ದಸರಾ ಹಬ್ಬದ ಹಿನ್ನೆಲೆ, ಬೆಂಗಳೂರು-ಮೈಸೂರು ನಡುವೆ ಕಾರ್ಯಾಚರಣೆ ನಡೆಸುವ ತಡೆರಹಿತ ಬಸ್‌ಗಳಿಗೆ ನಿಯಮಾವಳಿಗಳನ್ವಯ ಶೇ.20 ರಷ್ಟು ಪ್ರಯಾಣ ದರ ಹೆಚ್ಚಿಸಲಾಗುತ್ತದೆ. ಕಳೆದ 4 ದಶಕಗಳಿಂದಲೂ ಪ್ರತಿ ವರ್ಷ ದರ ಹೆಚ್ಚಳ ಮಾಡಲಾಗಿದೆ. ನಿಗದಿ ಮಾಡಿದ ಅವಧಿ ಮುಗಿದ ಕೂಡಲೇ ಮತ್ತೆ ಮೊದಲಿನ ಬಸ್ ಟಿಕೆಟ್ ದರ ಇರಲಿದೆ” ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ನಿಗಮ, “ಕಳೆದ 4 ದಶಕಗಳಿಂದಲೂ ಪ್ರತಿ ವರ್ಷ ದಸರಾ ನಿಮಿತ್ತ 10 ದಿನಗಳ ಅಥವಾ ಸೀಮಿತ ಅವಧಿಗೆ ಅನ್ವಯವಾಗುವಂತೆ, ಮೈಸೂರು – ಬೆಂಗಳೂರು ನಡುವೆ ಕಾರ್ಯಾಚರಣೆಯಾಗುವ ದಸರಾ ವಿಶೇಷ ತಡೆರಹಿತ ಬಸ್‌ಗಳಿಗೆ ನಿಯಮಾವಳಿಗಳನ್ವಯ ಶೇ.20 ರಷ್ಟು ಪ್ರಯಾಣ ದರ ಹೆಚ್ಚಿಸಲಾಗುವುದು. ಪ್ರಯಾಣ ದರವು ಸೀಮಿತ ಅವಧಿ ಮುಗಿದ ಕೂಡಲೇ ಸ್ಥಗಿತಗೊಳ್ಳುತ್ತದೆ. ಅದರಂತೆ, ಪ್ರಸ್ತುತ ದರವು ಕೂಡ ಅ.30ಕ್ಕೆ ಕೊನೆಗೊಳ್ಳಲಿದೆ. ಮೊದಲಿನ ದರದಲ್ಲಿಯೇ ಬಸ್‌ಗಳು ಕಾರ್ಯಾಚರಣೆಯಾಗುತ್ತವೆ” ಎಂದು ಹೇಳಿದೆ.
“ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಕರ ಒಂದು ಕಡೆ ಮಾತ್ರ ಜನ ಸಂದಣಿ ಇರುತ್ತದೆ. ಇದರಿಂದ, ದರ ಹೆಚ್ಚಳ ಮಾಡಲು ಕಾರಣವಾಗಿದೆ. ಆದರೆ, ಅದೇ ಬಸ್‌ಗಳು ಮೈಸೂರಿನಿಂದ ವಾಪಸ್ ಬರುವಾಗ ಪ್ರಯಾಣಿಕರಿಲ್ಲದೆ ಕಾರ್ಯಾಚರಣೆ ಮಾಡಬೇಕಾಗಿರುತ್ತದೆ. ಆದ್ದರಿಂದ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಈ ಕ್ರಮವನ್ನು ಮೊದಲಿನಿಂದಲೂ ಅನುಸರಿಸಲಾಗುತ್ತಿದೆ. (ಇತ್ತೀಚೆಗೆ ಅಂದರೆ ಕಳೆದ ನಾಲ್ಕು ಐದು ವರುಷಗಳಲ್ಲಿಯೂ ಸಹ ಸೀಮಿತ ಅವಧಿಗೆ ಅನ್ವಯವಾಗುವಂತೆ ದಸರಾ ಸಮಯದಲ್ಲಿ ದರ ಹೆಚ್ಚಳ ಮಾಡಲಾಗಿದೆ.)” ಎಂದು ಮಾಹಿತಿ ನೀಡಿದೆ.
“ಮೈಸೂರು – ಬೆಂಗಳೂರು ನಡುವೆ ಈ ಹಿಂದೆ ದರ ಹೆಚ್ಚಳವಾಗಿರುವುದಕ್ಕೆ ಕಾರಣ, ಮೈಸೂರು ಎಕ್ಸ್‌ಪ್ರೆಸ್ ವೇ ಎರಡು ಟೋಲ್‌ಗಳ ದರದಲ್ಲಿ ಏಕಮಾರ್ಗದಲ್ಲಿಯೇ ₹1090 ಹೆಚ್ಚಳವಾಗಿದೆ. ಇದರಿಂದ, ಪ್ರಯಾಣ ದರದಲ್ಲಿ ಟೋಲ್ ಹಣವನ್ನು ಸೇರ್ಪಡೆಗೊಳಿಸಿ, ಹೆಚ್ಚಳ ಮಾಡಲಾಗಿತ್ತು. ಈ ದರವು ಎಕ್ಸ್‌ಪ್ರೆಸ್ ವೇ ಅಲ್ಲಿ ಕಾರ್ಯಾಚರಣೆಯಾಗುವ ತಡೆರಹಿತ ಬಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಎಕ್ಸ್‌ಪ್ರೆಸ್ ವೇ ಹೊರತುಪಡಿಸಿ ನೇರ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ವೇಗದೂತ ಸಾರಿಗೆಗಳಲ್ಲಿ ಈಗಲೂ ಹಳೆಯ ಪ್ರಯಾಣ ದರವೇ ಚಾಲ್ತಿಯಲ್ಲಿದೆ” ಎಂದು ಸ್ಪಷ್ಟಣೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ನಗರದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ; ಜನರಲ್ಲಿ ಮನೆ ಮಾಡಿದ ಆತಂಕ
“ಇದು ಸಾಮಾನ್ಯ ಪ್ರಕ್ರಿಯೆ ಆಗಿದ್ದು, ರಾಜ್ಯ/ ಅಂತರರಾಜ್ಯದ ಯಾವುದೇ ಭಾಗದಲ್ಲಿ ಟೋಲ್ ದರ ಹೆಚ್ಚಳವಾದಲ್ಲಿ, ಆ ಮಾರ್ಗದ ಬಸ್‌ಗಳಲ್ಲಿ ದರ ಹೆಚ್ಚಳವಾಗುವುದು ನಿರಂತರವಾಗಿ ಸಾರಿಗೆ ಸಂಸ್ಥೆಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿದೆ” ಎಂದು ಹೇಳಿದೆ.