ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ದೂರು ನೀಡಿದ ಕಾರಣ ಅಂಗಡಿಗಳಲ್ಲಿ ತಮಗೆ ದಿನಸಿ ಸೇರಿದಂತೆ ದಿನಬಳಕೆ ಅಗತ್ಯ ವಸ್ತು ನೀಡುತ್ತಿಲ್ಲವೆಂದು ಆರೋಪಿಸಿ ಪರಿಶಿಷ್ಟ ಸಮುದಾಯದ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ನಾರಗೊಂಡನಹಳ್ಳಿ ಗ್ರಾಮದ ಎಂಟು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆಯೆಂದು ಎರಡು ದಿನದ ಹಿಂದೆ ಗ್ರಾಮದ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದರು.
ಆ ಅಂಗಡಿಗಳ ಮಾಲೀಕರು ಇದೀಗ “ನಮ್ಮ ವಿರುದ್ಧ ದೂರು ನೀಡಿದ್ದೀರಾ. ನಿಮಗೆ ಯಾವುದೇ ಸಾಮಗ್ರಿ ನೀಡುವುದಿಲ್ಲ, ಬೇರೆ ಕಡೆ ತೆಗೆದುಕೊಳ್ಳಿ” ಎಂದು ವಾಪಸ್ ಕಳುಹಿಸುತ್ತಿದ್ದಾರೆಂದು ಮಹಿಳೆಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ನಾವು ಯಾರಿಗೂ ಸಾಮಗ್ರಿ ನೀಡುವುದಿಲ್ಲವೆಂದು ಹೇಳಿಲ್ಲ. ಈಗಾಗಲೇ ಅವರಿಗೆ ಸಾಲವನ್ನೂ ನೀಡಿದ್ದೇವೆ. ಬೆಲೆ ಏರಿಕೆಯಿಂದ ಕೆಲವು ಪದಾರ್ಥ ತರುತ್ತಿಲ್ಲ” ಎಂದು ಅಂಗಡಿ ಮಾಲೀಕರು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಪಟ್ಟನಾಯಕನಹಳ್ಳಿ ಠಾಣೆ ಪೊಲೀಸರು ಶನಿವಾರ ಅಂಗಡಿ ಮಾಲೀಕರು ಮತ್ತು ಪರಿಶಿಷ್ಟ ಸಮುದಾಯದ ಮಹಿಳೆಯರನ್ನೂ ಕರೆಸಿ ಮಾತನಾಡಿಸಿದ್ದಾರೆ.
“ಯಾರಿಗೂ ದಿನಸಿ ನೀಡದೆ ವಾಪಸ್ ಕಳುಹಿಸಿಲ್ಲ. ಒಂದು ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ ಪ್ರಕರಣ ದಾಖಲಿಸಿ” ಎಂದು ಅಂಗಡಿ ಮಾಲೀಕರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಮದ್ಯ ಮಾರಾಟ ಮಾಡುತ್ತಿದ್ದ ನರಸಿಂಹಮೂರ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗ್ರಾಮದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಒಮ್ಮತದಿಂದ ಇದ್ದಾರೆ” ಎಂದು ಪಿಎಸ್ಐ ಭವಿತಾ ತಿಳಿಸಿದ್ದಾರೆ.