- 2024ರ ನವೆಂಬರ್ 30ರ ವರೆಗೆ ಕನ್ನಡ ಕಾರ್ಯಕ್ರಮ ಆಯೋಜನೆ
- ಕರ್ನಾಟಕ ಪಾರಂಪರಿಕ ರಥಯಾತ್ರೆ ಎಲ್ಲ ಜಿಲ್ಲೆಗಳಲ್ಲಿ ಸಂಚಾರ
ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡ ಈ ವಿಶೇಷ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ವರ್ಷ ಪೂರ್ತಿ ವೈವಿಧ್ಯಮಯ ನಾಡಹಬ್ಬ ಆಚರಣೆಗೆ ತೀರ್ಮಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ಹಂಚಿಕೊಂಡ ಅವರು, “ಈ ವರ್ಷದ ನವೆಂಬರ್ 1ರಿಂದ ಮುಂದಿನ ವರ್ಷ 2024ರ ನವೆಂಬರ್ 30ರ ವರೆಗೆ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು” ಎಂದರು.
“ನವೆಂಬರ್ 1ರಂದು ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕನ್ನಡ ಧ್ವಜಾರೋಹಣ ನೆರವೇರಿಸುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಶಾಸಕರು ಕನ್ನಡ ಧ್ವಜ ವಂದನೆ ನೆರವೇರಿಸಲಿದ್ದಾರೆ. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಸಂಭ್ರಮ ಸಡಗರದಿಂದ ನಾಡಧ್ವಜದ ಧ್ವಜಾರೋಹಣ ಕಾರ್ಯಕ್ರಮ ನಡೆಸುವುದು. ನಾಡಿನ ಎಲ್ಲ ಕನ್ನಡಿಗರು, ಕನ್ನಡ ಮನಸ್ಸುಗಳು, ಕನ್ನಡ ಪರ ಹೋರಾಟಗಾರರು ಈ ಸಂಭ್ರಮದಲ್ಲಿ ತೊಡಗುವಂತಾಗಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಐಸ್‌ಲ್ಯಾಂಡ್ ಮಹಿಳೆಯರ ಮುಷ್ಕರದಲ್ಲಿ ಅಡಗಿರುವ ಪಾಠಗಳು
“ನವೆಂಬರ್ 1ರಂದು ರಾಜ್ಯದ ಎಲ್ಲ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಕರ್ನಾಟಕ ಸಂಭ್ರಮ-50 : ಉಸಿರಾಯಿತು ಕರ್ನಾಟಕ ಹೆಸರಾಗಲಿ ಕನ್ನಡ ಎನ್ನುವ ಘೋಷ ವಾಕ್ಯವನ್ನು ನಮ್ಮ ತಾಯಂದಿರು ಹಾಗೂ ಸಹೋದರಿಯರು ಬರೆಯಬೇಕು. ಬೆಳಗ್ಗೆ 9 ಗಂಟೆಗೆ ಎಲ್ಲ ರೆಡಿಯೋಗಳಲ್ಲಿ ನಾಡಗೀತೆ ಮೊಳಗಲಿದೆ. ರಾಷ್ಟ್ರಗೀತೆಗೆ ಗೌರವ ಸಮರ್ಪಿಸುವ ಹಾಗೆ ಎಲ್ಲರೂ ಎದ್ದು ನಿಂತು ನಾಡಗೀತೆಗೆ ಗೌರವ ಸಮರ್ಪಣೆ ಮಾಡಬೇಕು. ಸಂಜೆ 5 ಗಂಟೆಗೆ ನಿಮ್ಮ- ನಿಮ್ಮ ಊರುಗಳ ಮೈದಾನಗಳಲ್ಲಿ ಕೆಂಪು- ಹಳದಿ ಬಣ್ಣದ ಗಾಳಿಪಟಗಳನ್ನು ಬಾನೆತ್ತರಕ್ಕೆ ಹಾರಿಸಿ. ರಾತ್ರಿ ಏಳು ಗಂಟೆಗೆ ಪ್ರತಿಯೊಬ್ಬರ ಮನೆ, ಕಚೇರಿ, ಅಂಗಡಿ ಮಳಿಗೆಗಳ ಮುಂದೆ ಹಣತೆಯಲ್ಲಿ ಕನ್ನಡ ಜ್ಯೋತಿ ಬೆಳಗಿಸಬೇಕು” ಎಂದರು.
“ಕರ್ನಾಟಕ ಏಕೀಕಕರಣದ ವಿಷಯ, ಸಾಹಿತ್ಯ, ಸಾಧನೆಗಳ ಪಥ, ಐತಿಹಾಸಿಕ ನೆಲೆಗಳ ಮಾಹಿತಿ, ಕನ್ನಡ ಜ್ಯೋತಿ, ಭುವನೇಶ್ವರಿ ಪ್ರತಿಮೆ ಸಹಿತ ಕರ್ನಾಟಕದ ಎಲ್ಲಾ 31 ಜಿಲ್ಲೆಗಳ ಪರಿಚಯ ಮಾಡಿಕೊಡುವ ವಿಶೇಷ ಕರ್ನಾಟಕ ಪಾರಂಪರಿಕ ರಥಯಾತ್ರೆ ಎಲ್ಲಾ 31 ಜಿಲ್ಲೆಗಳ ಸಹಿತ ಎಲ್ಲಾ ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರ ಹಾಗೂ ಮತ್ತು ಎಲ್ಲ ಗ್ರಾಮಗಳಲ್ಲೂ ಪರ್ಯಾಟನೆ ನಡೆಸಲಿದೆ. ಇದಕ್ಕೆ ಸಂಬಂಧಿಸಿದ ರೂಟ್ ಮ್ಯಾಪ್ ಕೂಡ ಸಿದ್ಧಪಡಿಸಿದ್ದು, ಅದರಂತೆ ರಥಯಾತ್ರೆ ಹಾಗೂ ಜ್ಯೋತಿ ಸಾಗಲಿದೆ. ಅಲ್ಲದೆ, ರಾಜ್ಯಾದ್ಯಂತ ಎಲ್ಲಾ ಶಾಲಾ- ಕಾಲೇಜುಗಳಲ್ಲಿ ನನ್ನ ಭಾಷೆ, ನನ್ನ ಹಾಡು ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವುದು. ರಾಜ್ಯದ ಪ್ರತಿ ಶಾಲೆಗಳು, ವಲಯಮಟ್ಟ, ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ, ನಾಲ್ಕು ಕಂದಾಯ ವಿಭಾಗಗಳು ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳು ನಡೆಯಲಿವೆ” ಎಂದು ವಿವರಿಸಿದರು.