ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಪರವಾಗಿ ಇಂದು(ಅ.31) ಸೋಲಿಡಾರಿಟಿ ಯೂತ್ ಮೂಮೆಂಟ್ ಎಂಬ ಯುವಜನರ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಲ್ಲದೇ, ಕಾರ್ಯಕ್ರಮ ನಡೆಯಬೇಕಿದ್ದ ಸಭಾಂಗಣದ ‘ಕೀ’ ಯನ್ನೇ ಪೊಲೀಸರು ಹೊತ್ತೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ಪ್ಯಾಲೆಸ್ತೀನ್‌ನ ಸಂಘರ್ಷ ಕುರಿತ ಕಾರ್ಯಕ್ರಮ ನಡೆಯಬೇಕಿದ್ದ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಬಿಫ್ಟ್ ಸಭಾಭವನಕ್ಕೆ ಹೈಗ್ರೌಂಡ್ಸ್ ಠಾಣಾ ಪೊಲೀಸರು ಮಂಗಳವಾರ ಬೆಳಗ್ಗೆ 11ರ ಸುಮಾರಿಗೆ ಆಗಮಿಸಿ, ಬೀಗ ಜಡಿದು, ಕೀ ಯನ್ನು ತಮ್ಮ ಬಳಿಯಲ್ಲೇ ಇಟ್ಟುಕೊಂಡು ಹೋಗಿರುವುದಾಗಿ ವರದಿಯಾಗಿದೆ.
ಇಂದು ಅಂದರೆ ಅ.31ರ ಸಂಜೆ 6:30ಕ್ಕೆ ‘ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ’ ಎಂಬ ಸಂಘಟನೆಯು ಕಾಂಗ್ರೆಸ್ ಕಚೇರಿಯ ಪಕ್ಕದಲ್ಲೇ ಇರುವ ಬಿಫ್ಟ್(BIFT) ಸಭಾಭವನದಲ್ಲಿ “ಪ್ಯಾಲೆಸ್ತೀನ್ ಸಮಸ್ಯೆ- ಒಂದು ಅವಲೋಕನ” ವಿಚಾರಗೋಷ್ಠಿ ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ, ಹಿರಿಯ ವಾಗ್ಮಿ ಶಿವಸುಂದರ್, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಬಿ.ಟಿ ವೆಂಕಟೇಶ್ ಹಾಗೂ ಸೋಲಿಡಾರಿಟಿ ಯೂತ್ ಮೂಮೆಂಟ್ ಸಂಘಟನೆಯ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಭಾಗವಹಿಸಿ, ಮಾತನಾಡುವವರಿದ್ದರು.
ಆದರೆ, ಸಂಜೆ ನಿಗದಿಯಾಗಿದ್ದ ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ಇಂದು ಬೆಳಗ್ಗೆಯೇ ಸಭಾಂಗಣವಿದ್ದ ಕಟ್ಟಡಕ್ಕೆ ಆಗಮಿಸಿದ ಹೈಗ್ರೌಂಡ್ಸ್ ಠಾಣೆಯ ಪೊಲೀಸರು, ಸಿಬ್ಬಂದಿಯಲ್ಲಿ ಕೀ ನೀಡುವಂತೆ ಕೇಳಿಕೊಂಡಿದ್ದಾರೆ. ಆ ಬಳಿಕ ಸಭಾಂಗಣಕ್ಕೆ ಅವರಾಗಿಯೇ ಬೀಗ ಹಾಕಿದ್ದು, ಕಾರ್ಯಕ್ರಮಕ್ಕೆ ಅನುಮತಿ ಇಲ್ಲ. ಹಾಗಾಗಿ, ಕೀ ಹಾಕಿರುವುದಾಗಿ ತಿಳಿಸಿ, ಕೀ ಯನ್ನು ಇಟ್ಟುಕೊಂಡು ಠಾಣೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ, ಆಯೋಜಕರನ್ನು ಠಾಣೆಗೆ ಕರೆಯಿಸಿದ ಪೊಲೀಸರು, ‘ಇಂದು ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಬೇಕಾದರೆ ರಾಜ್ಯೋತ್ಸವ ಮುಗಿದ ಬಳಿಕ ಅಂದರೆ ಗುರುವಾರ ಮಾಡಿ. ನೀವು ಇಂದು ಕಾರ್ಯಕ್ರಮ ನಡೆಸಿದರೆ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗುತ್ತದೆ’ ಎಂದು ಪೊಲೀಸರು ಹೇಳಿರುವುದಾಗಿ ಕಾರ್ಯಕ್ರಮದ ಆಯೋಜಕರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ತಿಳಿಸಿದ್ದಾರೆ.
ಈ ನಡುವೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಕೆಲವು ಗಣ್ಯರಿಗೂ ಕೂಡ ಪೊಲೀಸರು ಫೋನ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಕೇಂದ್ರ ಸರ್ಕಾರ, ಕಾಂಗ್ರೆಸ್ ಹೈಕಮಾಂಡ್ ಪ್ಯಾಲೆಸ್ತೀನ್ ಪರ: ರಾಜ್ಯ ಸರ್ಕಾರ ಯಾರ ಪರ?
ಇದೇ, ಸಭಾಭವನದಲ್ಲಿ ಅ. 26ರಂದು ವಿವಿಧ ಸಂಘಟನೆಗಳು ಸೇರಿಕೊಂಡು ಪ್ಯಾಲೆಸ್ತೀನ್ – ಇಸ್ರೇಲ್ ಸಂಘರ್ಷದ ಕುರಿತಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಇಸ್ರೇಲ್ ಕದನ ವಿರಾಮ ಘೋಷಿಸಬೇಕು. ಭಾರತ ಮಧ್ಯಪ್ರವೇಶ ಮಾಡಿ, ಶಾಂತಿ ಮಾತುಕತೆಗೆ ಮುಂದಾಳತ್ವ ವಹಿಸಲು ಆಗ್ರಹಿಸಿದ್ದರು.
ರಾಜ್ಯದಲ್ಲಿ ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ಸಂಘರ್ಷದ ಬಗ್ಗೆ ಇತ್ತೀಚೆಗೆ ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರತಿಭಟನೆ, ಸ್ಟೇಟಸ್ ಹಾಕಿದ್ದವರ ಮೇಲೆ ಒಟ್ಟು ನಾಲ್ಕು ಎಫ್‌ಐಆರ್ ದಾಖಲಾಗಿದ್ದವು. ಇವೆಲ್ಲವೂ ಪೊಲೀಸರೇ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣಗಳಾಗಿತ್ತು.
ಆದರೆ, ವಿಪರ್ಯಾಸವೆಂದರೆ ಭಾರತ ಈವರೆಗೆ ಪ್ಯಾಲೆಸ್ತೀನ್‌ನ ಪರವಾಗಿಯೇ ತನ್ನ ನಿಲುವು ಹೊಂದಿದೆ. ಅಲ್ಲದೇ, ಕಾಂಗ್ರೆಸ್‌ನ ವರಿಷ್ಠೆ ಸೋನಿಯಾ ಗಾಂಧಿಯವರು ಖುದ್ದು ಪ್ಯಾಲೆಸ್ತೀನ್ ಬೆಂಬಲಿಸಿ, ಸುದೀರ್ಘವಾದ ಲೇಖನವನ್ನು ಇತ್ತೀಚಿಗೆ ಬರೆದಿದ್ದರು. ಅದು ಸಾಕಷ್ಟು ಸುದ್ದಿ ಕೂಡ ಆಗಿತ್ತು. ಆದರೆ, ಅವರದ್ದೇ ಪಕ್ಷದ ಸರ್ಕಾರ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಎಲ್ಲವೂ ವಿರುದ್ಧವಾಗಿರುವ ಬೆಳವಣಿಗೆಗಳು ನಡೆಯುತ್ತಿದೆ.
ಈ ಎಲ್ಲ ಬೆಳವಣಿಗೆಯು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ನಿಯಂತ್ರಿಸುತ್ತಿರುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟು ಹಾಕಿದೆ.