ಜನರು ಪರಸ್ಪರ ಸಹಕಾರ ಮನೋಭಾವ ಹೊಂದಬೇಕು. ನೆರೆಯವರು, ಬಡ ಬಗ್ಗರ ಸಂಕಷ್ಟಗಳನ್ನು ನಮ್ಮ ಸಂಕಷ್ಟಗಳೆಂದು ಭಾವಿಸಿ ನೆರವಾಗಬೇಕು ಎಂದು ಮಂಗಳೂರಿನ ಬದ್ರಿಯಾ ಜುಮ್ಮಾ ಮಸೀದಿ ಆಲಂಪಾಡಿ ಇದರ ಖತೀಬರಾದ ಸಲೀಮ್ ಅರ್ಶಾದಿಯವರು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಪಾಣೆಮಂಗಳೂರು ಶಾಖೆಯ ಅಧೀನದ ಸಮಾಜ ಸೇವಾ ಘಟಕದ ವತಿಯಿಂದ ಸಜೀಪ ಮುನ್ನೂರು ಗ್ರಾಮದ ಆಲಂಪಾಡಿಯಲ್ಲಿ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ಜ.ಇ. ಸಮಾಜ ಸೇವಾ ವಿಭಾಗದ ವ್ಯವಸ್ಥಾಪಕ ಮುಹಮ್ಮದ್ ಸಿದ್ದಿಕ್ ಜಕ್ರಿಬೆಟ್ಟು ಮಾತನಾಡಿ, “ದೇವನ ಪ್ರತಿಫಲದ ಪ್ರಜ್ಞೆಯನ್ನು ಬೆಳೆಸಿ ಪ್ರಚಾರ ಬಯಸದೆ ಸಮಾಜ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿರಬೇಕು. ಇದು ಇಸ್ಲಾಮಿ ಕಾರ್ಯದ ಒಂದು ಭಾಗವಾಗಿದೆ. ಇತರರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಸರಳ ಕಾರ್ಯಕ್ರಮ ನಡೆಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಕ್ರಮ ಪ್ರಶ್ನಿಸಿದ ರೈತ; ಬೂಟಿನಲ್ಲಿ ಹೊಡೆಯಲು ಮುಂದಾದ ತಂಬಾಕು ಮಂಡಳಿ ಅಧಿಕಾರಿ
ಹವ್ವಾ ಮಸೀದಿ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ಮನೆಯನ್ನು ಉದ್ಘಾಟಿಸಿ ಕೊನೆಯಲ್ಲಿ ಸಮಾರೋಪ ನುಡಿಗಳನ್ನಾಡಿ ಪ್ರಾರ್ಥಿಸಿದರು.
ಜಮಾಅತೆ ಇಸ್ಲಾಮಿ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ಅಬ್ದುಲ್ಲಾ ಚೆಂಡಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.