ಪೊಲೀಸರ ಮನೆಗೆ ನುಗ್ಗಿ ಚಿನ್ನಾಭರಣ ದೋಚುವಾಗ ಕಳ್ಳರು ಸಿಕ್ಕಿಬಿದ್ದಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ವಿದ್ಯಾನಗರದಲ್ಲಿ ನಡೆದಿದೆ.
ಬಡವನಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಮಹೇಶ್ ಅವರು ಕುಟುಂಬ ಸಹಿತ ಹೊರಗೆ ಹೋಗಿದ್ದರು. ಕುಟುಂಬಸ್ಥರು ಯಾರೂ ಇಲ್ಲದ್ದನ್ನು ಖಚಿತ ಪಡಿಸಿಕೊಂಡ ನಾಲ್ವರು ಕಳ್ಳರು ಕೈಗೆ ಗ್ಲೌಸ್ ಹಾಕಿಕೊಂಡು ಮಾರಕಾಸ್ತ್ರಗಳನ್ನು ಹಿಡಿದು ಬಾಗಿಲ ಬೀಗ ಮುರಿದಿದ್ದಾರೆ. ಮನೆಯೊಳಗೆ ಇಬ್ಬರು ಹೋದರೆ, ಮತ್ತಿಬ್ಬರು ತಂದಿದ್ದ ಕಾರಿನೊಳಗೆ ಕುಳಿತು ಸುತ್ತಲೂ ಪರಿಶೀಲಿಸುತ್ತಿದ್ದರು.
ಖದೀಮರ ಚಲನವಲನ ಗಮನಿಸಿದ ಅಕ್ಕ-ಪಕ್ಕದ ಮನೆಯವರು ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಮನೆಯ ಹೊರಗೆ ಕಾರಿನಲ್ಲಿದ್ದ ಇಬ್ಬರು ಖದೀಮರು ಪರಾರಿಯಾಗಿದ್ದಾರೆ.
ಮನೆಯೊಳಗಿದ್ದ ಇನ್ನಿಬ್ಬರು ಖದೀಮರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಕಳ್ಳರು ಹಲ್ಲೆಗೆ ಯತ್ನಿಸಿದ್ದಾರೆ. ಆದರೂ, ಆ ಇಬ್ಬರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾರ್ನಾಡ್ ರಂಗೋತ್ಸವ; ‘ರಂಗ ಚಿಂತನೆ’ ಪುಸ್ತಕ ಬಿಡುಗಡೆ
ಅವರಲ್ಲೊಬ್ಬ ಚಾಕುವಿನಿಂದ ತಾನೇ ಹೊಟ್ಟೆಗೆ ಚುಚ್ಚಿಕೊಂಡು ಹೈಡ್ರಾಮಾ ಮಾಡಿದ್ದಾನೆ. ಸ್ಥಳೀಯರ ಸಹಾಯದೊಂದಿಗೆ ಸೆರೆ ಸಿಕ್ಕ ಈ ಇಬ್ಬರು ಖದೀಮರನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಬಂಧಿತರು ರಿಯಾದ್ ಮತ್ತು ಖಾಲಿದ್ ಎಂದು ತಿಳಿದುಬಂದಿದೆ.
ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಮತ್ತಿಬ್ಬರು ಖದೀಮರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.