ವಿದ್ಯುತ್‌ಅನ್ನು ಖಾಸಗೀಕರಣಗೊಳಿಸುವ ವಿದ್ಯುತ್ ತಿದ್ದುಪಡಿ ಮಸೂದೆ-2022ನ್ನು ಹಿಂದಕ್ಕೆ ಪಡೆಯಬೇಕು ಎಂದು ವಿವಿಧ ಸಂಘಟನೆಗಳು ತುಮಕೂರು ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿವೆ.
ವಿದ್ಯುತ್ ಬಳಕೆದಾರರ ಹೋರಾಟ ಸಮಿತಿ, ಸಿಐಟಿಯು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ಉಮೇಶ್, “ನರೇಂದ್ರ ಮೋದಿ ಸರ್ಕಾರವು ʼರಾಷ್ಟ್ರೀಯ ನಗದೀಕರಣ, ಪೈಪ್ ಲೈನ್ ಯೋಜನೆʼಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸುವ ಮೂಲಕ ವಿದ್ಯುತ್ ಬಳಕೆದಾರರ ರಕ್ತ ಹೀರಲು ಮುಂದಾಗಿದೆ” ಎಂದು ಆರೋಪಿಸಿದರು.
ವಿದ್ಯುತ್ ಪ್ರತಿಯೊಬ್ಬರ ಜೀವನದ ಅಗತ್ಯವಾಗಿದೆ. ವಿದ್ಯುತ್ ಇಲ್ಲದೆ ಜನರ ಬದುಕು, ವಿದ್ಯಾಬ್ಯಾಸ, ಆರೋಗ್ಯ ಕ್ಷೇತ್ರ, ವ್ಯಾಪಾರ-ವ್ಯವಹಾರ, ಕೈಗಾರಿಕಾ ಉತ್ಪಾದನೆ, ಕೃಷಿ-ವ್ಯವಸಾಯ ಇತ್ಯಾದಿಗಳು ಮುಂದೆ ಸಾಗುವುದೇ ಇಲ್ಲ. ಜೀವನದ ಅವಿಭಾಜ್ಯ ಅಂಗವಾಗಿರುವ ವಿದ್ಯುತ್, ಇನ್ನೂ ಸರ್ಕಾರದ ಒಡೆತನದಲ್ಲಿ ಇರುವುದರಿಂದ ಕ್ರಾಸ್ ಸಬ್ಸಿಡಿಯಿಂದ ಅಗ್ಗದ ಬೆಲೆಗೆ ವಿದ್ಯುತ್ ಲಭ್ಯವಾಗುತ್ತಿದೆ. ಹಾಗಾಗಿ ಅದು ಒಂದು ವ್ಯಾಪಾರವಾಗದೆ ಸೇವೆಯಾಗಿ ಉಳಿದಿದೆ ಎಂದರು.
ಕಾರ್ಮಿಕ ಮುಖಂಡ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಐಎಂಎಫ್- ವಿಶ್ವ ಬ್ಯಾಂಕ್‌ಗಳ ಒತ್ತಡಕ್ಕೆ ಭಾರತ ಸರ್ಕಾರ ಮಣಿಯುತ್ತಿದೆ. ಹಲವು ದಶಕಗಳಿಂದ ಜನತೆಯ ದುಡ್ಡಿನಲ್ಲಿ ಕಟ್ಟಲಾಗಿರುವ ಈ ವಿದ್ಯುತ್ ಕ್ಷೇತ್ರದ ಖಾಸಗೀಕರಣವು ದೇಶದ ಜನತೆ, ರೈತರು, ಉದ್ಯಮದಾರರು ಸೇರಿದಂತೆ ಇಡೀ ಸಮಾಜಕ್ಕೇ ಮಾರಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ನಿರ್ಧಾರಗಳ ವಿರುದ್ಧ ಧ್ವನಿ ಎತ್ತಿ ಇದನ್ನು ಸಾರ್ವಜನಿಕ ಕ್ಷೇತ್ರದಲ್ಲೇ ಉಳಿಸಲು ಒತ್ತಾಯಿಸಿ ರೈತರ ಪಂಪ್ ಸೆಟ್‌ಗಳಿಗೆ, ಹತ್ತು ಎಚ್‌ಪಿತನಕ ಸಿಗುತ್ತಿರುವ ಉಚಿತ ವಿದ್ಯುತ್ ನಿಲ್ಲಿಸದೆ ಮುಂದುವರಿಸಬೇಕು. ಆರ್. ಆರ್ ನಂಬರ್‌ಗಳಿಗೆ ಆಧಾರ್ ಜೋಡಣೆ ನಿಲ್ಲಿಸಬೇಕು. ವಿದ್ಯುತ್ ಉತ್ಪಾದನೆಯನ್ನು ಸಾರ್ವಜನಿಕ ಹೊಡಿಕೆ ಹೆಚ್ಚಳ, ಉತ್ಪಾದನೆ, ಸಾಗಣೆ ಮತ್ತು ವಿತರಣೆಯನ್ನು ಸರ್ಕಾರವೇ ನಿರ್ವಹಿಸಬೇಕು. ಪ್ರೀ ಪೇಡ್ ಸ್ಮಾರ್ಟ್ ಮೀಟರ್ ಅಳವಡಿಕೆ, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ವಿದ್ಯುತ್ ದರ ನಿಗದಿ ಮಾಡುವ ನೀತಿ ಕೈಬೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸೈಯದ್ ಮುಜೀಬ್, ಕಲ್ಪನಾ, ಎ.ಲೋಕೆಶ್, ಲಕ್ಷ್ಮೀಕಾಂತ್, ಮಾರುತಿ, ಮುತ್ತುರಾಜು, ವಸೀಮ್, ರಾಮು, ಇರ್ಫಾನ್, ಟಿ.ಜಿ. ಶೀವಲಿಂಯ್ಯ, ಮಂಜು, ಸಿದ್ದರಾಜು, ಮಂಜುನಾಥ್, ದೂಡ್ಡಸಿದ್ದಯ್ಯ, ಗಂಗಾಧರ್, ವಿದ್ಯತ್‌ಬಳಕೆದಾರರು ಭಾಗವಹಿಸಿದ್ದರು.