ಕನ್ನಡ ನಾಡು ನುಡಿಯ ಏಳ್ಗೆಗಾಗಿ ರಾಜ್ಯ ಸರ್ಕಾರ ಕಂಕಣಬದ್ಧವಾಗಿದೆ. ಕನ್ನಡ ನಾಡಿನ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.
ತಮಕೂರಿನಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. “ರಾಜ್ಯ ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತಿರುವ ತುಮಕೂರು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನೇಕ ಮಹತ್ವಗಳನ್ನು ಒಳಗೊಂಡಿರುವ ವಿಶಾಲವಾದ ಜಿಲ್ಲೆಯಾಗಿದೆ. ಮಧುಗಿರಿಯ ಏಕಶಿಲಾ ಬೆಟ್ಟ, ಕೈದಾಳ, ಶಿರಾ, ಮುಂತಾದ ಪ್ರಾಂತ್ಯಗಳು ಜಿಲ್ಲೆಯ ಚಾರಿತ್ರಿಕ ಮಹತ್ವವನ್ನು ಸಾರುತ್ತಿವೆ. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣವಾಗಿ ೧ನೇ ನವೆಂಬರ್ ೨೦೨೩ಕ್ಕೆ ೫೦ ವರ್ಷ ಪೂರ್ಣಗೊಳ್ಳಲಿದ್ದು, ‘ಕರ್ನಾಟಕ ಸಂಭ್ರಮ-೫೦’ ಘೋಷಣೆಯಡಿ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಇಡೀ ವರ್ಷ ಹಮ್ಮಿಕೊಳ್ಳಲಾಗುವುದು” ಎಂದರು.
“ಪ್ರಣಾಳಿಯಲ್ಲಿ ಘೋಷಿಸಿದಂತೆ ನಮ್ಮ ಸರ್ಕಾರ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಅನುಷ್ಟಾನಗೊಳಿಸಿದೆ. ಜಿಲ್ಲೆಯಲ್ಲಿ ವಸತಿ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ವಿತರಿಸುವ ಸಂಬಂಧ ಲಭ್ಯವಿರುವ ಸರ್ಕಾರಿ ಜಮೀನುಗಳಲ್ಲಿ ೨೧೨೨.೩೩ ಎಕರೆ ಗುರ್ತಿಸಿ ಮಂಜೂರಾತಿಗೆ ಕ್ರಮವಹಿಸಲಾಗಿದೆ. ಇದೇ ರೀತಿ ಗ್ರಾಮ ಪಂಚಾಯತಿಗಳಲ್ಲಿ ಉದ್ಯಾನವನಕ್ಕೆ ೨೩೩-೧೧ ಎ/ಗು ಗುರುತಿಸಲಾಗಿದೆ ಹಾಗೂ ಸರ್ಕಾರಿ ಶಾಲೆಗಳಿಗೆ ಆಟದ ಮೈದಾನಕ್ಕೆ ಅವಶ್ಯವಿರುವ ೫೩೯-೦೩ ಎ/ಗು ಸರ್ಕಾರಿ ಜಮೀನುಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ” ಎಂದರು.
“ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ ಬೃಹತ್ ಪ್ರಮಾಣದಲ್ಲಿ ಕೈಗಾರಿಕಾ ಪ್ರದೇಶವಿದ್ದು, ಇಲ್ಲಿ ಆಹಾರ ಸಂಸ್ಕರಣೆ, ಜಪಾನ್ ಟೆಕ್ನಾಲಜಿ ಸೇರಿದಂತೆ ವಿವಿಧ ರೀತಿಯ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಜಿಲ್ಲೆಯ ಜನರಿಗೆ ನೇರವಾಗಿ ಉದ್ಯೋಗ ದೊರಕುತ್ತಿದ್ದು, ಇದರಿಂದ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಿದೆ. ಇನ್ನು ಹೆಚ್ಚಿನ ಸೌಲಭ್ಯಗಳನ್ನು ನೀಡಿ ತುಮಕೂರು ಜಿಲ್ಲೆಯನ್ನು ಆರ್ಥಿಕವಾಗಿ ಸಧೃಡಗೊಳಿಸಲು ಸರ್ಕಾರದಿಂದ ಎಲ್ಲಾ ರೀತಿಯ ಕ್ರಮವಹಿಸಲಾಗಿರುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸುರೇಶ್‌ಗೌಡ, ಪಾಲಿಕೆ ಮೇಯರ್ ಪ್ರಭಾವತಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ಧಲಿಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.