರಿದವರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಿ ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಿದ್ದಾರೆ. ಶಿಕ್ಷಣ ಕೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
4 ಜಿ ಓ ಮಹಾಂತಪ್ಪ
ಹಾಸನ ಜಿಲ್ಲೆಯವರಾಗಿದ್ದು, ಸುಮಾರು 32 ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಕೆಲಸ ಮಾಡಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ. ಸತತ 35 ವರ್ಷಗಳಿಂದ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷರಾಗಿ ಸಮುದಾಯದ ಏಳಿಗೆಗಾಗಿ, ಬಡವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
5 ಸೋಮಣ್ಣ
ಮೈಸೂರು ಜಿಲ್ಲೆಯವರಾಗಿದ್ದು, ಜೇನುಕುರಬ ಸಮುದಾಯಕ್ಕೆ ಸೇರಿದವರಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಗಿರಿಜನರ ಕಲ್ಯಾಣಕ್ಕಾಗಿ ಹಾಗೂ ಸಮುದಾಯದ ಸಂಘಟನೆಗಾಗಿ ಶ್ರಮಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
6 ಶಾರದ ಪ್ರಭು ಹುಲಿ ನಾಯಕ
ರಾಯಚೂರು ಜಿಲ್ಲೆಯವರಾಗಿದ್ದು, ಸ್ತ್ರೀ ರೋಗ ತಜ್ಞ ವೈದ್ಯರಾಗಿದ್ದು, ಬುಡಕಟ್ಟು, ಸಮುದಾಯದ ಶ್ರೇಯೋಭಿವೃದ್ಧಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖ್ಯಾತ ವೈದ್ಯರಾಗಿದ್ದು, ಮಹಿಳೆಯರ ಆರ್ಥಿಕ ಸದೃಢತೆಗಾಗಿ ಸರ್ಕಾರದ ಯೋಜನೆಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಿದ್ದಾರೆ. ಮಹಿಳಾ ಸಹಾಯ ಸಂಘಗಳನ್ನು ಸ್ಥಾಪನೆ ಮಾಡಿ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಾರೆ.
7 ಸುಕನ್ಯಾ ಮಾರುತಿ
ವಿಜಯನಗರ ಜಿಲ್ಲೆಯವರಾಗಿದ್ದು, ಕವಿಯತ್ರಿಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದು, 5 ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಸಮಾಜವನ್ನು ಸಂಘಟಿಸಲು ಅಪಾರವಾಗಿ ಶ್ರಮಿಸಿದ್ದಾರೆ.
8 ಸುಜಾತಮ್ಮ
ಬಳ್ಳಾರಿ ಜಿಲ್ಲೆಯವರಾಗಿದ್ದು, ಬಯಲಾಟ ಪ್ರದರ್ಶನಗಳನ್ನು ನೀಡುತ್ತಾ ಹಲವಾರು ಮೈಲಿಗಲ್ಲು ಸಾಧನೆ ಮಾಡಿದ್ದಾರೆ. 2008ರಲ್ಲಿ ಕಿತ್ತೂರು ರಾಣಿ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸುಮಾರು 5000 ಬಯಲಾಟ ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದಾರೆ.