ಕನ್ನಡ ಭಾಷೆಯ ವಿಷಯದಲ್ಲಿ ಚಾಮರಾಜನಗರ ‘ಭಾಷೆಯ ತೊಟ್ಟಿಲು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಹೇಳಿದರು.
ಚಾಮರಾಜನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾನತಾಡಿದರು. “ಪಶ್ಚಿಮದ ಮೂಲೆಹೊಳೆಯಿಂದ ಪೂರ್ವದ ಹೊಗೇನಕಲ್ ವರೆಗಿನ ಪ್ರದೇಶಗಳಲ್ಲಿ ಗಟ್ಟಿ ಕನ್ನಡ ಭಾಷೆ ಆಡುವ ಜನ ಸಮೂಹಗಳಿವೆ. ನೆರೆ ರಾಜ್ಯಗಳ ಆಳ್ವಿಕೆಯ ಒತ್ತಡಗಳಿಗೆ ಸಿಲುಕಿಕೊಂಡು ಆನಂತರ ಏಕೀಕರಣದ ಜೊತೆ ಕರ್ನಾಟಕಕ್ಕೆ ಸೇರಿದ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಯಾವುದೇ ಭಾಗದ ಜನರು ಕನ್ನಡವನ್ನು ಬಿಡದೆ ಹಾಗೂ ನೆರೆ ಹೊರೆಯ ಅನ್ಯ ಭಾಷೆಗಳಿಗೆ ಪ್ರಭಾವಿತರಾಗದಿರುವುದು ಹೆಮ್ಮೆಯ ವಿಷಯ” ಎಂದರು.
“ಸಾಹಿತ್ಯದ ವಿಷಯದಲ್ಲಿ ಜಿಲ್ಲೆಯ ಜಾನಪದ ಸಾಹಿತ್ಯ ಸರಿಸಾಟಿ ಇಲ್ಲದ್ದು. ಜಗತ್ತಿನ ಜಾನಪದ ಕಾವ್ಯದಲ್ಲೇ ಉನ್ನತ ಸ್ಥಾನ ಗಳಿಸಿರುವ ಮಲೆ ಮಹದೇಶ್ವರ ಕಾವ್ಯ ಕರ್ನಾಟಕಕ್ಕೆ ನಮ್ಮ ಉತ್ತಮ ಕೊಡುಗೆಯಾಗಿದೆ. ಮಂಟೇಸ್ವಾಮಿ, ಬಿಳಿಗಿರಿರಂಗ, ಸಿದ್ದಪ್ಪಾಜಿ ಕಾವ್ಯಗಳು ನಮ್ಮ ಜಿಲ್ಲೆಯ ಕೊಡುಗೆ. ಕಂಸಾಳೆ, ಗೊರವರ ನೃತ್ಯ, ವೀರಭದ್ರ ನೃತ್ಯ ಮತ್ತು ತಂಬೂರಿ, ನೀಲಗಾರರು ಮುಂತಾದವರ ಸಾಂಸ್ಕೃತಿಕ ಪರಂಪರೆ ಜಿಲ್ಲೆಗೆ ಕೀರ್ತಿ ತಂದಿದೆ” ಎಂದು ಸ್ಮರಿಸಿದರು.
“ಜಿಲ್ಲೆಯ ಸಾಹಿತಿಗಳು ಕನ್ನಡ ಕಾವ್ಯ, ಕಾದಂಬರಿ, ನಾಟಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಮೂಲ್ಯವಾದುದು. ತ್ರಿಭಾಷಾ ಸೂತ್ರದಡಿ ಕನ್ನಡವನ್ನು ಮುಖ್ಯಭಾಷೆಯನ್ನಾಗಿಸಿದ ಗೋಕಾಕ ಚಳುವಳಿಯ ನೇತಾರ ಹಾಗೂ ಕನ್ನಡ ಚಲನಚಿತ್ರದ ಮೇರು ಪ್ರತಿಭೆ ಡಾ.ರಾಜ್ ಕುಮಾರ್, ಕನ್ನಡದ ಶ್ರೇಷ್ಠ ಲೇಖಕ, ಗೀತಕಾರ ಹಾಗೂ ಕವಿ ಜಿ ಪಿ ರಾಜರತ್ನಂ ಹಾಗೂ ಶ್ರೇಷ್ಠ ಕವಯತ್ರಿ ಸಂಚಿಯ ಹೊನ್ನಮ್ಮ ಅವರು ಈ ಜಿಲ್ಲೆಯ ಹೆಮ್ಮೆಯ ಕೊಡುಗೆ” ಎಂದು ವರ್ಣಿಸಿದರು.
ಈ ಸುದ್ದಿ ಓದಿದ್ದೀರಾ? ಕನ್ನಡದ ಮೊದಲ ಸಾಮ್ರಾಜ್ಯಕ್ಕೆ ಸೇನಾ ನೆಲೆ ಒದಗಿಸಿದ್ದು ಚಿತ್ರದುರ್ಗ: ಸಚಿವ ಡಿ ಸುಧಾಕರ್
ಶಾಸಕ ಸಿ ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಸಿ ಟಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಸೇರಿದಂತೆ ಇತರರು ಇದ್ದರು.
ಜಿಲ್ಲಾದ್ಯಂತ 68ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದ್ದು, ಜಿಲ್ಲಾಡಳಿತ, ಕನ್ನಡ ಪರ ಸಂಘಟನೆಗಳು, ಶಾಲಾ ಕಾಲೇಜುಗಳಲ್ಲಿ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನಡೆಯಿತು.