ದಾವಣಗೆರೆ | ಕಾಡಂಚಿನ ಗ್ರಾಮಗಳಲ್ಲಿ ಮೂಲಸೌಕರ್ಯ ಕೊರತೆ; ಸತ್ತವರನ್ನೂ ಹೂಳಲೂ ಪರದಾಟ

Date:

Advertisements

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿದೆ. ಸುಮಾರು 7,000 ಎಕರೆಗೂ ಅಧಿಕವಿರುವ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ವಿಶೇಷವೆನಿಸುವಂತಹ ಅಪರೂಪದ ಜೀವ ವೈವಿಧ್ಯತೆಯ ಜಿಂಕೆಯನ್ನು ಹೋಲುವ ನಾಲ್ಕು ಕೊಂಬಿನ ಕೊಂಡುಕುರಿ ಎನ್ನುವ ತಳಿ ಇಲ್ಲಿ ಪತ್ತೆಯಾಗಿವೆ.

ನಾಲ್ಕು ಕೊಂಬಿನ ಕೊಂಡುಕುರಿ ಜತೆಗೆ ಚಿರತೆ, ಕಾಡುಹಂದಿ, ಕಿರುಬ, ಚಿಪ್ಪುಹಂದಿ, ನರಿ, ತೋಳ, ಮೊಲಗಳು, ಹಕ್ಕಿಪಕ್ಷಿಗಲೇ ಮುಂತಾದ ವನ್ಯಜೀವಿಗಳಿವೆ. 2007ರಲ್ಲಿ ಕರ್ನಾಟಕ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ರಾಜ್ಯ ವನ್ಯಜೀವಿ ಸಲಹಾ ಮಂಡಳಿ ಸದಸ್ಯ ಸಂಜಯ್ ಗುಬ್ಬಿ ನೇತೃತ್ವದ ತಂಡ ಈ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಕೊಂಡುಕುರಿ ಇರುವುದನ್ನು ಪತ್ತೆ ಹಚ್ಚಿತ್ತು. ಬಳಿಕ ಇದನ್ನು ವನ್ಯಜೀವಿಧಾಮವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಈ ವರದಿ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು 2013ರಲ್ಲಿ ಅಭಯಾರಣ್ಯವಾಗಿ ಘೋಷಿಸಿತ್ತು.

ವನ್ಯಜೀವಿ ಸಂರಕ್ಷಣಾ ಪ್ರದೇಶವನ್ನಾಗಿ ಘೋಷಿಸಿದಾಗ ಸುತ್ತಮುತ್ತಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಯೋಜನೆಯನ್ನು ಅರಣ್ಯ ಇಲಾಖೆ ಮಾಡಬೇಕಿತ್ತು. ಆದರೆ ರಂಗಯ್ಯನದುರ್ಗ ಪ್ರದೇಶವನ್ನು ವನ್ಯಜೀವಿ ಪ್ರದೇಶವನ್ನಾಗಿ ಘೋಷಿಸಿದ ನಂತರ ಇಲ್ಲಿ ಕಾಡಂಚಿನ ಹಳ್ಳಿಗಳ ಜನರು ಅರಣ್ಯ ಅಧಿಕಾರಿಗಳ ಸಂಘರ್ಷದ ಜತೆಗೆ ಕಾಡುಪ್ರಾಣಿಗಳ ಸಂಘರ್ಷವನ್ನೂ ಎದುರಿಸುವಂತಾಗಿದೆ.

Advertisements

ಇತ್ತೀಚಿನ ವರ್ಷಗಳಲ್ಲಿ ಜಗಳೂರು ತಾಲೂಕು ಸತತ ಬರದಿಂದ ಕಂಗೆಟ್ಟಿದೆ. ಅದಕ್ಕೆ ರಂಗಯ್ಯನದುರ್ಗ ವನ್ಯಜೀವಿ ಸಂರಕ್ಷಣಾ ಪ್ರದೇಶವೂ ಕೂಡ ಹೊರತಾಗಿಲ್ಲ. ಇದು ನೇರವಾಗಿ ಅಲ್ಲಿನ ವನ್ಯಜೀವಿಗಳು ಮತ್ತು ಕಾಡಂಚಿನ ಜನರು ಹಾಗೂ ಅರಣ್ಯಾಧಿಕಾರಿಗಳ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು ಗುರುತಿಸಿ ನಿವಾರಿಸಬೇಕಾಗಿರುವ ಅರಣ್ಯ ಇಲಾಖೆ ಮತ್ತು ಸರ್ಕಾರ ಕಣ್ಮುಚ್ಚಿ ಕುಳಿತಿವೆ.

ಇತ್ತೀಚಿನ ವರ್ಷಗಳಲ್ಲಿ ಸತತ ಬರದಿಂದ ಮಳೆ ಇಲ್ಲದೆ ವನ್ಯಜೀವಿಗಳಿಗೆ ರಂಗಯ್ಯನದುರ್ಗ ಸಂರಕ್ಷಿತ ಪ್ರದೇಶದಲ್ಲಿ ನೀರು ಆಹಾರ ಸಿಗದೇ ಅದನ್ನು ಅರಸಿಕೊಂಡು ಗಡಿಯಂಚಿನ ಗ್ರಾಮಗಳಿಗೆ ಮತ್ತು ಸುತ್ತಮುತ್ತಲಿನ ರೈತರ ಭೂಮಿಗಳಿಗೆ ಬಂದು ಬೆಳೆ ತಿಂದು ತಮ್ಮ ಆಹಾರ ಪೂರೈಕೆ ಮಾಡಿಕೊಳ್ಳುವುದು ವನ್ಯಜೀವಿಗಳ ಹೊಟ್ಟೆಪಾಡಾದರೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬಿತ್ತಿರುವ ರೈತನಿಗೆ ಅದು ಹೊಡೆತವಾಗಿದೆ. ಹಂದಿ, ಜಿಂಕೆ, ಸಾರಂಗಗಳು ಮತ್ತು ಇತರ ವನ್ಯಜೀವಿಗಳ ಕಾಟದಿಂದ ಬೆಳೆಯನ್ನು ಉಳಿಸಿಕೊಳ್ಳುವುದೇ ರೈತನಿಗೆ ಸವಾಲಾಗಿದೆ. ಇದಕ್ಕೆ ಕಾಡಿನ ಸುತ್ತ ಅತ್ಯಾಧುನಿಕ ಬಲೆ ನಿರ್ಮಿಸಿ ವನ್ಯ ಪ್ರಾಣಿಗಳು ಈ ಕಡೆ ಬರದಂತೆ ಮತ್ತು ಅವುಗಳಿಗೆ ಕಾಡಿನಲ್ಲಿ ಆಹಾರ ಸಿಗುವಂತೆ ಮಾಡಬೇಕೆನ್ನುವುದು ರೈತರು ಮತ್ತು ಕಾಡಂಚಿನ ಹಳ್ಳಿಗರ ಆಗ್ರಹವಾಗಿದೆ.

ಕೆಲವು ಕಾಡಿನ ಉತ್ಪನ್ನಗಳನ್ನು ಜೀವನೋಪಾಯಕ್ಕೆ ನಂಬಿಕೊಂಡಿದ್ದ ಕಾಡಂಚಿನ ಜನರಿಗೂ ಕೂಡ ಸಂರಕ್ಷಿತ ಅರಣ್ಯದಿಂದ ಜೀವನೋಪಾಯಕ್ಕೆ ನಗರ ಪ್ರದೇಶಗಳತ್ತ ಹೋಗುವಂತಾಗಿದೆ. ಎಲ್ಲದರ ಜೊತೆಗೆ ಮುಖ್ಯವಾಗಿ ಸ್ಮಶಾನಗಳ ಸಮಸ್ಯೆಗಳು ಕೂಡ ಕಾಡಂಚಿನ ಜನರ ಘರ್ಷಣೆಗೆ ಕಾರಣವಾಗಿವೆ. ಈ ಮುಂಚೆ ಕಾಡಿನ ಅಂಚುಗಳಲ್ಲಿ ಮೃತರ ದೇಹವನ್ನು ಸಂಸ್ಕಾರ ಮಾಡುತ್ತಿದ್ದರು. ಇದೀಗ ಸಂರಕ್ಷಣಾ ಪ್ರದೇಶವಾಗಿರುವುದರಿಂದ ಅಲ್ಲಿಗೆ ಹೋಗಲು ಅವಕಾಶವಿಲ್ಲದೆ ಕಾಡಂಚಿನ ಗ್ರಾಮಗಳಾದ ಐನಳ್ಳಿ, ವೆಂಕಟೇಶಪುರ, ಗುರುಸಿದ್ದಾಪುರ, ಲಖಂಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ಸ್ಮಶಾನದ ಸಮಸ್ಯೆಗಳು ಎದುರಾಗಿವೆ. ಯಾರಾದರೂ ತೀರಿಕೊಂಡರೆ ಅವರ ಕುಟುಂಬಸ್ಥರಿಗೆ ಸ್ವಂತ ಜಾಗ, ಹೊಲ ಇಲ್ಲದಿದ್ದರೆ ಅವರನ್ನು ಎಲ್ಲಿ ಸಂಸ್ಕಾರ ಮಾಡಬೇಕು ಎಂಬುದೇ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಇದಕ್ಕೆ ಸ್ಥಳೀಯ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಪರಿಹಾರ ದೊರಕಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ವೆಂಕಟೇಶಪುರ ತಾಂಡಾದ ನಿವಾಸಿ ರಮೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಮೊದಲು  ಕಾಡಂಚುಗಳಲ್ಲಿ ಶವಸಂಸ್ಕಾರ ಮಾಡುತ್ತಿದ್ದೆವು. ಆದರೆ ಇತ್ತೀಚೆಗೆ ಕೊಂಡುಕುರಿ ಸಂರಕ್ಷಣೆ ಪ್ರದೇಶವಾದಾಗಿನಿಂದ ಶವಸಂಸ್ಕಾರಕ್ಕೆ ಸ್ಥಳವಿಲ್ಲದಂತಾಗಿದೆ. ಹೊಲ ಇಲ್ಲದವರ ಕುಟುಂಬಸ್ಥರು ಯಾರಾದರೂ ತೀರಿಕೊಂಡರೆ ಅವರ ಸಂಸ್ಕಾರ ಮಾಡುವುದೇ ನಮಗೆ ಯಕ್ಷಪ್ರಶ್ನೆಯಾಗುತ್ತದೆ. ಎಲ್ಲಿ ಅವರ ಶವಸಂಸ್ಕಾರ ಮಾಡಬೇಕು ಎಂಬುದೇ ನಮಗೆ ತೋಚದಂತಾಗಿದೆ. ಇದಕ್ಕೆ ಸ್ಥಳೀಯ ಆಡಳಿತ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯವರು ಸೂಕ್ತ ಪ್ರದೇಶ ಗುರುತಿಸಿ ಕಾಡಂಚಿನ ಹಳ್ಳಿಗಳ ಜನರಿಗೆ ಸ್ಮಶಾನ ಸೌಲಭ್ಯ ದೊರಕಿಸಬೇಕು” ಎಂದು ಆಗ್ರಹಿಸಿದರು.

ರಂಗಯ್ಯನದುರ್ಗ ಅರಣ್ಯಕ್ಕೆ ಹೊಂದಿಕೊಂಡಂತಿರುವ ಕಾಡಂಚಿನ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ರೈತ ರಾಜಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇತ್ತೀಚಿನ ವರ್ಷಗಳಲ್ಲಿ ಮಳೆ ಇಲ್ಲದೆ ವನ್ಯಜೀವಿಗಳು ಕಾಡಂಚಿನ ಸುತ್ತಮುತ್ತಲ ಜಮೀನುಗಳಿಗೆ ದಾಳಿ ಮಾಡುತ್ತಿದ್ದು, ಬೆಳೆಗಳನ್ನು ನಾಶಪಡಿಸುತ್ತಿವೆ. ಹಂದಿಗಳು ಸೇರಿದಂತೆ ಇತರ ಪ್ರಾಣಿಗಳಿಂದ ಬೆಳೆನಾಶವಾಗುತ್ತಿದ್ದು, ರೈತರಿಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಮತ್ತು ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಸುತ್ತ ಸುಸಜ್ಜಿತ ಬೇಲಿ ಹಾಕಿ ಭದ್ರತೆಯನ್ನು ಒದಗಿಸಬೇಕು” ಎಂದು ಇಲಾಖೆಗೆ ಆಗ್ರಹಿಸಿದರು.

“ರಂಗಯ್ಯನದುರ್ಗ ಕಾಡಂಚಿನ ಗ್ರಾಮಗಳ ಜನರಿಗೆ ಸ್ಮಶಾನ, ರಸ್ತೆ, ನೀರು ಸೇರಿದಂತೆ ಇತರ ಮೂಲಸೌಕರ್ಯಗಳು ಬೇಕು. ಇವುಗಳನ್ನು ಕಲ್ಪಿಸಿಕೊಡಿ. ಹಂದಿಗಳ ಕಾಟದಿಂದ ಬೆಳೆಗಳು ನಾಶವಾಗುತ್ತಿವೆ. ಹಾಗಾಗಿ ಪರಿಹಾರ ಮೊತ್ತ ಹೆಚ್ಚಿಸಿ. ಕಾಡಂಚಿನ ಜನರಿಗೆ ಭದ್ರತೆ ಮತ್ತು ಅಭಿವೃದ್ಧಿ ಕೆಲಸಗಳಾಗಬೇಕು” ಎಂದು ಕಾಡಂಚಿನ ಜನರು ಹತ್ತು ಹಲವು ಬೇಡಿಕೆಗಳನ್ನು ಈ ದಿನ.ಕಾಮ್ ತಂಡದ ಮುಂದಿಟ್ಟರು.

ಈ ಮಧ್ಯೆ ಅರಣ್ಯ ಪ್ರೇಮಿಯೊಬ್ಬರು ಮಾತನಾಡಿ‌, “ವನ್ಯಜೀವಿಗಳಿಗೆ ಮಳೆ ಕೊರತೆಯಿಂದ ನೀರಿನ ಬವಣೆ ಎದುರಾಗುತ್ತಿದ್ದು, ಅಲ್ಲಲ್ಲಿ ಐದು ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳಿಗೆ ನೀರು ಬಿಡುವ ಕೆಲಸ ಸರಿಯಾಗಿ ಆಗುತ್ತಿಲ್ಲ. ಹಾಗಾಗಿ ಅವು ಹೊರಗೆ ತಿರುಗಾಡಲು ಬರುತ್ತಿವೆ. ನೀರು ಪೂರೈಕೆ ಸಮರ್ಪಕವಾಗಿ ಆಗಬೇಕು” ಎಂದರು.

ಇದನ್ನೂ ಓದಿದ್ದೀರಾ? ಚಿತ್ರದುರ್ಗ | ಹೂಳು ತುಂಬಿರುವ ಚರಂಡಿಗಳು; ಮೂಲ ಸೌಕರ್ಯಗಳ ಮರೀಚಿಕೆ

“ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಾವಿರಾರು ಎಕರೆ ಪ್ರದೇಶವನ್ನು ರಂಗಯ್ಯನದುರ್ಗ ಸಂರಕ್ಷಿತ ಕೊಂಡುಕುರಿ ಪ್ರದೇಶವನ್ನಾಗಿ ಮಾಡಿದ್ದು ಸ್ವಾಗತಾರ್ಹ. ಆದರೆ 10 ವರ್ಷ ಕಳೆದರೂ ಕೂಡ ಕಾಡಂಚಿನ ಗ್ರಾಮಗಳ ಜನರಿಗೆ ಸ್ಮಶಾನ ಸೇರಿದಂತೆ ಇತರ ಯಾವುದೇ ಸೌಲಭ್ಯಗಳನ್ನು ಒದಗಿಸದೆ ಇರುವುದು ಅರಣ್ಯ ಅಧಿಕಾರಿಗಳ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷಕ್ಕೆ ನಿದರ್ಶನವಾಗಿದೆ. ಇದನ್ನು ಸೂಕ್ತವಾಗಿ ಪರಿಗಣಿಸಿ ಕೂಡಲೇ ಪರಿಹಾರ ದೊರಕಿಸಬೇಕು” ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಹೆಸರು ಹೇಳಲಿಚ್ಚಿಸದ ಸ್ಥಳೀಯ ಅರಣ್ಯಾಧಿಕಾರಿ ಮಾತನಾಡಿ, “ವನ್ಯಜೀವಿ ಪ್ರದೇಶದಲ್ಲಿ ಸ್ಮಶಾನಕ್ಕೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳು, ಜಿ ಪಂ ಸಿಇಒ ಮತ್ತು ತಹಶೀಲ್ದಾರ್ ಜೊತೆ ಮಾತನಾಡುತ್ತೇವೆ. ಸೂಕ್ತ ಪರಿಹಾರಕ್ಕೆ ಶಿಫಾರಸು ಮಾಡುತ್ತೇವೆ” ಎಂದು ಉತ್ತರಿಸಿದರು.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X