ಭಾಲ್ಕಿ ಪಟ್ಟಣದಲ್ಲಿ ವಕೀಲೆ ಧನಲಕ್ಷ್ಮಿ ಬಳತೆ ಅವರನ್ನು ಮಧ್ಯರಾತ್ರಿ ಬಂಧಿಸಿರುವುದನ್ನು ಖಂಡಿಸದೆ ಇರುವುದು ನಾಚಿಕೆಗೇಡಿತನ. ಈ ದೌರ್ಜನ್ಯದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಕೈವಾಡವಿದೆ ಎಂಬುದು ಮತ್ತೊಮ್ಮೆ ಸಾಬಿತಾಗಿದೆ ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.
“ಉಸ್ತುವಾರಿ ಸಚಿವರಿಗೆ ಸಿಕ್ಕ ಅಧಿಕಾರವನ್ನು ನಿಭಾಯಿಸುವಲ್ಲಿ ಹಾಗೂ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಪರಿಹಾರ ಒದಗಿಸಿಕೊಡುವಲ್ಲಿ ವಿಫಲವಾಗಿ, ಇಲ್ಲ ಸಲ್ಲದ ಹೇಳಿಕೆಗಳು ನೀಡಿ, ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಕೆಳಮಟ್ಟದ ರಾಜಕೀಯ ಮಾಡುತ್ತಿರುವುದು ಅವರ ಯೋಗ್ಯತೆ ಏನೆಂಬುದು ತೋರಿಸುತ್ತದೆ” ಎಂದು ಸಚಿವ ಖೂಬಾ ತಿರುಗೇಟು ನೀಡಿದ್ದಾರೆ.
“ದೇಶವನ್ನು ಲೂಟಿ ಹೊಡೆದಿರುವ ಪಕ್ಷ ಕಾಂಗ್ರೇಸ್, ಇಂಥಹ ಪಕ್ಷದಲ್ಲಿರುವ ತಮ್ಮ ಬಗ್ಗೆ ಮಾತನಾಡಿದರೆ ನನಗೆ ಟಿಕೇಟ್ ಸಿಗುತ್ತದೆ ಎಂದು ಹೇಳಿರುವುದು ಹಾಸ್ಯಾಸ್ಪದ ಹಾಗೂ ನಿಮ್ಮ ದಡ್ಡತನ. ಈ ಜಿಲ್ಲೆಯ ಸಂಸದನಾಗಿ, ಕೇಂದ್ರ ಸಚಿವನೆಂಬ ಸ್ವಪ್ರತಿಷ್ಠೆ ಬದಿಗಿಟ್ಟು, ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಿ ಎಂದು ಪದೆ ಪದೆ ಸಾರ್ವಜನಿಕವಾಗಿ ಮನವಿ ಮಾಡಿಕೊಂಡರು; ತಾವುಗಳು ಕಳೆದ ಐದು ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಿಲ್ಲ, ರಾಜ್ಯದಿಂದ ಅನುದಾನ ತರುವ ಸಣ್ಣ ಪ್ರಯತ್ನವೂ ಮಾಡಿಲ್ಲ, ಕೇವಲ ನನ್ನನ್ನು ಟೀಕಿಸುವ ಕೆಲಸ ಮಾತ್ರ ಮಾಡುತ್ತಿದ್ದಿರಿ. ಇದೇನಾ ನಿಮ್ಮ ಕಾರ್ಯವೈಖರಿ” ಎಂದು ಕೇಂದ್ರ ಸಚಿವ ಭಗವಂತ ಖೂಬಾ ಈಶ್ವರ ಖಂಡ್ರೆಗೆ ಪ್ರಶ್ನಿಸಿದ್ದಾರೆ.
“ಬೀದರ್ ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯ ಪೂರ್ವದಲ್ಲಿಯೇ ನಾನು ಹೇಳಿದ್ದೆ, ಇದು ಸಾಹುಕಾರ ಮತ್ತು ಸಹಕಾರ ನಡುವೆ ನಡೆಯುತ್ತಿರುವ ಚುನಾವಣೆ , ಅದರಂತೆ ತಾವುಗಳು ಸಾಹುಕಾರರಿದ್ದಿರಿ, ಬ್ಯಾಂಕ್
ಚುನಾವಣೆಯಲ್ಲಿ ಇದ್ದ ಕಡಿಮೆ ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಗೆದ್ದಿರುವುದು ಎಲ್ಲರಿಗೂ ಗೊತ್ತಿದೆ, ಆದರೆ ನಿಮ್ಮ ಆಡಳಿತದಲ್ಲಿರುವ ಡಿ.ಸಿ.ಸಿ ಬ್ಯಾಂಕ್, ಎಮ್.ಜಿ.ಎಸ್.ಎಸ್.ಕೆ ಮತ್ತು ಬಿ.ಎಸ್.ಎಸ್.ಕೆ ತರಹ ಬಂದ್ ಆಗದಿದ್ದರೆ ಸಾಕು ಎಂದು ಜಿಲ್ಲೆಯ ರೈತರಿಗೋಸ್ಕರ್ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ” ಎಂದು ಖೂಬಾ ಹೇಳಿದರು.
ನನ್ನ ಟಿಕೆಟ್ ತಪ್ಪುತ್ತದೆ ಬಗ್ಗೆ ಹಗಲುಗನಸು ಬಿಡಿ:
“ಸಿಪೇಟ್ ಕಾಲೇಜು ಪ್ರಾರಂಭಕ್ಕೆ ತಾವು ಅಡ್ಡಿ ಮಾಡಿರುವ ವಿಷಯ ಹೊಸದೇನಲ್ಲ, ರಾಜ್ಯದಿಂದ ಮೊದಲು 50 ಕೋಟಿ ಅನುದಾನ ಕೊಟ್ಟು ಸಿಪೇಟ್ ಬಗ್ಗೆ ಮಾತನಾಡಿ, ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಸಂಕಿರ್ಣ ಪ್ರಾರಂಭಿಸಿ, ಔರಾದ ಹಾಗೂ ಮೇಹಕರ್ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸಿ, ಬೀದರ-ನಾಂದೇಡ ಹೊಸ ರೈಲ್ವೆ ಲೈನ್‌ಗೆ ರಾಜ್ಯದಿಂದ ಒಪ್ಪಿಗೆ ಪತ್ರ ನೀಡಿ, ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣಕ್ಕೆ ನಮ್ಮ ಸರ್ಕಾರ 200 ಕೋಟಿ ಅನುದಾನ ಒದಗಿಸಿ ಕಾಮಗಾರಿ ಪ್ರಾರಂಭಿಸಿದ್ದೇವೆ, ಆ ಕಾಮಗಾರಿ
ಮುಂದುವರೆಸಲು ಉಳಿದಿರುವ 400 ಕೋಟಿ ಅನುದಾನ ಒದಗಿಸಿಕೊಡಿ ಎಂದು ಕೇಳುತ್ತಿದ್ದೇನೆ, ತಾವು ಇದರ ಬಗ್ಗೆ ಮಾತನಾಡುವುದು ಬಿಟ್ಟು, ನನ್ನ ಟಿಕೆಟ್ ಬಗ್ಗೆ ಮಾತನಾಡುತ್ತಿದ್ದಿರಿ, ನನ್ನ ಟಿಕೆಟ್ ತಪ್ಪುತ್ತದೆ ಎಂಬುವ ನಿಮ್ಮ ಹಗಲುಗನಸು ಬಿಡಿ, ಯಾಕೆಂದರೆ ನನ್ನನ್ನು ನೇರವಾಗಿ ಎದುರಿಸಲಾಗದೆ ತಾವುಗಳು ನನ್ನ ಬೆನ್ನ ಹಿಂದೆ ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಎಲ್ಲರಿಗೂ ಗೊತ್ತಿದೆ, ಬರುವ ಲೋಕಸಭೆ ಚುನಾವಣೆಯಲ್ಲಿ ತಮಗೆ ಜನತೆ ತಕ್ಕ ಉತ್ತರ ನೀಡಿ ನಿಮ್ಮ ಷಡ್ಯಂತ್ರ ವಿಫಲಗೊಳಿಸುತ್ತಾರೆ” ಎಂದು ಸವಾಲು ಹಾಕಿದ್ದಾರೆ.
“60 ವರ್ಷ ನಮ್ಮ ಜನರಿಗೆ ಕೇವಲ ನಾಂದೇಡ್ -ಬೆಂಗಳೂರು ಲಿಂಕ್ ಎಕ್ಸಪ್ರೇಸ್‌ನಲ್ಲಿ ಓಡಾಡಿಸಿರುವ ನಿಮಗೆ, ಪ್ರಧಾನಿ ಮೋದಿ ನೇತೃತ್ವದಲ್ಲಿ ಅವರಿಗೆ ತಕ್ಕ ಸಂಸದನಾಗಿ ಇಂದು ನಾನು ತಂದಿರುವ ಹೊಸ ರೈಲುಗಳು, ನಿರ್ಮಿಸಿರುವ ರಾಷ್ಟ್ರೀಯ ಹೆದ್ಧಾರಿಗಳು, ಏರಪೋರ್ಟ್, ಪಾಸಪೋರ್ಟ್, ಸೈನಿಕ್ ಶಾಲೆ, ಸಿಪೇಟ್ ಕಾಲೇಜು ಮುಂತಾದ ಅಭಿವೃದ್ದಿ ಕಾರ್ಯಗಳ ಎದುರು ನಿಮ್ಮ ಆಟ ಹಾಗೂ ಷಡ್ಯಂತ್ರ ನಡೆಯದು. ಜನತೆಗೆ ಭಗವಂತ ಖೂಬಾ ಏನೆಂಬುದು ಗೊತ್ತಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆಎಸ್‌ಆರ್‌ಟಿಸಿ | 40 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಜಯದೇವ ಹೃದ್ರೋಗದಲ್ಲಿ ತಪಾಸಣೆಯ ಸೌಲಭ್ಯ
“ತಮ್ಮ ಅಧಿಕಾರವಧಿಯಲ್ಲಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ರೈತರಿಗೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ, ಕೃಷಿ ಸಮ್ಮಾನ ನಿಧಿಯಡಿ 4 ಸಾವಿರ ಹಾಗೂ ರೈತ ವಿದ್ಯಾನಿಧಿಯಡಿ ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡುತ್ತಿಲ್ಲ, ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆ.ಜಿ ಅಕ್ಕಿ ಕೂಡ ನಿಮ್ಮಿಂದ ಸರಿಯಾಗಿ ವಿತರಿಸಲು ಆಗುತ್ತಿಲ್ಲ, ಎಮ್.ಜಿ.ಎನ್.ಆರ್.ಇ.ಜಿ ಯೋಜನೆಯಡಿ ನಡೆಯುತ್ತಿರುವ ಎಲ್ಲಾ ಕೆಲಸಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಅನುದಾನ ನೀಡಿದೆ, ಆದರೆ ಸದರಿ ಕಾಮಗಾರಿಗಳಿಗೆ ಬಿಲ್ ಪಾವತಿಸದೆ ಕೇಂದ್ರದ ಮೇಲೆ ಅಪಾದನೆ ಮಾಡಲಾಗುತ್ತಿದೆ, ಇದರಲ್ಲಿಯೂ ಈ ಸರ್ಕಾರ ಕಮಿಷನ್ ಪಡೆಯಲು ಪ್ರಯತ್ನಿಸುತ್ತಿದೆ” ಎಂದು ಕೇಂದ್ರ ಸಚಿವ ಖೂಬಾ ತಿಳಿಸಿದ್ದಾರೆ.