ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿಕೆಯನ್ನು ಪತ್ನಿ ಸುಧಾ ಮೂರ್ತಿ ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಸುಧಾ ಮೂರ್ತಿ, ನಾರಾಯಣ ಮೂರ್ತಿ ವಾರಕ್ಕೆ 80 ರಿಂದ 90 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದಿದ್ದಾರೆ.
“ಅವರು ವಾರಕ್ಕೆ 80ರಿಂದ 90 ಗಂಟೆ ಕೆಲಸ ಮಾಡಿದ್ದಾರೆ. ಹಾಗಾಗಿ ಅದಕ್ಕಿಂತ ಕಮ್ಮಿ ಏನು ಅನ್ನೋದು ಅವರಿಗೆ ಗೊತ್ತಿಲ್ಲ. ಅವರು ನಿಜವಾದ ದುಡಿಮೆಯನ್ನೇ ನಂಬಿದ್ದಾರೆ, ಅದೇ ರೀತಿ ಬದುಕಿದ್ದಾರೆ. ಹೀಗಾಗಿ ತಮಗೆ ಅನಿಸಿದ್ದನ್ನು ಹೇಳಿದ್ದಾರೆ. ನಮ್ಮ ಪತಿ ತಮ್ಮ ಮಾತಿನಂತೆ ಬದುಕಿದ್ದರು. ಅಲ್ಲದೆ ತಮ್ಮ ಪತಿ ಪ್ಯಾಶನ್ ಹಾಗೂ ನಿಜವಾದ ಕಠಿಣ ಪರಿಶ್ರಮವನ್ನು ನಂಬುತ್ತಾರೆ” ಎಂದು ಹೇಳಿದ್ದಾರೆ.
70 ಗಂಟೆ ದುಡಿಮೆಯ ದಂಪತಿಯ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಪೈಕಿ ಕೆಲವರು ಸಮರ್ಥಿಸಿಕೊಂಡಿದ್ದರೆ ಬಹುತೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ಹಾಸ್ಯ ಚಟಾಕಿಯ ಮೂಲಕ ಉತ್ತರ ನೀಡಿರುವ ವೈವಾಹಿಕ ಅಂತರ್ಜಾಲ ಜಾಲತಾಣ ‘ಶಾದಿ ಡಾಟ್ ಕಾಂ’ ಸಂಸ್ಥಾಪಕ ಅನುಪಮ್ ಮಿತ್ತಲ್, “ಇಷ್ಟು ವರ್ಷಗಳ ನಂತರವೂ ವಾರಕ್ಕೆ 70 ಗಂಟೆ ದುಡಿಯುತ್ತಿದ್ದಾರೆಯೇ” ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲ ಭಯೋತ್ಪಾದಕರೂ ಮುಸ್ಲಿಮರಲ್ಲ ಎನ್ನುವ ಸತ್ಯವನ್ನು ನಂಬದವರು
ಅನುಪಮ್ ಮಿತ್ತಲ್ ಪೋಸ್ಟ್‌ಗೆ ನೆಟ್ಟಿಗರೊಬ್ಬರು ಕಮೆಂಟ್ ಮಾಡಿ, “ನೀವು ಉದ್ಯಮಿ, ಅದಕ್ಕಾಗಿಯೇ ಈ ರೀತಿ ಹೇಳುತ್ತಿದ್ದೀರಿ. ಈಗ ಹೇಳಿ, ನೀವು ಇನ್ಫೋಸಿಸ್ ಅಥವಾ ಇನ್ನಾವುದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೆ, ಕೆಲಸ ಮಾಡಲು ಒಂದೇ ಕಾರಣವೆಂದರೆ ಹಣ. ಇದು ವಾಣಿಜ್ಯೋದ್ಯಮಿ ಮತ್ತು ಉದ್ಯೋಗಿ ನಡುವಿನ ವ್ಯತ್ಯಾಸ” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನುಪಮ್, ‘ನಾನು ಒಂದು ಕಾಲದಲ್ಲಿ ಉದ್ಯೋಗಿಯಾಗಿದ್ದೆ. ಆದರೆ ಈಗ ಮಾಡುತ್ತಿರುವಂತೆಯೇ ಆಗಲೂ ನನ್ನ ಉದ್ಯೋಗವನ್ನು ಪ್ರೀತಿಸುತ್ತಿದ್ದೆ’ ಎಂದಿದ್ದಾರೆ.
After all these years, still working 70 hour weeks 😉 pic.twitter.com/A9cnbRniGX
— Anupam Mittal (@AnupamMittal) October 28, 2023
ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿವಿ ಮೋಹನ್‌ದಾಸ್ ಪೈ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದ ನಾರಾಯಣ ಮೂರ್ತಿ, ಯುವಕರಿಗೆ 70 ಗಂಟೆಗಳ ಕೆಲಸದ ವಾರಗಳನ್ನು ಸೂಚಿಸಿದ್ದರು. ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಿದೆ ಎಂದು ಹೇಳಿದ್ದರು. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತದ ಯುವಕರು ಹೆಚ್ಚುವರಿ ಗಂಟೆಗಳ ಕೆಲಸವನ್ನು ಮಾಡಬೇಕಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಮಾಡಿದಂತೆ ಮಾಡಬೇಕಾಗುತ್ತದೆ ಎಂದಿದ್ದರು.