ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಬಂದಿದ್ದು ಸೌಜನ್ಯದ ಭೇಟಿ. ಅವರು ನಮ್ಮ ಮನೆಗೆ ಬಂದಾಗ ಊಟದ ಸಮಯ ಆಗಿತ್ತು. ಅವರು ನಾಟಿ ಕೋಳಿ ಇಷ್ಟಪಡ್ತಾರೆ. ಹಾಗಾಗಿ ನಾಟಿ ಕೋಳಿ ಸಾರು ಮಾಡಿಸಿದ್ದೆ. ಮಾಡಿಕೊಂಡು ಹೋದ್ರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೈಸೂರಲ್ಲಿ ದಸರಾಗೆ ಹೋದಾಗ ಪರಮೇಶ್ವರ್ ಒಂದು ಊಟ ಹಾಕಿಸಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ರು. ಬೆಂಗಳೂರಿಗೆ ಬಂದಾಗ ಬನ್ನಿ ನಾಳೆ ಇಲ್ಲ ನಾಡಿದ್ದು ಅಂತ ಹೇಳಿದ್ದೆ. ಹಾಗಾದ್ರೆ ಫಿಕ್ಸ್ ಮಾಡಿ ಬರ್ತಿನಿ ಅಂತ ಹೇಳಿದ್ರು” ಎಂದು ಹೇಳಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಜನ 135 ಶಾಸಕರನ್ನ ಆರಿಸಿ ಕಳುಹಿಸಿದ್ದಾರೆ. ನಾವು ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ಕೊಡ್ತಿದ್ದೇವೆ. ಪ್ರತಿಪಕ್ಷದವರು ಟೀಕೆ ಮಾಡ್ತಾರೆ ಮಾಡಲಿ. ಧನಾತ್ಮಕ ಟೀಕೆಗಳನ್ನ ಮಾಡಿ ಅಂತ ನಾನು ಅವರಲ್ಲಿ ಮನವಿ ಮಾಡ್ತಿನಿ” ಎಂದರು.
“ಬಿಜೆಪಿಗರು ಸಲಹೆ ಸೂಚನೆಗಳನ್ನ ಕೊಡಲಿ. ನಾವು ಅದನ್ನ ಸ್ವೀಕಾರ ಮಾಡ್ತಿವಿ. ಅದನ್ನ ಬಿಟ್ಟು ಸರ್ಕಾರ ಕೆಡುತ್ತಿವಿ, 20 ಜನ ಅಲ್ಲಿ ಹೋದ್ರು, 30 ಜನ ಇಲ್ಲೋದ್ರು ಅಂತ ಮಾತಾಡೋದ್ರಿಂದ ಪ್ರಯೋಜನ ಇಲ್ಲ” ಎಂದರು.