- ‘ಪ್ರಯತ್ನ ವಿಫಲವಾಗಿದ್ದರಿಂದ ಹತಾಶೆಯಾದ ಮಾಧ್ಯಮಗಳು’
- ಮುಸ್ಲಿಮ್ ಸಮುದಾಯದ ಮೇಲೆ ಗೂಬೆ ಕೂರಿಸಲು ಪ್ರಯತ್ನ
ಕೇರಳದಲ್ಲಿ ನಡೆದ ಬಾಂಬ್ ಸ್ಫೋಟವನ್ನು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟುವ ಆತುರ ತೋರಿಸಿದ ಮಾಧ್ಯಮಗಳ ಮನಸ್ಥಿತಿ ಹೆಚ್ಚು ಅಪಾಯಕಾರಿ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ, “ಕೇರಳದ ನಡೆದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಈಗಾಗಲೇ ಮಾರ್ಟಿನ್ ಎಂಬ ವ್ಯಕ್ತಿ ಮಧ್ಯಾಹ್ನದೊಳಗೆ ಶರಣಾಗಿದ್ದು ಇಲ್ಲಿನ ಕೆಲವು ಮಾಧ್ಯಮಗಳಿಗೆ ತೀವ್ರ ಸ್ವರೂಪದ ಹತಾಶೆ ತರಿಸಿದೆ. ಯಾಕೆಂದರೆ ಸ್ಪೋಟ ನಡೆದ ತಕ್ಷಣ ಮುಸ್ಲಿಮ್ ಸಮುದಾಯದ ಮೇಲೆ ಗೂಬೆ ಕೂರಿಸಲು ತೋರಿದ ಪ್ರಯತ್ನ ವಿಫಲವಾಗಿದ್ದರಿಂದ ಹತಾಶರಾಗಿದ್ದಾರೆ” ಎಂದು ಟೀಕಿಸಿದ್ದಾರೆ.
“ಪವರ್ ಟಿವಿ ಮುಸ್ಲಿಮ್ ಟೋಪಿದಾರಿ ವ್ಯಕ್ತಿಯ ಫೋಟೋ ಹಾಕಿ ಸುಳ್ಳು ಹರಡಲು ತೀವ್ರ ಆತುರ ತೋರಿತ್ತು. ಪವರ್ ಮಾತ್ರವಲ್ಲ ಇನ್ನು ಕೆಲ ಮಾಧ್ಯಮಗಳು ಆತುರದ ವರದಿ ಪ್ರಕಟಿಸಿ ಈಗ ಕೈ ಹಿಚುಕಿಕೊಂಡಿದ್ದಾರೆ. ಕೆಲವು ಪೀತ ಮಾಧ್ಯಮಗಳು ಸಮಯೋಚಿತವಾಗಿ ವರ್ತಿಸುವ ಬದಲಿಗೆ ಸಮಾಜಘಾತಕವಾಗಿ ವರ್ತಿಸಿವೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಧಾನಸೌಧ ವ್ಯಾಪಾರಸೌಧ ಮಾಡಿದ್ದೇ ಬಿಜೆಪಿ: ಪ್ರಿಯಾಂಕ್ ಖರ್ಗೆ ಕಿಡಿ
“ಆರೋಪಿ ಮುಸ್ಲಿಮ್ ನಾಮಧಾರಿಯಲ್ಲ ಎಂಬುದು ಅವರನ್ನು ಹತಾಶೆಗೊಳಗಾಗುವಂತೆ ಮಾಡಿತು. ಕೆಲವರು ಈ ಬಾಂಬ್ ಸ್ಫೋಟವನ್ನು ಇಸ್ರೇಲ್ ವಿರುದ್ದದ ಪ್ರತಿಭಟನೆಗೆ ಜೋಡಿಸಿ ದ್ವೇಷ ಹಬ್ಬಿಸುವ ಎಲ್ಲ ಪ್ರಯತ್ನ ಮಾಡಿದವು. ಮಾರ್ಟಿನ್ ತಾನೇ ಬಾಂಬ್ ಇರಿಸಿದ್ದು ಎಂದು ತಪ್ಪೊಪ್ಪಿಕೊಂಡರೂ ಆತನನ್ನು ತೀವ್ರ ವಿಚಾರಣೆಗೊಳಪಡಿಸಬೇಕು. ವಾಸ್ತವ ವಿಚಾರ ಬಹಿರಂಗವಾಗಬೇಕು” ಎಂದು ಆಗ್ರಹಿಸಿದ್ದಾರೆ.
“ನೆರೆಯ ರಾಜ್ಯದಲ್ಲಿ ಈ ಘಟನೆ ನಡೆದರೂ ಕೆಲವು ಮಾಧ್ಯಮಗಳ ಪೂರ್ವಗ್ರಹ ಪೀಡಿತ ನಡೆಯು ಪ್ರಾಮಾಣಿಕ ಪತ್ರಕರ್ತರ ಮೇಲೆಯೂ ನಂಬಿಕೆ ಕಳಕೊಳ್ಳುವಂತೆ ಮಾಡುತ್ತಿದೆ. ಇಂತಹ ಸಮಾಜಘಾತಕ ಪ್ರಕ್ರಿಯೆಯ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು” ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.