ಹಿಂದೆ ಮಲೆನಾಡೆಂದರೆ ಸಮೃದ್ಧತೆಗೆ ಹೆಸರಾಗಿತ್ತು. ಆದರೆ, ಇಂದು ಆತಂಕಗಳ ಬೀಡಾಗಿದೆ. ಇದಕ್ಕೆ ಕಾರಣಗಳು ಹಲವಾರಿವೆ. ಅವುಗಳಲ್ಲಿ ಮುಖ್ಯವಾಗಿ ಆರ್ಥಿಕತೆಗೆ ಬೆನ್ನೆಲುಬಾಗಿದ್ದ ಕೃಷಿ ಇಂದು ತೀವ್ರ ಸ್ವರೂಪದ ಬಿಕ್ಕಟ್ಟಿಗೆ ಜಾರಿಕೊಳ್ಳುತ್ತಿರುವುದು ತುಂಬಾ ಆತಂಕ ಹುಟ್ಟಿಸುತ್ತದೆ. ಕೃಷಿಯನ್ನು ಅವಲಂಬಿಸಿರುವಂತಹ ಕಾರ್ಮಿಕರ ಸ್ಥಿತಿ ತೀರಾ ಸೋಚನೀಯವಾಗುತ್ತಿದೆ. ರೈತರ ಮನಸುಗಳಲ್ಲಿ ಮಲೆನಾಡಿನ ಕೃಷಿಗೆ ಇನ್ನು ಮುಂದೆ ಭವಿಷ್ಯ ಇಲ್ಲವೇನೋ ಎಂಬ ಆತಂಕ ಮನೆ ಮಾಡಿದೆ.
ಮಲೆನಾಡಿನ ಕಾರ್ಮಿಕರ ಬವಣೆಗೂ ಮಲೆನಾಡಿನ ಕೃಷಿ ಬಿಕ್ಕಟ್ಟಿಗೂ ಅವಿನಾಭಾವ ಸಂಬಂಧವಿದೆ. ಮಲೆನಾಡಿನ ಕೃಷಿ ಬಿಕ್ಕಟ್ಟಿನಲ್ಲಿದೆ ಎಂದರೆ, ಕಾರ್ಮಿಕರ ಸ್ಥಿತಿ ಕೂಡ ಹದಗೆಟ್ಟಿದೆ ಅಂತ ಅರ್ಥ. ಇತ್ತೀಚಿನ ದಿನಗಳಲ್ಲಿ ಈ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುತ್ತಿದೆ. ಇದರ ಪರಿಣಾಮ ರೈತರ ಮಕ್ಕಳು, ಕೂಲಿ ಕಾರ್ಮಿಕರು ಉದ್ಯೋಗ ಹರಸಿ ಪೇಟೆ-ಪಟ್ಟಣಗಳಿಗೆ ವಲಸೆ ಹೋಗುವ ದುಸ್ಥಿತಿ ಬಂದಿದೆ. ಗ್ರಾಮೀಣ ಜನರ ಈ ಬಿಕ್ಕಟ್ಟಿಗೆ ಸರ್ಕಾರಗಳೇ ನೇರ ಹೊಣೆ. ಸರ್ಕಾರಗಳು ತೆಗೆದುಕೊಂಡ ರೈತ ವಿರೋಧಿ, ಜನ ವಿರೋಧಿ ನೀತಿಗಳು ಹಾಗೂ ನವಉದಾರವಾದಿ ನೀತಿಗಳ ಪರಿಣಾಮ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಈ ನೀತಿಗಳಿಂದ ಕೃಷಿ ಕ್ಷೇತ್ರ ಕಾರ್ಪೊರೇಟ್ ಕುಳಗಳ ಕಪಿಮುಷ್ಠಿಯಲ್ಲಿ ಬಂದಿಯಾಗಿದೆ.
ಒಂದು ಕಡೆ ವಿದೇಶಿ ಕಂಪನಿಗಳ ಕೈಯಲ್ಲಿರುವ ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಬೆಲೆ ವಿಪರೀತ ಹೆಚ್ಚಾಗಿದೆ. ಇನ್ನೊಂದು ಕಡೆ ಉತ್ಪನ್ನಗಳ ದರಗಳು ಸ್ಥಿರವಾಗಿಲ್ಲದೆ ಕುಸಿತ ಕಂಡಿದೆ. ಇದರ ನಡುವೆ ಮತ್ತೊಂದು ವಿಪರ್ಯಾಸವೆಂದರೆ, ರೈತರ ಕೃಷಿ ಭೂಮಿಯನ್ನು ಅವರ ಕೈಯಿಂದ ಕಸಿದುಕೊಂಡು ಬಂಡವಾಳಿಗರ ಕೈಗೆ ನೀಡುವ ಹುನ್ನಾರ ಕೂಡ ತೆರೆ ಮರೆಯಲ್ಲಿ ನಡೆಯುತ್ತಿದೆ. ಇದೆಲ್ಲದರ ನಡುವೆ ಹವಾಮಾನ ವೈಪರಿತ್ಯ ಕೂಡ ಮಲೆನಾಡನ್ನು ದೊಡ್ಡ ಮಟ್ಟದಲ್ಲಿ ಬಾಧಿಸುತ್ತಿದೆ. ಅಷ್ಟೇ ಅಲ್ಲದೆ, ಸಣ್ಣ ಹಾಗೂ ಮಧ್ಯಮ ರೈತರಿಗೆ ಕಾರ್ಮಿಕರ ಸಮಸ್ಯೆ ಕೂಡ ಗಂಭೀರವಾಗಿ ಕಾಡುತ್ತಿದೆ. ಈ ಹಿಂದೆ ಕಾಡುತ್ತಿದ್ದ ಹಳದಿ ರೋಗ, ಕೊಳೆ ರೋಗದ ಜೊತೆಗೆ ಎಲೆ ಚುಕ್ಕಿ ರೋಗ ರೈತರಿಗೆ ಕೃಷಿ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಇದೆಲ್ಲದರಿಂದ ಮಲೆನಾಡಿನ ರೈತ ಹೈರಾಣಾಗಿ ತುಂಬಾ ಝರ್ಜರಿತನಾಗುತಿದ್ದಾನೆ.
ಇದೆಲ್ಲದಕ್ಕೆ ಒಂದು ಶಾಶ್ವತ ಪರಿಹಾರ ಹುಡುಕಿ ರೈತರ ರಕ್ಷಣೆ ಮಾಡಬೇಕಾದ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ಅಷ್ಟೇ ಅಲ್ಲದೆ ಮಲೆನಾಡಿನ ಜನರ ಬದುಕನ್ನು ಮೂರಾಬಟ್ಟೆ ಮಾಡುವ ದಿಸೆಯಲ್ಲಿ ಸೆಕ್ಷನ್-4, ಸೆಕ್ಷನ್-17ರಂತಹ ಜನ ವಿರೋಧಿ ಅರಣ್ಯ ಕಾಯ್ದೆಗಳನ್ನು ಜನರ ಮೇಲೆ ಏರುತಿದ್ದಾರೆಂದು ಕರ್ನಾಟಕ ಜನಶಕ್ತಿಯ ಕೆ.ಎಲ್ ಅಶೋಕ್ ಆರೋಪಿಸಿದ್ದಾರೆ.
ಮಲೆನಾಡಿನ ಕೃಷಿ ಬಿಕ್ಕಟ್ಟಿನ ನೇರ ಪರಿಣಾಮ ಇಲ್ಲಿನ ಕಾರ್ಮಿಕರ ಮೇಲೆ ಬೀಳುತ್ತಿದೆ. ಇಲ್ಲಿನ ಕಾರ್ಮಿಕರ ಪರಿಸ್ಥಿತಿ ಹೇಗಿದೆ ಎಂದರೆ, ಯಾವುದು ನಿಶ್ಚಿತವಾಗಿಲ್ಲ. ಸರಿಯಾದ ಕೂಲಿ ನಿರ್ಧಾರ ಇಲ್ಲ. ಸಮಯ ಖಾಯಂ ಕೆಲಸ ಇತ್ಯಾದಿ ಯಾವುದು ಆಗ್ತಾ ಇಲ್ಲ. ಕೆಲಸಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ತೋಟದ ಮಾಲೀಕರು ನಿರ್ವಹಣೆ ಕಷ್ಟ ಅಂತ ಹೇಳಿಕೊಂಡು ಬೇರೆ ಬೇರೆ ರಾಜ್ಯದ ಕೆಲಸಗಾರರನ್ನು ತೋಟಗಳಿಗೆ ಕರೆಸಿಕೊಳ್ಳುತ್ತಿದ್ದಾರೆಂದು ಮಲೆನಾಡಿನ ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಕೃಷಿ ಕಾರ್ಮಿಕ ಮಂಜುನಾಥ್, “ಕೂಲಿ ಕೆಲಸ ಮಾಡುವ ಜನರು ಬಹಳ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಆ ವೇತನ ಕಾರ್ಮಿಕರ ಜೀವನ ನಿರ್ವಹಣೆಗೆ ಸಾಲದಾಗುತ್ತಿದೆ. ಇಲ್ಲಿನ ಕೃಷಿ ಕಾರ್ಮಿಕರು ಕಷ್ಟಪಟ್ಟು ದುಡಿದು ಸಂಘ-ಸಂಸ್ಥೆಗಳಲ್ಲಿ ಸಾಲ ಮಾಡಿ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರಗಳು ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಕಾಗುತ್ತಿಲ್ಲ. ಮಕ್ಕಳಿಗೆ ಮತ್ತಮ ಶಿಕ್ಷಣ ಕೊಡಿಸುವುದೂ ಸವಾಲಾಗಿದೆ” ಎಂದು ಹೇಳಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಮಳೆಯೂ ಕೈಕೊಡುತ್ತಿದ್ದು, ಕೃಷಿ ಕೆಲಸಗಳು ಸಿಗುತ್ತಿಲ್ಲ. ಇದೆಲ್ಲದಕ್ಕೂ ಸರಿಯಾದ ಪರಿಹಾರ ಹುಡುಕಬೇಕಾಗಿದೆ. ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕುವುದರೊಂದಿಗೆ ಕಾರ್ಮಿಕರ ಮಕ್ಕಳಿಗೆ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗಬೇಕು. ಸರ್ಕಾರಗಳು ಭೂರಹಿತರಿಗೆ ಭೂಮಿ ನೀಡಬೇಕು. ಭೂಮಿ ವಸತಿ ಸೇರಿದಂತೆ ಅಭಿವೃದ್ಧಿ ಪರ ಜನಸ್ನೇಹಿ ಕೆಲಸಗಳಿಗೆ ಆದ್ಯತೆ ನೀಡಬೇಕಿದೆ” ಎಂದು ಅವರು ಒತ್ತಾಯಿಸಿದ್ದಾರೆ.
“ಮಲೆನಾಡಿನ ಕೃಷಿ ಬಿಕ್ಕಟ್ಟು ಮತ್ತು ಕಾರ್ಮಿಕರ ಬವಣೆಯನ್ನು ಮನಗಂಡು ಇದರಿಂದ ಹೊರಬರುವ ಪ್ರಯತ್ನವಾಗಿ ಎಲ್ಲ ಜಾತಿ ಧರ್ಮ ಸಮುದಾಯದವರು ಪಕ್ಷ ಬೇದ ಮರೆತು ಇದಕ್ಕೊಂದು ಸರಿಯಾದ ಶಾಶ್ವತವೆನಿಸುವ ಒಂದು ಗುಣಾತ್ಮಕವಾದ ಪರಿಹಾರಗಳನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ನಡೆಯಬೇಕು” ಎಂದು ಪರಿಸರ ಹೋರಾಟಗಾರ ಕಲ್ಕುಲಿ ವಿಠಲ್ ಹೆಗ್ಡೆ ಹೇಳಿದ್ದಾರೆ.