ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ನ ನೀರು ಸಂಗ್ರಹಾರ ಘಟಕದ ಬಳಿ, ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನೀರು ಬಿಡುವ ಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ. ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಡಿಯಲ್ಲಿ ವಾಟರ್ ಮನ್‌ಗಳಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಆದರೆ, ಎಲ್ಲ ಕಡೆ ರಾಜ್ಯೋತ್ಸ ಸಡಗರದ ನಡುವೆ, ಇವರು ತಮ್ಮ ಸಂಬಳಕ್ಕಾಗಿ ಒತ್ತಾಯಿಸಿ ಪ್ರತಿಭಟನೆಗಿಳಿದಿದ್ದರು. ಕಳೆದ ಮೂರ್ನಾಲ್ಕು ತಿಂಗಳಿಂದ ಈ ಕಾರ್ಮಿಕರಿಗೆ ವೇತನ ನೀಡಲಾಗಿಲ್ಲ.
ಇದರಿಂದ ಕುಟುಂಬವನ್ನು ನಿರ್ವಹಣೆ ಮಾಡಲಾಗದೆ ಈ ಬಡ ಕಾರ್ಮಿಕರು ಕಂಗಾಲಾಗಿದ್ದಾರೆ. ಎಷ್ಟು ಸಾರಿ ಅಧಿಕಾರಿಗಳಿಗೆ ತಿಳಿಸಿದರೂ ಇವರಿಗೆ ಸ್ಪಂದನೆ ನೀಡಿಲ್ಲ. ಇದರಿಂದ ಇಂದು ಈ ಕಾರ್ಮಿಕರು ನೀರು ಸರಬರಾಜು ಮಾಡುವ ಘಟಕದ ಎದುರು ಪ್ರತಿಭಟನೆ ಮಾಡಿದ್ದಾರೆ. ಬಾಗಲಕೋಟೆ ನವನಗರಕ್ಕೆ ನೀರು ಸರಬರಾಜು ಆಗದಂತೆ ವಾಲ್ವ್ ಬಂದ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ನವನಗರದ ಅಭಿವೃದ್ದಿ ಮೂಲಭೂತ ಸೌಲಭ್ಯ ಕಲ್ಪಿಸುವ ಹೊಣೆ ಹೊತ್ತಿರುವ ಪ್ರಾಧಿಕಾರ. ಇದರ ಅಡಿಯಲ್ಲಿ ಈ ಎಲ್ಲ ಕಾರ್ಮಿಕರು ವಾಟರ್ ಮನ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 20-25 ವರ್ಷಗಳಿಂದ ಕೆಲಸ ಮಾಡುತ್ತಿರುವ ಈ ಕಾರ್ಮಿಕರಿಗೆ ಮೇಲಿಂದ ಮೇಲೆ ವೇತನ ವಿಳಂಭ ಧೋರಣೆ ನಡೆಯುತ್ತಲೇ ಇದೆ. ಇದೀಗ ಕಳೆದ ಮೂರ್ನಾಲ್ಕು ತಿಂಗಳಿಂದ ವೇತನವೇ ಆಗಿಲ್ಲ. ಇದರಿಂದ ನ.01ರಂದು ಎಲ್ಲರೂ ಒಟ್ಟಾಗಿ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ವಿರುದ್ದ ಆಕ್ರೋಶ ಗೊಂಡಿದ್ದು, ಕೂಡಲೇ ನಮ್ಮ ಬಾಕಿ ವೇತನ ನೀಡಬೇಕು ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ಮಾಡೋದಾಗಿ ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇನ್ನು ಈ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಮುಖ್ಯ ಇಂಜಿನಿಯರ್, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಲ್ಲಿ ಈಗ ಹಣದ ಕೊರತೆಯಿದೆ. ಪ್ರಾಧಿಕಾರದಲ್ಲಿದ್ದ ಕಾರ್ಪಸ್ ಪಂಡ್ ಕೂಡ ಮರಳಿ ಸರ್ಕಾರ ಪಡೆದುಕೊಂಡಿದೆ. ಈ ಹಿನ್ನೆಲೆ ವೇತನ ಕೊಡೋದಕ್ಕೆ ಆಗಿಲ್ಲ ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಪಸ್ ಪಂಡ್ ಮರಳಿ ಬರುವ ವಿಶ್ವಾಸವಿದೆ. ಅದು ಬಂದರೆ ಕಾರ್ಮಿಕರ ವೇತನ ನೀಡೋದರ ಜೊತೆಗೆ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದಿದ್ದಾರೆ.