ರಾಜಕಾರಣ ಬರೀ ಚುನಾವಣೆಗೆ ಸೀಮಿತವಾಗಬಾರದು. ರಾಜಕಾರಣಿಯಾದವರು ಕಲೆ, ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜ ಪಟೇಲ ಅಭಿಪ್ರಾಯಪಟ್ಟರು.
ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್ ಆಯೋಜಿಸಿದ್ದ ನೀನಾಸಂ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. “ಈಗಿನ ರಾಜಕಾರಣ ಚುನಾವಣೆಯನ್ನು ಕೇಂದ್ರೀಕರಿಸಿದೆ. ನಮ್ಮ ತಂದೆ ಜೆ.ಎಚ್ ಪಟೇಲ್ ಹಾಗೂ ರಾಮಕೃಷ್ಣ ಹೆಗಡೆ ಅವರು 24 ಗಂಟೆ ಚುನಾವಣೆ ಬಗ್ಗೆ ಯೋಚಿಸುತ್ತಿರಲಿಲ್ಲ. ಬದಲಿಗೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಒಲವುಳ್ಳವರಾಗಿದ್ದರು. ರಾಜಕಾರಣಿಯಾದವನು ಸಾಮಾಜಿಕ ಕಳಕಳಿ ಉಳ್ಳವನಾಗಿರಬೇಕು” ಎಂದರು.
“ನಮ್ಮ ತಂದೆ ಮುಖ್ಯಮಂತ್ರಿ ಆಗಿದ್ದಾಗ 20 ವರ್ಷ ಸಿನಿಮಾ ಬ್ಯಾನ್ ಮಾಡಬೇಕು. ಆಗ ಮಾತ್ರ ನಾಟಕ ಕಲೆ ಜೀವಂತವಾಗಿರುತ್ತದೆ ಎಂದಿದ್ದರು. ಆದರೆ, ನಾಟಕ ಕಲೆ ಯಾವತ್ತೂ ಸಾಯುವುದಿಲ್ಲ. ಸಾವಿರಾರು ವರ್ಷಗಳಿಂದ ನಾಟಕ ಕಲೆ ಇದೆ. ಮುಂದೆ ಸಾವಿರಾರು ವರ್ಷ ನಾಟಕ ಕಲೆ ಜೀವಂತವಾಗಿರುತ್ತದೆ” ಎಂದರು.
ಟೂಡಾ ಮಾಜಿ ಅಧ್ಯಕ್ಷ ಹಾಗೂ ಕೈಗಾರಿಕೋದ್ಯಮಿ ಚಂದ್ರಶೇಖರ್ ಮಾತನಾಡಿ, “ಹೆಗ್ಗೋಡಿನ ನೀನಾಸಂ ಪ್ರತಿ ವರ್ಷ ಪರಿಣಾಮಕಾರಿ ನಾಟಕಗಳನ್ನು ಆಡಿಸುತ್ತಾ ಬಂದಿದೆ. ಸೀರಿಯಲ್ ಗಳ ಹಾವಳಿ ನಡುವೆಯೂ ಇಷ್ಟೊಂದು ಜನರು ನಾಟಕ ನೋಡಲು ಬಂದಿರುವುದು ಖುಷಿಯ ಸಂಗತಿ ಎಂದರು. ನೀನಾಸಂ ನಿಂದ ಕಲಿತು ಬಂದವರು ದೊಡ್ಡ ದೊಡ್ಡ ನಾಟಕ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗೆಯೇ ಸೀರಿಯಲ್, ಸಿನಿಮಾಗಳಲ್ಲೂ ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಂ.ಆರ್. ಹುಲಿನಾಯ್ಕರ್ ಮಾತನಾಡಿ, “ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳ ನಡುವೆ ವಿಭಿನ್ನ ನಾಟಕಗಳನ್ನು ತುಮಕೂರಿನ ಝೆನ್ ಟೀಮ್ ತೋರಿಸುತ್ತಿದೆ. ನೀನಾಸಂ, ರಂಗಾಯಣ, ರಾಷ್ಟ್ರೀಯ ನಾಟಕ ಶಾಲೆಗಳ ನಾಟಕಗಳನ್ನು ತುಮಕೂರಿನಲ್ಲಿ ಝೆನ್ ಟೀಮ್ ಆಯೋಜಿಸುತ್ತಿರುವುದು ಶ್ಲಾಘನೀಯ” ಎಂದರು.
ಕಾರ್ಯಕ್ರಮದಲ್ಲಿ ಝೆನ್ ಟೀಮ್ ನ ಉಗಮ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್. ಪಲ್ಲವಿ ನಾಗೇಂದ್ರ ಇನ್ನಿತರರು ಹಾಜರಿದ್ದರು.