ಕಾಂಗ್ರೆಸ್ ಮುಖಂಡ, ದಲಿತ ನಾಯಕ ಶ್ರೀನಿವಾಸ ಕೊಲೆಯನ್ನು ಖಂಡಿಸಿ, ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಮಂಗಳವಾರ ಶ್ರೀನಿವಾಸಪುರ ತಾಲೂಕು ಬಂದ್ ನಡೆಸಿವೆ. ತಾಲೂಕಿನಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತರಾಗಿದ್ದ ಶ್ರೀನಿವಾಸ್ ಅವರನ್ನು ಅಕ್ಟೋಬರ್ 23ರಂದು ದುಷ್ಕರ್ಮಿಗಳ ಗುಂಪು ಕೊಲೆ ಮಾಡಲಾಗಿತ್ತು. ಅವರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿ ಶ್ರೀನಿವಾಸಪುರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಪ್ರತಿಭಟನಾಕಾರರು ಬೈಕ್ ರ್‍ಯಾಲಿ ನಡೆಸಿ ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡಿದ್ದಾರೆ. ಅವರ ಮನವಿಯಂತೆ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ, ಬೆಂಬಲ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸ್ ಅವರು ತಮ್ಮ ತೋಟದ ಬಳಿ ತಮ್ಮ ಸಂಗಡಿಗರೊಂದಿಗೆ ಕುಳಿತಿದ್ದಾಗ ಆರು ಮಂದಿ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಶ್ರೀನಿವಾಸ್ ಅವರ ಜೊತೆಗಿದ್ದ ಅಮರ್ ಹಾಗೂ ಕೃಷ್ಣಪ್ಪ ಎಂಬವರು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದರು.