ವಿಧಾನಸಭಾ ಚುನಾವಣಾ ಸಮಯದಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧನಕ್ಕೊಳಗಾಗಿರುವ ಆರೋಪಿ ಚೈತ್ರಾ ಕುಂದಾಪುರ ಮತ್ತವರ ಗ್ಯಾಂಗ್‌ನ ವಿಚಾರಣೆಯನ್ನು ಸಿಸಿಬಿ ಪೊಲೀಸರು ಪೂರ್ಣಗೊಳಿಸಿ, ಇದೀಗ ನ್ಯಾಯಾಲಯಕ್ಕೆ ಜಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 7 ಆರೋಪಿಗಳ ವಿಚಾರಣೆಯನ್ನು ಸಿಸಿಬಿ ಪೊಲೀಸರು ಪೂರ್ಣಗೊಳಿಸಿದ್ದಾರೆ. ಸದ್ಯ ಇವರ ವಿರುದ್ಧ ದೋಷಾರೋಪ ಪಟ್ಟಿಯನ್ನು ಮುಂದಿನ ವಾರ ನ್ಯಾಯಾಲಯಕ್ಕೆ ಸಲ್ಲಿಸಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸಿಬಿ ಪೊಲೀಸರು 68 ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಬರೋಬ್ಬರಿ ₹4 ಕೋಟಿ 11 ಲಕ್ಷ ಹಣವನ್ನು ರಿಕವರಿ ಮಾಡಿದ್ದಾರೆ. ಅಲ್ಲದೇ, ಆರೋಪಿಗಳ ವಂಚನೆ ಕುರಿತಾಗಿ ಪ್ರಾಥಮಿಕ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯ, ಸಾಂದರ್ಭಿಕ ಸಾಕ್ಷ್ಯ ಕಲೆಹಾಕಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಉದ್ದೇಶಪೂರ್ವಕವಾಗಿ ವ್ಯಕ್ತಿಯ ಮೇಲೆ ಸ್ಕಾರ್ಪಿಯೊ ಹತ್ತಿಸಿ ಹತ್ಯೆ: ಏನಿದು ಘಟನೆ?
ದೂರುದಾರ ಗೋವಿಂದ ಬಾಬು ಪೂಜಾರಿ ಬಳಿ ಇದ್ದ ಎಲ್ಲ ವಿಡಿಯೋ, ಆಡಿಯೋ ಹಾಗೂ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಸಿಬಿ ಪೊಲೀಸರು ಪಡೆದಿದ್ದಾರೆ. ವಂಚನೆಗೆ ಸಂಬಂಧಿಸಿದಂತೆ ದೂರುದಾರರಿಂದಲೇ ಬರೋಬ್ಬರೀ 10 ವಿಡಿಯೊಗಳನ್ನು ಪಡೆಯಲಾಗಿದೆ.
ಅಲ್ಲದೇ, ಆರೋಪಿಗಳ ಮೊಬೈಲ್ ಡೇಟಾ ರಿಟ್ರೀವ್ ಮಾಡಿ, ಮೊಬೈಲ್ ಚಾಟ್, ಕರೆಗಳ ಮೂಲಕ ಮಾಹಿತಿ ಪಡೆಯಲಾಗಿದೆ. ಈ ವರದಿಯನ್ನು ಕೂಡ ಚಾರ್ಜ್ಶೀಟ್ನಲ್ಲಿ ಸಿಸಿಬಿ ಪೊಲೀಸರು ಉಲ್ಲೇಖಿಸಿದ್ದಾರೆ.
ಸದ್ಯ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.