ಹಿಂದಿನ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಪಂಚಮಸಾಲಿ ಲಿಂಗಾಯತ 2ಎ ಮೀಸಲಾತಿ ಹೋರಾಟ, ಇದೀಗ ಮತ್ತೆ ಚುರುಕು ಪಡೆದಿದ್ದು, ನವೆಂಬರ್ 10ರಂದು ಬೆಂಗಳೂರು -ಪೂನಾ ರಾಷ್ಟ್ರೀಯ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ಮಾಡಿ ಪ್ರತಿಭಟನೆ ಮಾಡುವುದಾಗಿ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. “2ಎ ಮೀಸಲಾತಿ ಜೊತೆ ಲಿಂಗಾಯತ ಉಪಪಂಗಡ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯಿಸುತ್ತೇವೆ. ಹಿಂದಿನ ಸರ್ಕಾರ ಮೀಸಲಾತಿ ಘೋಷಣೆ ಮಾಡಿತು. ಆದರೆ, ನೀತಿ ಸಂಹಿತೆ ಹಿನ್ನಲೆ ಜಾರಿಯಾಗಲಿಲ್ಲ. 2ಡಿ ಮೀಸಲಾತಿ ಆಗ ಅನುಷ್ಠಾನಕ್ಕೆ ಮಾಡಲು ಸಾಧ್ಯವಾಗಲಿಲ್ಲ. ಈಗಿನ ಸರ್ಕಾರಕ್ಕೂ ಕೂಡ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಲಾಗುವುದು” ಎಂದರು.
“ಹೋರಾಟದ ಮೂಲಕ ಮೀಸಲಾತಿ ಪಡೆಯಬೇಕು. ಈಗಿನ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂತು ಇಷ್ಟಲಿಂಗ ಪೂಜೆ ಮಾಡಿ ಹೋರಾಟ ಆರಂಭಿಸುತ್ತೇವೆ. ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಮನವಿ ಮಾಡುತ್ತೇವೆ. ಲೋಕಸಭಾ ಚುನಾವಣೆಯ ಒಳಗೆ ನಮಗೆ ಮೀಸಲಾತಿ ನೀಡಬೇಕು. ಇಲ್ಲದಿದ್ದಲ್ಲಿ ಲೋಕಸಭಾ ಚುನಾವಣೆಗೆ ಬಹಳ ಹೊಡೆತ ಬೀಳುತ್ತದೆ. ಎಲ್ಲ ಕಡೆ ಸಭೆ ಮಾಡಿ ಜಾಗೃತಿ ಮೂಡಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಾಲೆಯಲ್ಲಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ: ಜಿಲ್ಲಾಧಿಕಾರಿ ವೆಂಕಟೇಶ್
“ಸರ್ಕಾರ ಜಾತಿಗಣತಿ ಬಿಡುಗಡೆ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ, ಲಿಂಗಾಯತ, ಒಕ್ಕಲಿಗ ಸಮಾಜದ ಜನರಲ್ಲಿ ಆತಂಕ ಇದೆ. ಸರ್ಕಾರ ಎರಡು ಸಮಾಜದ ಶಾಸಕರನ್ನು ಸೇರಿಸಿ ಸಭೆ ಮಾಡಿ ಮನವರಿಕೆ ಮಾಡಿಕೊಳ್ಳಲಿ. ಲಿಂಗಾಯತ ಒಳಪಂಗಡದವರು ಎಲ್ಲಿ ಸೌಲಭ್ಯ ಕಟ್ ಆಗುತ್ತದೆಂದು ಲಿಂಗಾಯತ ಎಂದು ಬರೆಸಿಲ್ಲ. ಇದರಿಂದ ಸಂಖ್ಯೆ ಕಡಿಮೆಯಾಗಿರುವ ಆತಂಕವಿದೆ” ಎಂದರು.
“2ಎ ಮೀಸಲಾತಿ ಬಗ್ಗೆ ಜಯಪ್ರಕಾಶ್ ಹೆಗಡೆಯವರ ಮಧ್ಯಂತರ ವರದಿ ನಮ್ಮ ಪರವಾಗಿ ಬಂದಿದೆ. 2ಎ ಮೀಸಲಾತಿಯಿಂದ ಯಾವ ಜಾತಿಗಳಿಗೂ ಅನ್ಯಾಯವಾಗುವುದಿಲ್ಲ. ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ನೀಡಿ” ಎಂದು ಆಗ್ರಹಿಸಿದರು.