ಶಿಕ್ಷಕರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಹೊರತುಪಡಿಸಿ ನೇಮಕಾತಿ ಪ್ರಕ್ರಿಯೆ ನಡೆದಿದ್ದ ಸಮಸ್ಯೆಯನ್ನು ಕಾನೂನಾತ್ಮಕ ಪರಿಹರಿಸಲಾಗಿದೆ. ಶೀಘ್ರದಲ್ಲೇ 4,500 ಶಿಕ್ಷಕರ ನೇಮಕಾತಿ ಪ್ರಾರಂಭವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “371(ಜೆ)ನಿಯಮಗಳ ಕುರಿತು ಕೆಲವರು ಕೋರ್ಟ ಮೊರೆ ಹೋಗಿದ್ದರಿಂದ ಈ ಭಾಗದ ಅಭ್ಯರ್ಥಿಗಳನ್ನು ಹೊರತುಪಡಿಸಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿತ್ತು. ಈಗ ಹೈಕೋರ್ಟನಲ್ಲಿದ ಪ್ರಕರಣ ತಡೆಯಾಜ್ಞೆ ತೆರವುಗೊಂಡಿದೆ. ಶೀಘ್ರದಲ್ಲಿ ಈ ಭಾಗದ ಅಭ್ಯರ್ಥಿಗಳಿಗೂ ಕೌನ್ಸಲಿಂಗ್ ಪ್ರಾರಂಭವಾಗುತ್ತದೆ” ಎಂದರು.
“ಸ್ಥಳೀಯ ವೃಂದದಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ನೇಮಕಾತಿಗಳು ಪ್ರಾರಂಭವಾಗಲಿವೆ” ಎಂದರು.
“ಗಡಿ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಪ್ರವೇಶ ದೊರಯದೇ ಇರುವ ಕುರಿತು ಪರಿಶೀಲಿಸಲಾಗುತ್ತದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆ ಸೇರಿದಂತೆ ಇತರೆ ಮಾಹಿತಿಗಳನ್ನು ಕ್ರೋಢಿಕರಿಸಿ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ” ಎಂದು ತಿಳಿಸಿದರು.
“ಕೇಂದ್ರ ಸರ್ಕಾರ ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿದೆ. ಅಂತಾರಾಜ್ಯ ನೀರಾವರಿ ಯೋಜನೆಗಳಿಗೆ ರಾಜ್ಯಕ್ಕೆ ನ್ಯಾಯ ಕೊಡಿಸದೇ ಇರುವದರಿಂದ ಅನೇಕ ಯೋಜನೆಗಳು ಬಾಕಿ ಉಳಿದಿವೆ. ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದೆ. ಬಿ ಸ್ಕೀಂನಲ್ಲಿ ರಾಜ್ಯದ ಪಾಲಿನ ನೀರು ನೀಡಲು ನ್ಯಾಯಾಧೀಕರಣದ ತೀರ್ಪಿನಂತೆ ನೀರು ಹಂಚಿಕೆ ಮಾಡುವುದು ಕೇಂದ್ರ ಜವಬ್ದಾರಿ” ಎಂದು ಹೇಳಿದರು.
ವರದಿ : ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್