ಗೃಹಿಣಿಯೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.26ರಂದು ಬೆಂಗಳೂರಿನಲ್ಲಿ ನಡೆದಿತ್ತು. ಸದ್ಯ ಈ ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದಿದ್ದು, ಗೋವಿಂದರಾಜನಗರದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಐಶ್ವರ್ಯ ಮೃತ ದುರ್ದೈವಿ. ಮೃತ ಐಶ್ವರ್ಯ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ಬಂಧಿತರು.
ಏನಿದು ಘಟನೆ?
ಮೃತ ಐಶ್ವರ್ಯ ರಾಜ್ಯದ ಪ್ರತಿಷ್ಠಿತ ಐಸ್ ಕ್ರೀಂ ಕಂಪನಿ ಮಾಲೀಕ ಗಿರಿಯಪ್ಪ ಗೌಡನ ಪುತ್ರ ರಾಜೇಶ್ ಪತ್ನಿ. ಕಳೆದ ಐದು ವರ್ಷಗಳ ಹಿಂದೆ ಎರಡು ಮನೆಯವರು ಸೇರಿ ವಿವಾಹ ನೇರವೇರಿಸಿದ್ದರು.
ಬಿಇ ಅಂತಿಮ ವರ್ಷದಲ್ಲಿದ್ದ ಐಶ್ವರ್ಯಳನ್ನು ಮುಂದೆ ಓದಿಸೋದಾಗಿ ಗಿರಿಯಪ್ಪ ಗೌಡ ಫ್ಯಾಮಿಲಿ ಮಾತು ಕೊಟ್ಟಿತ್ತು. ಅದರಂತೆಯೇ ಐಶ್ವರ್ಯಾಳನ್ನ ಅಮೇರಿಕಾಗೆ ಕಳುಹಿಸಿ ಎಂಬಿಎ ಓದಿಸಿದ್ದರು.
ಗಿರಿಯಪ್ಪ ಅವರ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡ ರವೀಂದ್ರ ಎಂಬುವವರು ಆಡಿಟರ್ ಆಗಿ ಕೆಲಸ ಮಾಡುತ್ತಿದ್ದರು. ಐಶ್ವರ್ಯ ತಂದೆ ಮತ್ತು ರವೀಂದ್ರ ಎಂಬುವವರ ಮಧ್ಯೆ ಆಸ್ತಿ ವಿಚಾರವಾಗಿ ಗಲಾಟೆ ನಡೆದಿತ್ತು. ಹೀಗಾಗಿ, ಆಕೆಯ ಸಂಸಾರದ ವಿರುದ್ಧ ರವೀಂದ್ರ ಪಿತೂರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಐಶ್ವರ್ಯ ಅವರು ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ತೆರಳಿದ್ದರು. ಆ ವೇಳೆ, ರವೀಂದ್ರ, ಸೋದರತ್ತೆ ಗೀತಾ ಹಾಗೂ ಅತ್ತೆ ಮಗಳು ಲಿಪಿ ಸೇರಿ ಐಶ್ವರ್ಯ ವಿರುದ್ಧ ಆಕೆಯ ಮಾವ ಗಿರಿಯಪ್ಪ ಬಳಿ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಇದರಿಂದಾಗಿ ಐಶ್ವರ್ಯ ಮತ್ತು ಆಕೆಯ ಪತಿ ರಾಜೇಶ್ ನಡುವೆ ಮನಸ್ಥಾಪ ಉಂಟಾಗಿತ್ತು ಎಂದು ತಿಳಿದುಬಂದಿದೆ.
ಕೇಳುಗರ ಮಾತನ್ನು ನಂಬಿದ ರಾಜೇಶ್ ಮತ್ತು ಆತನ ಕುಟುಂಬದ ಸದಸ್ಯರು ಪ್ರತಿನಿತ್ಯ ಐಶ್ವರ್ಯಾಳಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಜತೆಗೆ, ವರದಕ್ಷಿಣೆ ತೆಗೆದುಕೊಂಡು ಬರುವಂತೆ ಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಇದನ್ನೆಲ್ಲ ಸಹಿಸಿಕೊಂಡ ಐಶ್ವರ್ಯ ಗಂಡನಿಗಾಗಿ ಆತನ ಮನೆಯಲ್ಲಿ ವಾಸಿಸುತ್ತಿದ್ದಳು.
ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದ ಐಶ್ವರ್ಯ ತಾನು ದುಡಿದ ಹಣದಲ್ಲಿ ಗಂಡನಿಗೆ ಬಂಗಾರ ಹಾಗೂ ಹೊಸ ಬೈಕ್ ಕೊಡಿಸಿದ್ದಳು. ಆದರೆ, ಕುಟುಂಬಸ್ಥರ ಮಾತನ್ನ ಕೇಳಿ ಪತಿ ರಾಜೇಶ್ ಕೂಡ ಐಶ್ವರ್ಯಳನ್ನು ನಿಂದಿಸುತ್ತಿದ್ದನು. ಇದರಿಂದ ಸಂಪೂರ್ಣವಾಗಿ ಮನನೊಂದ ಐಶ್ವರ್ಯ ಕಳೆದ 20 ದಿನಗಳ ಹಿಂದೆ ತವರು ಮನೆಗೆ ತೆರಳಿದ್ದಳು.
ಈ ಸುದ್ದಿ ಓದಿದ್ದೀರಾ? ದೀಪಾವಳಿ ಹಬ್ಬ | ಪಟಾಕಿ ಮಾರಾಟಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ
ಮನನೊಂದು ಅ.26ರಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಐಶ್ವರ್ಯ ಆತ್ಮಹತ್ಯೆ ಬಳಿಕ ಮನೆ ಮಂದಿ ಗೋವಾ ಹಾಗೂ ಮುಂಬೈನಲ್ಲಿ ಪಾರ್ಟಿ ಮಾಡುತ್ತಿದ್ದರು.
ಈ ಘಟನೆ ಸಂಬಂಧ ಐಶ್ವರ್ಯಾಳ ತಾಯಿ, ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜತೆಗೆ, ರವೀಂದ್ರ, ಗೀತಾ, ಶಾಲಿನ, ಓಂಪ್ರಕಾಶ್ ಎಂಬುವವರ ಮೇಲೆ ದೂರು ದಾಖಲಿಸಿದ್ದರು.
ಇನ್ನು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಮೃತ ಐಶ್ವರ್ಯ ತನ್ನ ಕಣ್ಣುಗಳನ್ನು ಇಬ್ಬರು ಅಂಧರಿಗೆ ದಾನ ಮಾಡಿ ಮಣ್ಣು ಸೇರಿದ್ದಾಳೆ.