- ರಾಜ್ಯೋತ್ಸವದಂದು ಪ್ರತಿವರ್ಷ ಎಂಇಎಸ್‌ದಿಂದ ಕರಾಳ ದಿನ ಆಚರಣೆ
- ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಾರೆ: ಸತೀಶ ಜಾರಕಿಹೊಳಿ
ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ನೃತ್ಯ ಮಾಡುವ ವಿಚಾರಕ್ಕೆ ಯುವಕರು ಹೊಡೆದಾಡಿಕೊಂಡಿದ್ದಾರೆ. ಯುವಕರ ನಡುವೆ ಗಲಾಟೆ ನಡೆಯುತ್ತಿದ್ದರೂ ಪೊಲೀಸರು ಸುಮ್ಮನಿದ್ದರು ಎನ್ನಲಾಗಿದೆ. ಕೆಲ ಯುವಕರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಹೊರಹಾಕಿದ್ದಾರೆ.
ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಪ್ರತಿವರ್ಷ ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನ ಆಚರಿಸುತ್ತದೆ. ಇಂದಿನ ಪ್ರತಿಭಟನೆ ಗಲಾಟೆ ಸ್ವರೂಪ ಪಡೆದುಕೊಂಡಿದೆ.
ಗಲಾಟೆ ನಂತರ ಪತ್ರಿಕಾಗೋಷ್ಟಿ ನಡೆಸಿ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, “ಎಂಇಎಸ್ ನವರು ಪ್ರತಿಭಟನೆ ನಡೆಸೋದು ಹೊಸದೇನಲ್ಲ, ಪ್ರತಿವರ್ಷ ಅದನ್ನು ಮಾಡುತ್ತಾರೆ. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುವುದರಿಂದ ಪೊಲೀಸರು ಕೇಸ್ ಹಾಕುತ್ತಾರೆ, ಕೆಲವರ ಬಂಧನವಾಗುತ್ತದೆ ಮತ್ತು ಬೇಲ್ ಪಡೆದು ಹೊರಬರುತ್ತಾರೆ” ಎಂದರು.
“ಇವರೆಲ್ಲ ಬೆಳಗಾವಿಯಲ್ಲೇ ಜೀವನ ನಡೆಸುವುದರಿಂದ ವಿಷಯ ಅರ್ಥಮಾಡಿಕೊಳ್ಳಬೇಕು. ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ, ಮಾಡಿಕೊಳ್ಳಲಿ. ಆದರೆ ಸರ್ಕಾರದ ವಿರುದ್ಧ ಘೋಷಣೆ ಕೂಗುವುದನ್ನು ಮಾಡಬಾರದು. ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ” ಎಂದು ಹೇಳಿದರು.