ಚಲಿಸುತ್ತಿರುವ ರೈಲುಗಳ ಮೇಲೆ ಕಲ್ಲು ತೂರಾಟ, ರೈಲುಗಳು ಹಾಗೂ ರೈಲ್ವೆ ಆವರಣಗಳಲ್ಲಿ ದಹಿಸುವ ವಸ್ತುಗಳನ್ನು ಸಾಗಿಸುವುದರ ವಿರುದ್ಧ ಅ.30 ರಿಂದ ಒಂದು ತಿಂಗಳ ಅವಧಿಯ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನೈರುತ್ಯ ರೈಲ್ವೆ ಇಲಾಖೆ, “ಈ ಕಾರ್ಯಾಚರಣೆಯ ಸಲುವಾಗಿ ರೈಲ್ವೆ ಸಂರಕ್ಷಣಾ ಪಡೆ (ರೈಲ್ವೆ ಸಂರಕ್ಷಣಾ ಪಡೆ) ರೈಲ್ವೆ ಮಂಡಳಿ, ನವದೆಹಲಿಯ ಮಹಾನಿರ್ದೇಶಕ ಮನೋಜ್ ಯಾದವ ಅವರ ಸೂಚನೆಯಂತೆ ಬೆಂಗಳೂರು ವಿಭಾಗದ ಆರ್‌ಪಿಎಫ್ ಅಧಿಕಾರಿಗಳು ಮತ್ತು ವಿಭಾಗದ ಸಿಬ್ಬಂದಿಯ ತಂಡವನ್ನು ರಚಿಸಲಾಗಿದೆ” ಎಂದು ಹೇಳಿದೆ.
“ಜತೆಗೆ, ರೈಲು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್ ಅವರ ಮಾರ್ಗದರ್ಶನದಲ್ಲಿ ಈ ತಂಡವು ಬೀದಿ ನಾಟಕಗಳು ಅಲ್ಲದೆ ಜಾಗೃತಿ ಮೂಡಿಸುವಂತಹ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಿದೆ” ಎಂದು ಮಾಹಿತಿ ನೀಡಿದೆ.
“ನಾನಾ ರೈಲು ನಿಲ್ದಾಣಗಳಲ್ಲಿ ಮತ್ತು ರೈಲು ಹಳಿಗಳ ಬಳಿ ಕಲ್ಲು ತೂರಾಟದ ಘಟನೆಗಳು ವರದಿಯಾದ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅ.30 ರಂದು ‘ಕೃಷ್ಣದೇವರಾಯ’ ಹಾಲ್ಟ್ ರೈಲು ನಿಲ್ದಾಣದ ಬಳಿ “ಬೀದಿ ನಾಟಕ” ನಡೆಸುವ ಮೂಲಕ ಕಾರ್ಯಚರಣೆಗೆ ಚಾಲನೆ ನೀಡಲಾಗಿದೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋಗೆ ʼಬಸವಣ್ಣʼ ನಾಮಕರಣ: ಸಾಮಾನ್ಯರು, ಗಣ್ಯರು ಹೇಳುವುದೇನು?
“ರೈಲುಗಳ ಮೇಲೆ ಕಲ್ಲು ತೂರಾಟವು ಕ್ರಿಮಿನಲ್ ಅಪರಾಧವಾಗಿದ್ದು, ರೈಲ್ವೇ ಕಾಯಿದೆ 1989 ರ ಸೆಕ್ಷನ್ – 153 ಮತ್ತು 154 ರ ಅಡಿಯಲ್ಲಿ ದಂಡ ಅಥವಾ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ರೈಲು ಪ್ರಯಾಣದ ಸಮಯದಲ್ಲಿ ದಹನಕಾರಿ ವಸ್ತುಗಳನ್ನು ಒಯ್ಯುವುದು ಶಿಕ್ಷಾರ್ಹ ಅಪರಾಧವಾಗಿದೆ. 1989ರ ರೈಲ್ವೆ ಕಾಯಿದೆಯ ಸೆಕ್ಷನ್ 164ರ ಅಡಿಯಲ್ಲಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹1000 ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು” ಎಂದು ಮಾಹಿತಿ ನೀಡಿದೆ.