ರಾಜ್ಯ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಲುಲು ಮಾಲ್‌ನಲ್ಲಿ ವಯಸ್ಸಾದ ವ್ಯಕ್ತಿಯೋರ್ವ ಜನರ ನಡುವೆಯೇ ಮಹಿಳೆ ಮತ್ತು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ, ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಡಿಯೋ ಆಧರಿಸಿ ತನಿಖೆ ನಡೆಸಿದ ಪೊಲೀಸರು ಇದೀಗ ವಯಸ್ಸಾದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಲುಲು ಮಾಲ್‌ನಲ್ಲಿ ಯುವತಿಗೆ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಸಭ್ಯವಾಗಿ ವರ್ತಿಸಿದ್ದ ವಯಸ್ಸಾದ ವ್ಯಕ್ತಿ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಎಂದು ಪತ್ತೆ ಹಚ್ಚಿದ್ದು, ಅಶ್ವಥ್ ನಾರಾಯಣ್ (6೦) ಎಂದು ಗುರುತಿಸಲಾಗಿದೆ.
ಈ ವ್ಯಕ್ತಿ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸಿ, ಕಳೆದ ಎಂಟು ತಿಂಗಳ ಹಿಂದೆ ನಿವೃತ್ತನಾಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಯನ್ನು ಹುಡುಕಿಕೊಂಡು ಪೊಲೀಸರು ಮನೆಗೆ ತೆರಳಿದ್ದಾರೆ. ಆದರೆ, ಈ ವೇಳೆ, ಆತ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾನೆ. ಮಾಗಡಿ ರೋಡ್ ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ಮುಂದುವರೆಸಿದ್ದಾರೆ.
ಏನಿದು ಘಟನೆ?
ಬೆಂಗಳೂರಿನ ಲುಲು ಮಾಲ್‌ನಲ್ಲಿ ಅಕ್ಟೋಬರ್ 29ರಂದು ಸಾಯಂಕಾಲ ಸುಮಾರು 6:30ಕ್ಕೆ ಬೇಕಂತಲೇ ವಯಸ್ಸಾದ ವ್ಯಕ್ತಿಯೊಬ್ಬ ಮಹಿಳೆಯರು ಮತ್ತು ಯುವತಿಯರು ಇರುವ ಕಡೆ ತೆರಳಿ ಅವರ ಹಿಂಭಾಗವನ್ನು ಸ್ಪರ್ಶಿಸಿ ಬರುತ್ತಿದ್ದನು.
ಮಾಲ್‌ನಲ್ಲಿ ಜನರು ಹೆಚ್ಚಾಗಿ ಇದ್ದ ಕಾರಣ ಈ ಘಟನೆಯನ್ನು ಯಾರೂ ಹೆಚ್ಚಾಗಿ ಗಮನಿಸಿಲ್ಲ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇದನ್ನು ಕಂಡು, ಈ ವಯಸ್ಸಾದ ವ್ಯಕ್ತಿಯನ್ನು ಹಿಂಬಾಲಿಸಿದ್ದಾರೆ. ಈ ವೇಳೆ, ವಯಸ್ಸಾದ ವ್ಯಕ್ತಿ ಯುವತಿಯೊಬ್ಬರ ಹಿಂದೆ ತೆರಳಿ ಆಕೆಯ ಹಿಂಬದಿಯನ್ನು ಸ್ಪರ್ಶಿಸಿದ್ದಾನೆ. ಯುವತಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಆಕೆಯ ದೇಹವನ್ನು ಮುಟ್ಟಿದ್ದಾನೆ. ಲೈಂಗಿಕವಾಗಿ ಪ್ರಸ್ತಾಪಿಸುವ ಸಲುವಾಗಿಯೇ ಯುವತಿಯ ಹಿಂಬದಿ ತೆರಳಿ ಆಕೆಯನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಯಶವಂತ ತೊಗಟವೀರ ಎಂಬುವವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದರು. ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ, ಲುಲು ಮಾಲ್ ಅಧಿಕಾರಿಯೊಬ್ಬರು ಘಟನೆಗೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲುಲು ಮಾಲ್‌ನಲ್ಲಿ ಯುವತಿ ಜತೆ ಅಶ್ಲೀಲ ವರ್ತನೆ ತೋರಿದ ವ್ಯಕ್ತಿ ವಿರುದ್ಧ ದೂರು ದಾಖಲು
ಈ ದೂರಿನ ಆಧಾರದ ಮೇಲೆ ಪೊಲೀಸರು, ಕಾರ್ಯಚರಣೆ ನಡೆಸಿ ಆರೋಪಿಯ ಗುರುತು ಪತ್ತೆ ಮಾಡಿದ್ದಾರೆ. ಆದರೆ, ಆತ ಪರಾರಿಯಾಗಿದ್ದಾನೆ.