- ವಿವಿಧ ಬೆಳೆಗಳ ಹೊಸ ತಳಿಗಳ ತ್ವರಿತ ಬೀಜ ವಿತರಣೆಗೆ ಒಪ್ಪಂದ
- ಕೃಷಿ ಸಚಿವ ಚಲುವರಾಯಸ್ವಾಮಿ ಸಮ್ಮುಖದಲ್ಲಿ ಒಡಂಬಡಿಕೆ
ವಿವಿಧ ಬೆಳೆಗಳ ಹೊಸ ತಳಿಗಳ ತ್ವರಿತ ಬೀಜ ವಿತರಣೆ ಸಂಬಂಧ ರಾಜ್ಯ ಬೀಜ ನಿಗಮ ಮತ್ತು ಹೈದರಾಬಾದ್‌ನ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ (ICRISAT) ನಡುವೆ ಮಹತ್ವದ ಒಡಂಬಡಿಕೆಗೆ ಸಹಿ ಮಾಡಿವೆ.
ವಿಕಾಸಸೌಧದ ಕೃಷಿ ಸಚಿವರ ಕೊಠಡಿಯಲ್ಲಿ ಸೋಮವಾರ ಕೃಷಿ ಸಚಿವ ಚಲುವರಾಯಸ್ವಾಮಿಯವರ ಸಮ್ಮುಖದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ
ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಸ್.ದೇವರಾಜ, ಹೈದರಾಬಾದ್ ನ ICRISAT ನ ಉಪ ಮಹಾ ನಿರ್ದೇಶಕರಾದ
ಡಾ. ಅರವಿಂದ ಕುಮಾರ್ ಅವರು ಈ ಒಡಂಬಡಿಕೆಗೆ ಸಹಿ ಹಾಕಿದರು.
ICRISAT ಒಂದು ಅಂತಾರಾಷ್ಟ್ರೀಯ ಬೆಳೆ ತಳಿ ಸಂಶೋಧನಾ ಕೇಂದ್ರವಾಗಿದ್ದು ಹೊಸ ತಂತ್ರಜ್ಞಾನದ ಮೂಲಕ ಅರೆ ಶುಷ್ಕ ವಾತಾವರಣಕ್ಕೆ ಹೊಂದಿಕೊಳ್ಳುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಪರಿಚಯಿಸುತ್ತಿದೆ. ಈಗಾಗಲೇ ಈ ಸಂಸ್ಥೆಯು ಅಭಿವೃದ್ಧಿಪಡಿಸಿದ ಶೇಂಗಾ, ತೊಗರಿ, ಜೋಳ, ಕಡಲೆ ಮತ್ತು ಸಜ್ಜೆ ತಳಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚಲಿತದಲ್ಲಿವೆ.
ಈ ಒಡಂಬಡಿಕೆಯಿಂದ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ICRISAT ನ ಹೊಸ ತಳಿಗಳು ಲಭ್ಯವಾಗಲಿದ್ದು ಸಂಸ್ಥೆಯ ಉತ್ಪನ್ನಗಳ ಪಟ್ಟಿ ಬಲಿಷ್ಠವಾಗುತ್ತದೆ. ಇದರಿಂದ ರೈತರಿಗೆ ತೊಗರಿ, ಕಡಲೆ, ಜೋಳ, ಸಜ್ಜೆ ಮತ್ತು ಸಿರಿಧಾನ್ಯಗಳಲ್ಲಿ ಹೊಸ ಶಕ್ತಿ ವರ್ಧಕ ತಳಿಗಳನ್ನು ಪರಿಚಯಿಸಲು ಅನುಕೂಲವಾಗಲಿದೆ.
ಈ ಸುದ್ದಿ ಓದಿದ್ದೀರಾ? ಜಾಗೃತಿ ಅರಿವು ಸಪ್ತಾಹ | ಸಚಿವಾಲಯದ ಅಧಿಕಾರಿ, ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದ ಸಿಎಂ ಸಿದ್ದರಾಮಯ್ಯ
ಈ ಹೊಸ ತಳಿಗಳನ್ನು KSSCಯ ತಳಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (VRDC) ಧಾರವಾಡದಲ್ಲಿ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಮೌಲ್ಯವೀಕರಣ ಮಾಡಿ ವಿವಿಧ ಬೆಳೆಗಳಲ್ಲಿ ಹೊಸ ತಳಿ ಬಿಡುಗಡೆ ಮಾಡಲು ಸಹಾಯವಾಗುತ್ತದೆ.
ಒಟ್ಟಾರೆ ಮೂರು ವರ್ಷಗಳ ಒಡಂಬಡಿಕೆಯ ಅವಧಿಯಲ್ಲಿ, ಬರ ಮತ್ತು ರೋಗ ನಿರೋಧಕ ತಳಿಗಳನ್ನು ರಾಜ್ಯದ ರೈತರಿಗೆ ತ್ವರಿತವಾಗಿ ತಲುಪಿಸಲು ಉಪಯೋಗವಾಗುತ್ತದೆ. ಹಾಗೂ ಈ ಬೆಳೆಗಳಲ್ಲಿ ರಾಜ್ಯದ ಸರಾಸರಿ ಉತ್ಪಾದಕತೆಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ, ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ, ವಿ.ಆರ್.ಡಿ.ಸಿ, ಮುಖಸ್ಥ ಡಾ. ವಿ.ಎಸ್.ಸಂಗಮ, ಧಾರವಾಡ ಹಾಗೂ ICRIST ನ ಮುಖ್ಯ ಸಂಶೋಧಕ ಡಾ. ಪ್ರಕಾಶ ಗಂಗಶೆಟ್ಟಿ, ಡಾ.ಅಶೋಕ ಕುಮಾರ್ ಇದ್ದರು.