ಪ್ಯಾಲೆಸ್ತೀನ್‌ನ ಗಾಝಾ ಪಟ್ಟಣದಲ್ಲಿ ನಡೆಯುತ್ತಿರುವ ಅಮಾಯಕರ ಹತ್ಯಾಕಾಂಡ ವಿರೋಧಿಸಿ ವಿಶ್ವಸಂಸ್ಥೆ ಹಿರಿಯ ಅಧಿಕಾರಿ ಕ್ರೇಗ್ ಮೊಖಿಬರ್ ರಾಜೀನಾಮೆ ನೀಡಿದ್ದಾರೆ.
ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ನರಮೇಧಕ್ಕೆ ಸಮನಾಗಿದ್ದರೂ ಅದನ್ನು ತಡೆಯುವಲ್ಲಿ ವಿಶ್ವ ಸಂಸ್ಥೆಯು ವಿಫಲವಾಗಿದೆ ಎಂದು ಹೇಳಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಸ್ಥೆಯ ಹೈಕಮಿಷನರ್ ಅವರ ನ್ಯೂಯಾರ್ಕ್ ಕಚೇರಿಯ ನಿರ್ದೇಶಕರಾಗಿರುವ ಕ್ರೇಗ್ ಮೊಖಿಬರ್ ಅವರು ರಾಜೀನಾಮೆ ನೀಡಿದ್ದಾರೆ.
ಕ್ರೇಗ್ ಮೊಖಿಬರ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ವೋಲ್ಕರ್ ಟರ್ಕ್ ಅವರಿಗೆ ತಮ್ಮ ಕೊನೆಯ ಅಧಿಕೃತ ಸಂವಹನ ಪತ್ರವನ್ನು ಕಳುಹಿಸಿದ್ದಾರೆ. ತಮ್ಮ ಪತ್ರದಲ್ಲಿ ವಿಶ್ವಸಂಸ್ಥೆಯು ತನ್ನ ಕರ್ತವ್ಯದಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ವಿವರಿಸಿದ್ದಾರೆ.
ಅಮೆರಿಕ, ಇಂಗ್ಲೆಂಡ್ ಮತ್ತು ಯೂರೋಪಿನ ಹೆಚ್ಚಿನ ದೇಶಗಳು ಗಾಝಾದಲ್ಲಿ ನಡೆದಿರುವ ನರಮೇಧದಲ್ಲಿ ಸಂಪೂರ್ಣ ಭಾಗಿದಾರರಾಗಿದ್ದಾರೆ ಮತ್ತು ನಾಗರಿಕರ ಹತ್ಯಾಕಾಂಡವನ್ನು ತಡೆಯಲು ವಿಶ್ವಸಂಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಕ್ರೇಗ್ ಮೊಖಿಬರ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ನಿರೀಕ್ಷಣಾ ಜಾಮೀನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
“ದಶಕಗಳಿಂದ ಪ್ಯಾಲೆಸ್ತೀನ್ ಜನರ ಭೂಮಿಯನ್ನು ಆಕ್ರಮಿಸಿ ಅಲ್ಲಿನ ನಾಗರಿಕರ ಮೇಲೆ ಇಸ್ರೇಲ್ ದೌರ್ಜನ್ಯ ನಡೆಸುತ್ತಿದೆ. ಪ್ಯಾಲೆಸ್ತೀನ್ ಅರಬ್ಬರ ಸ್ಥಾನಮಾನವನ್ನು ಆಧರಿಸಿದ್ದು ಇದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಮ್ಮೆ ನಾವು ನಮ್ಮ ಕಣ್ಣುಗಳ ಮುಂದೆ ನರಮೇಧವು ತೆರೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು ಅದನ್ನು ತಡೆಯಲು ಶಕ್ತಿಹೀನವಾಗಿದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಪ್ಯಾಲೆಸ್ತೀನ್‌ನ ಮರುಸ್ಥಾಪನೆಯೊಂದಿಗೆ ಒಂದು ದೇಶ ಹಾಗೂ ಒಂದು ಪರಿಹಾರದ ತುರ್ತು ಅಗತ್ಯವಿದೆ” ಎಂದು ಕ್ರೇಗ್ ಮೊಖಿಬರ್ ಹೇಳಿದರು.
“ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಯಹೂದಿಗಳಿಗೆ ಸಮಾನ ಹಕ್ಕುಗಳೊಂದಿಗೆ ಎಲ್ಲ ಐತಿಹಾಸಿಕ ಪ್ಯಾಲೆಸ್ತೀನ್‌ನಲ್ಲಿ ಏಕ ಪ್ರಜಾಪ್ರಭುತ್ವ, ಜಾತ್ಯತೀತ ರಾಜ್ಯವನ್ನು ಸ್ಥಾಪಿಸುವುದನ್ನು ನಾವು ಬೆಂಬಲಿಸಬೇಕು. ಆದ್ದರಿಂದ, ಹೆಚ್ಚುತ್ತಿರುವ ಜನಾಂಗೀಯ, ವಸಾಹತುಶಾಹಿ ನೀತಿಯನ್ನು ಕಿತ್ತುಹಾಕಿ ಮತ್ತು ವಿಶ್ವದಾದ್ಯಂತ ವರ್ಣಭೇದ ನೀತಿಗೆ ಅಂತ್ಯ ಹಾಡಬೇಕಿದೆ” ಎಂದು ತಿಳಿಸಿದ್ದಾರೆ.
ಕ್ರೇಗ್ ಮೊಖಿಬರ್ ಅವರು ವಿಶ್ವಸಂಸ್ಥೆಯಲ್ಲಿ 1992 ರಿಂದ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವಿಷಯದಲ್ಲಿ ತಜ್ಞರಾಗಿರುವ ಕ್ರೇಗ್ ವಕೀಲರಾಗಿದ್ದು 90ರ ದಶಕದಲ್ಲಿ ಗಾಝಾದಲ್ಲಿ ವಾಸಿಸುತ್ತಿದ್ದರು.