ಸಿದ್ದರಾಮಯ್ಯನವರು ಪೀಠತ್ಯಾಗಕ್ಕೆ ತಾವು ಸಿದ್ಧ ಎಂದಿರುವುದು ನಿಜವೇ ಆದರೆ, ಅವರು ಯಾರ ರಾಜಕೀಯ ದಾಳಕ್ಕೂ, ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ. ಅದನ್ನು ಹೇಳಿಕೊಂಡು ತಿರುಗುವುದೂ ಬೇಕಾಗಿಲ್ಲ. ತಮ್ಮ ಕೊನೆಯ ಅವಧಿಯನ್ನು ಈ ರಾಜ್ಯದ ಜನರ ಹಿತಕ್ಕಾಗಿ ಪ್ರಾಮಾಣಿಕವಾಗಿ ವಿನಿಯೋಗಿಸಿದರೆ, ಕರ್ನಾಟಕ ಕಂಡ ಉತ್ತಮ ರಾಜಕಾರಣಿ ಎಂದು ಹೆಸರು ಉಳಿಸಿ ಹೋಗುವುದರಲ್ಲಿ ಅನುಮಾನವಿಲ್ಲ.
2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯನವರಲ್ಲಿ ಇದ್ದ ಗತ್ತು-ಗೈರತ್ತು ಈ ಬಾರಿ ಇಲ್ಲವಾಗಿದೆ; ಸಿಟ್ಟು-ಸೆಡವು ಕಾಣದಾಗಿದೆ; ದಿಟ್ಟತೆ-ಸ್ಪಷ್ಟತೆ ಮರೆಯಾಗಿದೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಸಾಮಾನ್ಯ ಆರೋಪ.
ಇದು ಸಹಜವಾಗಿಯೇ, ನಿಜಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೆದುವಾಗಿದ್ದಾರ? ಸಹಿಸಿಕೊಂಡು ಹೋಗುವ ಸಹನಾಮೂರ್ತಿಯಾಗಿದ್ದಾರ? ಅದು ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆಯಾ? ಅಧಿಕಾರಿಗಳ ಮೇಲಿನ ಹಿಡಿತ ತಪ್ಪಿ ಸರ್ಕಾರ ಹಳ್ಳ ಹಿಡಿಯುತ್ತಿದೆಯಾ? ಅಥವಾ ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವಾ? ಗ್ಯಾರಂಟಿಗಳ ಭಾರಕ್ಕೆ ಸಿದ್ದರಾಮಯ್ಯನವರು ಅಸಹಾಯಕ ಸ್ಥಿತಿ ತಲುಪಿದ್ದಾರಾ ಎಂಬ ಹತ್ತು ಹಲವು ಪ್ರಶ್ನೆಗಳಿಗೂ ದಾರಿ ಮಾಡಿಕೊಡುತ್ತದೆ.
ಏಕೆಂದರೆ, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಬಹುಮತ ಗಳಿಸಿದ ಸಂದರ್ಭದಲ್ಲಿ ಸಂಸದೀಯ ಪಕ್ಷದ ನಾಯಕರಾಗಲು ಮತ್ತು ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯನವರು ಶಾಸಕರ ಬೆಂಬಲವನ್ನು ಗುರಾಣಿಯಂತೆ ಬಳಸಿದ್ದರು. ತಮ್ಮ ಉಮೇದುವಾರಿಕೆ ಪ್ರಜಾಪ್ರಭುತ್ವದ ರೀತಿ-ನೀತಿಗೆ ಅನುಗುಣವಾಗಿದೆ ಎಂದು ದಿಟ್ಟ ನಿಲುವು ಪ್ರದರ್ಶಿಸಿದ್ದರು. ತಮ್ಮ ಸುದೀರ್ಘ ರಾಜಕೀಯ ಅನುಭವವನ್ನು ಪಣಕ್ಕಿಟ್ಟು ಹೋರಾಡಿದ್ದರು.
ಅದೇ ಸಂದರ್ಭದಲ್ಲಿ ‘ನಾನೇ ಮುಖ್ಯಮಂತ್ರಿʼ ಎಂದು ಹಠಕ್ಕೆ ಬಿದ್ದ ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ರೇಸ್ನಿಂದ ನಯವಾಗಿ ಹಿಂದಕ್ಕೆ ಸರಿಸಿದ್ದರು. ಮುಖ್ಯಮಂತ್ರಿಯಾಗುವಲ್ಲಿ ಪಕ್ಷದ ಹೈಕಮಾಂಡನ್ನೇ ತಮ್ಮ ಪರವಾಗಿ ಒಲಿಸಿಕೊಂಡಿದ್ದರು. ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಅಧಿಕಾರದ ಕುರ್ಚಿಯಲ್ಲಿ ಕೂತಿದ್ದರು.
ಆಶ್ಚರ್ಯವೆಂದರೆ, ಅಧಿಕಾರಕ್ಕೇರಿ ಆರು ತಿಂಗಳು ಕಳೆಯುವುದರೊಳಗೆ ʻಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲʼ ಎಂದು ಬಹಿರಂಗವಾಗಿ ಹೇಳಿಕೆ ಕೊಡುವ ಹಂತಕ್ಕೆ ಬಂದು ನಿಂತಿದ್ದಾರೆ. ಇದು ಕಾವೇರಿಗಾಗಿ ಹೋರಾಟಕ್ಕಿಳಿದಿದ್ದ ಮಂಡ್ಯದ ರೈತರ ಮುಂದೆ ಹೇಳಿದ ಮಾತಾದರೂ, ಆ ಸಂದರ್ಭದಲ್ಲಿ ಅವರನ್ನು ಸುಮ್ಮನಿರಿಸಲು ಬಳಸಿದ್ದರೂ, ಇದು ಯಾರಿಗೆ ಸಂದೇಶ ಮುಟ್ಟಿಸಬೇಕೋ ಅವರಿಗೆ ಮುಟ್ಟಿಸಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಪಕ್ಷದ ಹಿರಿಯ ನಾಯಕರಾದ ಬಿ.ಆರ್. ಪಾಟೀಲ್ ಮತ್ತು ಬಿ.ಕೆ. ಹರಿಪ್ರಸಾದ್ರ ಬಹಿರಂಗ ಬಂಡಾಯದಿಂದ ಹಿಡಿದು ಇತ್ತೀಚಿನ ಗೃಹ ಸಚಿವ ಜಿ. ಪರಮೇಶ್ವರ್ ಮನೆಯ ಭೋಜನಕೂಟದವರೆಗಿನ ರಾಜಕೀಯ ಘಟನಾವಳಿಗಳನ್ನು ಒಮ್ಮೆ ಅವಲೋಕಿಸಿದರೆ, ಇದು ಸಿಎಂ-ಡಿಸಿಎಂ ನಡುವಿನ ಗದ್ದುಗೆಗಾಗಿ ಗುದ್ದಾಟ ಎನ್ನುವುದು ಎಂತಹ ದಡ್ಡನಿಗೂ ಅರ್ಥವಾಗುತ್ತದೆ. ಹಾಗೆಯೇ ಇದು ಕಾಂಗ್ರೆಸ್ಸಿಗರಿಗೆ ಬಂದ ಕೇಡುಗಾಲ ಎನಿಸಿ ವ್ಯಥೆಯಾಗುತ್ತದೆ.
ಜೊತೆಗೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತ ಕ್ಷಣದಿಂದಲೇ, ‘ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕಾಗಿತ್ತು, ಆಗಿದ್ದೇನೆ’ ಎಂಬ ಸಂತೃಪ್ತ ಭಾವದಲ್ಲಿದ್ದಾರೆ. ಪುತ್ರ ಯತೀಂದ್ರ ಸಿದ್ದರಾಮಯ್ಯನವರಿಗೆ ಕ್ಷೇತ್ರದ ಉಸ್ತುವಾರಿ ವಹಿಸಿ, ಶಾಸಕನ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಸಚಿವರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟು, ಉದಾರಿ ಎನಿಸಿಕೊಂಡಿದ್ದಾರೆ. ಆದರೆ ಅವರೇನು ಮಾಡುತ್ತಿದ್ದಾರೆ ಎಂಬುದರತ್ತ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ತಮ್ಮ ತಂಟೆಗೆ ಬಾರದಿದ್ದರೆ ಸಾಕು ಎಂದು, ಅವರೇನು ಮಾಡುತ್ತಿದ್ದಾರೆ ಎಂಬುದರತ್ತ ನೋಡುವುದು, ಕೇಳುವುದು ಕೂಡ ಅಪರಾಧ ಎಂಬಂತೆ ವರ್ತಿಸತೊಡಗಿದ್ದಾರೆ.
ಇದು ಸಹಜವಾಗಿಯೇ ಪಕ್ಷದೊಳಗೆ ಅಪಸ್ವರಕ್ಕೆ ಹಾದಿ ಮಾಡಿಕೊಟ್ಟಿದೆ. ಲೋಕಸಭಾ ಚುನಾವಣೆಯ ನೆಪ ಭ್ರಷ್ಟಾಚಾರಕ್ಕೆ ಸುಗಮ ದಾರಿ ಕಲ್ಪಿಸಿಕೊಟ್ಟಿದೆ. ವರ್ಗಾವಣೆ ದಂಧೆಯ ರೂಪ ಪಡೆದಿದೆ. ಹಣ ಕೊಟ್ಟು ಆಯಕಟ್ಟಿನ ಸ್ಥಾನಕ್ಕೇರಿದ ಅಧಿಕಾರಿಯನ್ನು ಹದ್ದುಬಸ್ತಿನಲ್ಲಿಡುವುದು ಕಷ್ಟವಾಗಿದೆ. ಆಡಳಿತ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಭಿವೃದ್ಧಿ ಹಳ್ಳ ಹಿಡಿಯುತ್ತಿದೆ. ಐಟಿ ಅಧಿಕಾರಿಗಳ ದಾಳಿಗೆ ಸಿಕ್ಕ 42 ಕೋಟಿ ರೂಪಾಯಿಗೆ ಸಮಜಾಯಿಷಿ ಕೊಡಲು ಹೆಣಗಾಡುವಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗ 75ರ ಹರೆಯ. ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಯಾವ ಮಹತ್ವಾಕಾಂಕ್ಷೆಯೂ ಅವರಿಗಿಲ್ಲ. ಆದರೆ ಸಿಕ್ಕಿರುವ ಅಧಿಕಾರವನ್ನು ಸಂಪೂರ್ಣವಾಗಿ ಅನುಭವಿಸುವ, ಐದು ವರ್ಷ ಪೂರೈಸುವ ಆಸೆ ಇದೆ. ಅದರ ನಡುವೆ ನಾಡಿನ ಜನತೆಗಾಗಿ ಒಂದಿಷ್ಟು ಮಾಡುವ ಮಹದಾಸೆಯೂ ಇದ್ದಂತಿದೆ. ಜೊತೆಗೆ ಚಲ್ತಾ ಹೈ ಎಂಬ ಧೋರಣೆಯೂ ಇದೆ.
ಆದರೆ ಇದು ಇವತ್ತಿನ ರಾಜಕಾರಣಕ್ಕೆ ಒಗ್ಗದ ನಡೆ. ಬಕಾಸುರನಂತೆ ಬೆಳೆದು ನಿಂತಿರುವ ಬಿಜೆಪಿಯ ರಾಜಕಾರಣದೆದುರು ಇದು ದಡ್ಡ ನಡೆ. ಸಿಗದೆ ಸಿಕ್ಕಿರುವ ಅಧಿಕಾರದ ಮಹತ್ವವನ್ನು ಅರಿಯದ ಅವಿವೇಕಿ ನಡೆ. ಬರ, ಬಡತನ, ನಿರುದ್ಯೋಗ, ಅಸಹಾಯಕತೆಯಲ್ಲಿ ನರಳುತ್ತಿರುವ ನಾಡಿನ ಜನತೆಗೆ ಎಳೆಯುತ್ತಿರುವ ಬರೆ. ಇದು ಮುಂದುವರೆದರೆ, ದಕ್ಷಿಣ ಭಾರತದಿಂದ ಕಾಂಗ್ರೆಸ್ ಕಣ್ಮರೆ.
ಸರ್ಕಾರ ರಚನೆಯಾದಾಗಿನಿಂದಲೂ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಬಿಟ್ಟೂಬಿಡದೆ ಚರ್ಚೆಯ ವಸ್ತುವಾಗುತ್ತಿದೆ. ಡಿ.ಕೆ ಶಿವಕುಮಾರ್ ಅವರನ್ನು ಮಣಿಸಲು ಸಿದ್ದರಾಮಯ್ಯನವರು ತಮ್ಮ ಆಪ್ತರ ಮೂಲಕ ದಲಿತ, ಹಿಂದುಳಿದ ಡಿಸಿಎಂ ದಾಳ ಉರುಳಿಸಿದರೆ; ಸಿದ್ದರಾಮಯ್ಯನವರನ್ನು ಹದ್ದುಬಸ್ತಿನಲ್ಲಿಡಲು ಡಿ.ಕೆ ಶಿವಕುಮಾರ್ ತಮ್ಮವರ ಮೂಲಕ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಇದರಿಂದಾಗಿ ಆಡಳಿತ ಪಕ್ಷದ ಶಾಸಕರ ಗಮನವೆಲ್ಲ ಇದರತ್ತಲೇ ಇದ್ದು, ಅಭಿವೃದ್ಧಿ ಕಂಠಿತಗೊಂಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದ ನಾಡಿನ ಪ್ರಜ್ಞಾವಂತರ ಬೇಸರಕ್ಕೂ ಕಾರಣವಾಗಿದೆ.
ಸಿದ್ದರಾಮಯ್ಯನವರು ಪೀಠತ್ಯಾಗಕ್ಕೆ ತಾವು ಸಿದ್ಧ ಎಂದಿರುವುದು ನಿಜವೇ ಆದರೆ, ಅವರು ಯಾರ ರಾಜಕೀಯ ದಾಳಕ್ಕೂ, ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ. ಅದನ್ನು ಹೇಳಿಕೊಂಡು ತಿರುಗುವುದೂ ಬೇಕಾಗಿಲ್ಲ. ತಮ್ಮ ಕೊನೆಯ ಅವಧಿಯನ್ನು ಈ ರಾಜ್ಯದ ಜನರ ಹಿತಕ್ಕಾಗಿ ಪ್ರಾಮಾಣಿಕವಾಗಿ ವಿನಿಯೋಗಿಸಿದರೆ, ಕರ್ನಾಟಕ ಕಂಡ ಉತ್ತಮ ರಾಜಕಾರಣಿ ಎಂದು ಹೆಸರು ಉಳಿಸಿ ಹೋಗುವುದರಲ್ಲಿ ಅನುಮಾನವಿಲ್ಲ.
