‘ಭಾರತ ಸರ್ಕಾರವು ಹಮಾಸ್ ಅನ್ನು ನಿಷೇಧಿಸಬೇಕಾಗಿಲ್ಲ, ಇಂದು ಪತ್ರಿಕೆ ಓದುವ ಯಾರಿಗಾದರೂ ಹಮಾಸ್ ಹತ್ತು ದಿನಗಳ ಹಿಂದೆ ಏನು ಮಾಡಿದೆ ಎಂದು ತಿಳಿದಿದೆ. ಅವರು ಅತ್ಯಾಚಾರ ಮಾಡಿದ್ದಾರೆ, ಮಕ್ಕಳನ್ನು ಕೊಂದಿದ್ದಾರೆ ಮತ್ತು ಜನರ ತಲೆ ಕಡಿದಿದ್ದಾರೆ; ನಿಮಗೆ ಕಾನೂನು ಅಗತ್ಯವಿಲ್ಲ, ನಿಮಗೆ ಸಾಮಾನ್ಯ ಜ್ಞಾನ ಬೇಕು. ಭಯೋತ್ಪಾದನಾ ವಿಷಯವು ಹೊಸದೇನಲ್ಲ ಮತ್ತು ಇದು ನಾಲ್ಕು ದಿನಗಳ ಹಿಂದೆ ಸಂಭವಿಸಿಲ್ಲ 1997 ರಿಂದಲೂ ನಡೆಯುತ್ತಿದೆ. ಕೇರಳದ ಮಲಪ್ಪುರಂನಲ್ಲಿ ಯುವ ಚಳುವಳಿ ಒಕ್ಕೂಟ ಆಯೋಜಿಸಿದ್ದ ರ್‍ಯಾಲಿಯಲ್ಲಿ ಹಮಾಸ್ ನಾಯಕರೊಬ್ಬರು ಭಾಗವಹಿಸಿದ್ದಾರೆ. ಇದರಿಂದ ನೇರವಾಗಿ ಗೊತ್ತಾಗುತ್ತದೆ, ಕೇರಳ ಸರ್ಕಾರ ಹಮಾಸ್ ಸಂಘಟನೆಗೆ ನೇರವಾಗಿ ಬೆಂಬಲ ನೀಡುತ್ತಿದೆ ಎನ್ನುವುದು” ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಹಮಾಸ್ – ಇಸ್ರೇಲ್ ಸಂಘರ್ಷದಲ್ಲಿ ಪ್ಯಾಲೆಸ್ತೀನ್ ಸ್ವತಂತ್ರಕ್ಕಾಗಿ ಹೋರಾಟ ನಡೆಸುತ್ತಿರುವ ಹಮಾಸ್ ಸಂಘಟನೆಯ ವಿರುದ್ಧ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಒಳಗೊಂಡು ಎಲ್ಲರೂ ಹಮಾಸ್ ವಿರುದ್ಧ ಒಂದೇ ನಿಲುವನ್ನು ಸ್ಪಷ್ಟಪಡಿಸುತ್ತಿದ್ದಾರೆ.
ಸುಮಾರು ನಾಲ್ಕೈದು ತಿಂಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಒಂದೆರಡು ನಿಮಿಷವೂ ತುಟಿ ಬಿಚ್ಚದ ಕೇಂದ್ರ ಸರ್ಕಾರ ಹಮಾಸ್ – ಇಸ್ರೇಲ್ ಸಂಷರ್ಷ ಶುರುವಾದ ಕ್ಷಣಾರ್ಧದಲ್ಲೇ ತಾವು ಇಸ್ರೇಲಿಗೆ ಬೆಂಬಲ ನೀಡುವುದಾಗಿ ಪ್ರಧಾನಿ ಘಂಟಾಘೋಷವಾಗಿ ಹೇಳುತ್ತಾರೆ. ನಮ್ಮದೇ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯನ್ನು ನಿಲ್ಲಿಸಲು ಪ್ರಯತ್ನಿಸಿದ ಪ್ರಧಾನಿ ಇನ್ನೆಲ್ಲೂ ದೂರದ ರಾಷ್ಟ್ರದಲ್ಲಿ ತಮ್ಮ ದೇಶದ ಅಸ್ತಿತ್ವ ಹಾಗೂ ವಿಮೋಚನೆಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆ ವಿರುದ್ಧ ಮಾತನಾಡುತ್ತಾರೆ. ತಮ್ಮ ಪಕ್ಷ ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಕೂಡ ಸರ್ಕಾರದ ಮಾತನ್ನೇ ಪುನರುಚ್ಚರಿಸಬೇಕು ಎಂದು ಆದೇಶ ಹೊರಡಿಸುತ್ತಾರೆ.
ದೇಶಾದಾದ್ಯಂತವಿರುವ ಕೆಲವು ಮಾಧ್ಯಮಗಳನ್ನು ಹೊರತುಪಡಸಿ ಉಳಿದ ಗೋಧಿ ಮಾಧ್ಯಮಗಳು ಹಮಾಸ್ ವಿರುದ್ಧವೇ ದಿನನಿತ್ಯವು ವರದಿ ಮೂಲಕ ವಾಸ್ತವವನ್ನು ತಿರುಚಿಸುತ್ತಿವೆ. ಪ್ಯಾಲೆಸ್ತೀನ್ ರಾಷ್ಟ್ರವನ್ನು ಉಗ್ರ ರಾಷ್ಟ್ರವಾಗಿ ಬಿಂಬಿಸುತ್ತಿವೆ. ಸುಳ್ಳನ್ನೇ ದಿನನಿತ್ಯವೂ ಪಠಿಸುತ್ತಿವೆ.
ಇತ್ತೀಚಿಗೆ ಒಂದು ಉದಾಹರಣೆಯಂಬಂತೆ ಇಸ್ರೇಲ್‌ನಲ್ಲಿ ಹಮಾಸ್ ನಾಯಕರು 40 ಮಕ್ಕಳ ತಲೆ ಕಡಿದಿದ್ದಾರೆ ಎಂಬ ಸುದ್ದಿಯನ್ನು ರಿಪಬ್ಲಿಕ್, ಎನ್‌ಡಿಟಿವಿ, ಟೈಮ್ಸ್ ನೌ, ಎಎನ್‌ಐ ಸೇರಿದಂತೆ ಭಾರತದ ಪ್ರಮುಖ ಮಾಧ್ಯಮಗಳು ಹಾಗೂ ಸುದ್ದಿ ಜಾಲತಾಣಗಳು ಪ್ರಕಟಿಸಿದ್ದವು. ಆದರೆ ಈ ಸುದ್ದಿಗೆ ಯಾವುದೇ ಆಧಾರ ಇಲ್ಲ ಸುಳ್ಳು ಸುದ್ದಿ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಎನ್‌ಬಿಸಿ ನ್ಯೂಸ್ ಫ್ಯಾಕ್ಟ್‌ಚೆಕ್ ಮೂಲಕ ಪ್ರಕಟಿಸಿತು. ಸತ್ಯವನ್ನು ಪರಿಶೀಲಿಸದೆ ಏಕಾಏಕಿ ಈ ರೀತಿಯ ಸುದ್ದಿ ಪ್ರಕಟಿಸಿ ಗೋಧಿ ಮಾಧ್ಯಮಗಳು ತಮ್ಮ ಬಂಡವಾಳವನ್ನು ತಾವೇ ಬಯಲು ಮಾಡಿಕೊಂಡಿದ್ದವು.
ಇಸ್ರೇಲ್ ದಾಳಿಯಿಂದ ಗಾಜಾ ನಗರ ಮಸಣವಾಗಿದೆ. ಮಕ್ಕಳು, ಮಹಿಳೆಯರು ಒಳಗೊಂಡು 7 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಜನ ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಇಷ್ಟೆಲ್ಲ ದುರಂತ ಸಂಭವಿಸಿದ್ದರೂ ಯುದ್ಧದ ಭಾಗವಾಗಿ ಪ್ಯಾಲಿಸ್ತೀನ್‌ನ ಗಾಝಾಪಟ್ಟಿಗೆ ಆಹಾರ, ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಇಸ್ರೇಲ್ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೆ ವಿಶ್ವಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಗಾಜಾಪಟ್ಟಿಗೆ ನೆರವು ಸೇವೆ ಮತ್ತು ಸರಕುಗಳನ್ನು ಪೂರೈಸದಂತೆ ಗಡಿಯನ್ನು ಇಸ್ರೇಲ್ ಮುಚ್ಚಿದೆ. ನೆಲೆ ಕಳೆದುಕೊಂಡು ಮಸೀದಿ, ಚರ್ಚ್‌ಗಳಲ್ಲಿ ಆಶ್ರಯ ಪಡೆಯುತ್ತಿರುವವರ ಮೇಲೆ ಇಸ್ರೇಲ್ ಸೇನಾ ಪಡೆ ದಾಳಿ ನಡೆಸಿ ನೂರಾರು ಜನರನ್ನು ಕೊಂದಿದೆ.
ಈ ಸುದ್ದಿ ಓದಿದ್ದೀರಾ? ಗಾಝಾ ಮೇಲೆ ಇಸ್ರೇಲ್ ದಾಳಿ: 50 ಸಾವಿರ ಗರ್ಭಿಣಿಯರ ವೈದ್ಯಕೀಯ ಆರೈಕೆಯ ಲಭ್ಯತೆ ಬಗ್ಗೆ ವಿಶ್ವಸಂಸ್ಥೆ ಕಳವಳ
ಇಸ್ರೇಲಿಗೆ ಕೂಲಿಗೆ ಬರುವ ಗಾಝಾಪಟ್ಟಿಯ ಪ್ಯಾಲಿಸ್ತೀಯನ್ನರು
ಗಾಝಾಪಟ್ಟಿಯ ಬಗ್ಗೆ ಇನ್ನೊಂದು ಪ್ರಮುಖ ವಿಚಾರವೇನೆಂದರೆ ಗಾಝಾಪಟ್ಟಿಯನ್ನು ವಿಶ್ವಸಂಸ್ಥೆಯು ಬಂದೀಖಾನೆ ಎಂದು ಕರೆಯುತ್ತದೆ. ಗಾಜಾಪಟ್ಟಿಯ ವಿಸ್ತೀರ್ಣ 365 ಚದರ ಕಿ.ಮೀಯಷ್ಟು ಇದೆ. ಇದು ಬೆಂಗಳೂರು ನಗರದ ಅರ್ಧದಷ್ಟು ವಿಸ್ತೀರ್ಣ. ಇದರಲ್ಲಿ ಅರ್ಧದಷ್ಟು ಕೃಷಿಭೂಮಿ ಇದೆ. ಈ ಸಣ್ಣ ಪ್ರದೇಶದಲ್ಲಿ 23 ಲಕ್ಷದಷ್ಟು ಪ್ಯಾಲೆಸ್ತೀಯನರು ವಾಸಿಸುತ್ತಿದ್ದಾರೆ. ಈ ಪ್ರದೇಶ 52 ಕಿ.ಮೀ.ನಷ್ಟು ಉದ್ದದ ಗಡಿ ಹೊಂದಿದ್ದು, ಗಡಿ ಉದ್ದಕ್ಕೂ 18 ಅಡಿ ಎತ್ತರದ ಬೇಲಿಯನ್ನು ಇಸ್ರೇಲ್ ನಿರ್ಮಿಸಿದೆ. ಗಾಝಾಪಟ್ಟಿಗೆ ನೀರು, ವಿದ್ಯುತ್ ಮತ್ತು ಆಹಾರವನ್ನು ಇಸ್ರೇಲ್ ಪೂರೈಸುತ್ತದೆ.
ಗಾಜಾಪಟ್ಟಿಯಲ್ಲಿರುವ ಪ್ಯಾಲೆಸ್ತೀನಿಯನ್ ಕೂಲಿಕಾರರು ಕೆಲಸಕ್ಕಾಗಿ ನಿತ್ಯ ಇಸ್ರೇಲಿಗೆ ಬರುತ್ತಾರೆ. ಗಡಿಯಲ್ಲಿ ತಪಾಸಣೆ ಮಾಡಿ ಅವರನ್ನು ಇಸ್ರೇಲ್‌ನೊಳಗೆ ಬಿಡಲಾಗುತ್ತದೆ. ಸಂಜೆ ಅವರು ವಾಪಸಾಗದಿದ್ದರೆ ಅವರನ್ನು ಸೆರಮನೆಗೆ ಹಾಕಿ ಹಿಂಸೆ ನೀಡಲಾಗುತ್ತದೆ. ಪ್ರಸ್ತುತ ಸಂಘರ್ಷ ಏರ್ಪಟ್ಟಿರುವುದರಿಂದ ಗಾಝಾಪಟ್ಟಿಯ ಗಡಿಯನ್ನು ಬಂದ್ ಮಾಡಲಾಗಿದ್ದು, ಬಡ ಕೂಲಿಕಾರರು ಕೆಲಸವಿಲ್ಲದೆ ಹಸಿವಿನ ಜೊತೆ ಇಸ್ರೇಲ್ ಸೇನಾ ದಾಳಿಯಂದಲೂ ಪರಿತಪಿಸುತ್ತಿದ್ದಾರೆ
ಅಲ್ಲದೆ ಗಾಝಾದಲ್ಲಿ ಇಸ್ರೇಲ್ ದಾಳಿಯಿಂದ ಯುದ್ಧದ ಕಾನೂನುಗಳು ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ದೈನಂದಿನ ಉಲ್ಲಂಘನೆಯಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಆತಂಕ ವ್ಯಕ್ತಪಡಿಸಿದೆ. ಅಂದಾಜು 50,000 ಗರ್ಭಿಣಿ ಮಹಿಳೆಯರಿಗೆ, ಹಾಗೆಯೇ ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರಿಗೆ ವೈದ್ಯಕೀಯ ಆರೈಕೆಯ ಲಭ್ಯತೆಯ ಕೊರತೆ ಎದುರಾಗಿರುವ ಬಗ್ಗೆ ಕಳವಳಗೊಂಡಿರುವ ವಿಶ್ವಸಂಸ್ಥೆ ವೈದ್ಯಕೀಯ ಸೌಲಭ್ಯಗಳು, ವೈದ್ಯಕೀಯ ಸಿಬ್ಬಂದಿ, ಗಾಯಗೊಂಡವರು ಮತ್ತು ರೋಗಿಗಳ ವಿರುದ್ಧ ದಾಳಿ ನಡೆಸುವುದು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಇತ್ತೀಚಿಗೆ ತಿಳಿಸಿತ್ತು.
ಇಲ್ಲಿಯವರೆಗೆ ತಮ್ಮ ಸ್ವಂತ ಸೂರುಗಳಿಂದ ನಿರಾಶ್ರಿತರಾದ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ವಿವಿಧ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರಲ್ಲಿ ಹಲವರು ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ನಿರಾಶ್ರಿತರಿಗೆ ಸಮರ್ಪಕವಾದ ವಸತಿ ಸೌಲಭ್ಯ ಕಲ್ಪಿಸದ ಇಸ್ರೇಲ್ ಮಾನವ ಹಕ್ಕುಗಳ ಎಲ್ಲ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆ ಆಘಾತ ವ್ಯಕ್ತಪಡಿಸಿದೆ.
ಸ್ವತಃ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಹಮಾಸ್ ನಡೆಸಿರುವ ದಾಳಿ ‘ಯಾವುದೇ ಪ್ರಚೋದನೆಯಿಲ್ಲದೆ ನೆಡಿದಿದ್ದಲ್ಲ ಎಂಬುದನ್ನು ಗುರುತಿಸಬೇಕಿರುವುದು ಮಹತ್ವದ್ದು. ಪ್ಯಾಲೆಸ್ತೀನ್ ಜನರ ಜಾಗವನ್ನು 56 ವರ್ಷಗಳಿಂದ ಉಸಿರುಗಟ್ಟಿಸುವ ರೀತಿಯಲ್ಲಿ ಆಕ್ರಮಿಸಿಕೊಳ್ಳಲಾಗಿದೆ” ಎಂದು ಹೇಳಿದ್ದರು.
ಗಾಝಾಪಟ್ಟಿಯಲ್ಲಿ ಮಾನವೀಯ ನೆರವು ಒದಗಿಸಲು ಅವಕಾಶ ಮಾಡಿಕೊಡಬೇಕು ಎಂದು ಹಲವು ದೇಶಗಳು ಇಸ್ರೇಲ್‌ಅನ್ನು ಒತ್ತಾಯಿಸಿದ್ದವು. ಈ ಸಂಬಂಧ ವಿಶ್ವಸಂಸ್ಥೆಯ ‘ಭದ್ರತಾ ಮಂಡಳಿ’ಯಲ್ಲಿ ನಾಲ್ಕು ನಿರ್ಣಯಗಳನ್ನು ಮಂಡಿಸಲಾಗಿತ್ತು. ಈ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೋರ್ಡನ್ ನಿರ್ಣಯವೊಂದನ್ನು ಕೂಡ ಮಂಡಿಸಿತು. ಆದರೆ ಅಮೆರಿಕ ಮತ್ತು ರಷ್ಯಾ ವಿರುದ್ಧವಾಗಿ ತಮ್ಮ ವಿಟೋ ಅಧಿಕಾರ ಬಳಸಿದ್ದರಿಂದ ಈ ನಿರ್ಣಯಗಳು ಅಂಗೀಕಾರವಾಗಲಿಲ್ಲ. ಅದಲ್ಲದೆ ಪ್ಯಾಲಿಸ್ತೀನ್ – ಇಸ್ರೇಲ್ ಮಧ್ಯೆ ಕದನ ವಿರಾಮ ತರುವಲ್ಲಿ ಭದ್ರತಾ ಮಂಡಳಿ ಕೂಡ ವಿಫಲವಾಯಿತು.
ಆದರೆ ಒಂದು ಸಂತಸದ ಸಂಗತಿಯೆಂದರೆ ಯುದ್ಧವನ್ನು ನಿಲ್ಲಿಸಬೇಕು ಎಂದು ಜೋರ್ಡನ್ ಮಂಡಿಸಿದ್ದ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತಕ್ಕೆ ಹಾಕಲಾಯಿತು. ಸಭೆಯಲ್ಲಿ ಹಾಜರಿದ್ದ 179 ದೇಶಗಳಲ್ಲಿ 121 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದದರೆ, ಇಸ್ರೇಲ್, ಅಮೆರಿಕ ಸೇರಿ 14 ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದವು. ದುರಾದೃಷ್ಟ ಸಂಗತಿಯಂದರೆ ಭಾರತವೂ ಸೇರಿ 44 ದೇಶಗಳು ಮತದಾನದಿಂದ ದೂರ ಉಳಿದವು. ತಾವು ಇಸ್ರೇಲ್‌ನಂಥ ಉಗ್ರ ರಾಷ್ಟ್ರದ ಪರ ಹಾಗೂ ಯುದ್ಧಕ್ಕೆ ಸನಿಹ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಣಯದಿಂದ ದೂರ ಉಳಿಯುವ ಮೂಲಕ ಸಾಬೀತುಪಡಿಸಿದ್ದಾರೆ.