ಕಾರ್ಯಕ್ರಮಗಳಲ್ಲಿ, ಮನೆಗಳಲ್ಲಿ ಗಣಪತಿಯನ್ನು ಪೂಜಿಸುವುದು ಮೌಢ್ಯದ ಆಚರಣೆಯಾಗಿದೆ. ವಿಘ್ನ ನಿವಾರಕನೆಂದು ಗಣಪತಿಗೆ ಪಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಸಾಣೇಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಗಣಪತಿಯನ್ನು ಸ್ತುತಿಸುವುದು ಮೌಢ್ಯದ ಆಚರಣೆಯಾಗಿದೆ. ಅದರ ಬದಲು ವಾಸ್ತವ ಅಂಶಗಳನ್ನು ಒಳಗೊಂಡಿರುವ, ವಾಸ್ತವವನ್ನು ತಿಳಿಸುವ ವಚನಗಳನ್ನು ಹೇಳಬೇಕು” ಎಂದರು.
“ಗಣಪತಿ ಕಾಲ್ಪನಿಕ ದೇವರು. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಲು ಹುಟ್ಟುಹಾಕಿದ ದೇವರು. ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ” ಎಂದು ತಿಳಿಸಿದರು.
“ಗಣಪತಿ ಪೂಜೆ ಅಥವಾ ಶ್ಲೋಕ ಹೇಳುವ ಬದಲು ವಚನಗಳನ್ನು ಪಠಿಸಬೇಕು. ವಚನಗಳನ್ನು ಪ್ರಸ್ತುತಪಡಿಸುವುದು ನಿಜವಾದ ಪ್ರಾರ್ಥನೆಯಾಗಿದೆ. ಕಾರ್ಯಕ್ರಮಗಳ ಆರಂಭದಲ್ಲಿ ವಚನಗಳನ್ನೂ ಹಾಡಬಹುದು” ಎಂದು ಹೇಳಿದರು.
“ಶರಣರ ಪ್ರಕಾರ ಸ್ವಸಾಮರ್ಥ್ಯ, ಉತ್ತಮ ನಡವಳಿಕೆ ಉಳ್ಳವರೇ ದೇವರು. ನಮ್ಮನ್ನು ನಾವು ನಂಬಬೇಕು” ಎಂದು ತಿಳಿಸಿದರು.