ಬಿಜೆಪಿ ಮುಖಂಡನ ಪುತ್ರನೊಬ್ಬ ತ್ವರಿತವಾಗಿ ಸಾಲ ನೀಡುವ ಆ್ಯಪ್ ಜಾಲಕ್ಕೆ ಸಿಲುಕಿ ಬರೋಬ್ಬರಿ ₹45 ಲಕ್ಷ ಕಳೆದುಕೊಂಡಿದ್ದಾರೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿ ಮುಖಂಡನ ಪುತ್ರ ಹರೀಶ್ (ಹೆಸರು ಬದಲಾಯಿಸಲಾಗಿದೆ) ವಂಚನೆಗೆ ಒಳಗಾದವರು. ಕೆಲ ತಿಂಗಳ ಹಿಂದೆ ಹರೀಶ್ ಆ್ಯಪ್‌ವೊಂದರ ಮೂಲಕ ತ್ವರಿತವಾಗಿ ₹6 ಲಕ್ಷ ಹಣ ಪಡೆದಿದ್ದರು. ಈ ವೇಳೆ, ಆ್ಯಪ್‌ನಲ್ಲಿ ಭಾವಚಿತ್ರ, ದೂರವಾಣಿ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಸಾಲ ತೆಗೆದುಕೊಂಡ ಒಂದೆರಡು ದಿನಗಳ ಬಳಿಕ ಹರೀಶ್ ಅವರಿಗೆ ಆ್ಯಪ್ ವಂಚಕರು ಸಾಲದ ಮೊತ್ತದ ಜತೆಗೆ ಬಡ್ಡಿಯನ್ನು ವಾಪಸ್ ನೀಡುವಂತೆ ಸತತವಾಗಿ ಕಿರುಕುಳ ನೀಡಿದ್ದಾರೆ. ಹರೀಶ್ ಅವರು ಸಂಪೂರ್ಣವಾಗಿ ಬಡ್ಡಿಯನ್ನು ತುಂಬಿದರೂ ಸಹ ಆ್ಯಪ್ ವಂಚಕರು ದಿನದಿಂದ ದಿನಕ್ಕೆ ಬಡ್ಡಿಯನ್ನು ಹೆಚ್ಚಿಸುತ್ತಲೇ ಇದ್ದರು. ಸಾಲದ ಮೊತ್ತ ಪೂರ್ಣವಾಗಿಲ್ಲ ಎಂದು ಹೆಚ್ಚಿನ ಹಣ ಕೇಳಿದ್ದಾರೆ.
ಬಳಿಕ ಅಧಿಕ ಹಣವನ್ನು ಹರೀಶ್ ಅವರು ಕೊಡಲು ನಿರಾಕರಿಸಿದಾಗ ಅವರ ನಗ್ನ ಫೋಟೋಗಳನ್ನು ಅವರ ಸಂಪರ್ಕಕ್ಕೆ ಇರುವ ವ್ಯಕ್ತಿಗಳಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಈ ಬೆದರಿಕೆಗೆ ಸ್ಯಾಂಪಲ್ ಎಂಬಂತೆ ಹರೀಶ್ ಅವರ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅವರಿಗೆ ಕಳುಹಿಸಿದ್ದಾರೆ.
ಇದರಿಂದ ಬೇಸತ್ತ ಹರೀಶ್ ಅವರು ಸಾಲ ಪಡೆದ ₹6 ಲಕ್ಷಕ್ಕೆ ಬರೋಬ್ಬರಿ ₹45 ಲಕ್ಷ ಆ್ಯಪ್ ವಂಚಕರಿಗೆ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಂಚಕರು ಪದೇಪದೆ ಹರೀಶ್ ಅವರಿಗೆ ಅವರ ಪತ್ನಿ ಹಾಗೂ ಅವರ ಮಗಳಿಗೆ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಅವರು ಕಾಲ್ ತೆಗೆಯದೇ ಇದ್ದಾಗ ವಂಚಕರು ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿ ‘ಮೇಕ್ ಮನಿ’ ಅಪ್ಲಿಕೇಶನ್ ನಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ. ಇನ್ನು ಹರೀಶ್ ಅವರ ತಂದೆಯ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಇಬ್ಬರು ಮಹಿಳೆಯರ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅಪ್‌ಲೋಡ್ ಮಾಡಿದ್ದಾರೆ.
ಈ ಬಗ್ಗೆ ಹರೀಶ್ ಅವರ ಚಿಕ್ಕಪ್ಪ, “ಹರೀಶ್‌ನಿಂದ ಸುಮಾರು ₹45 ಲಕ್ಷ ಸುಲಿಗೆ ಮಾಡಿದರೂ ಹೆಚ್ಚಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ಸಾಲ ಮನ್ನಾ ಮಾಡಿದರೂ ಮೇಕ್ ಮನಿ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ಹರೀಶ್ ಈ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಪ್ರಯತ್ನಿಸಿದ್ದಾರೆ. ಕಳೆದ 18 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಂಚಕರು ಸ್ಥಳೀಯ ಮತ್ತು ವಿದೇಶಿ ಸೇರಿದಂತೆ ಹಲವು ಸಂಖ್ಯೆಗಳಿಂದ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲಿ ಬೆದರಿಕೆ ಹಾಕುತ್ತಿದ್ದಾರೆ” ಎಂದು ಈಶಾನ್ಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನ.3 ರಂದು ಬೆಳ್ಳಂಬೆಳಗ್ಗೆ ಬಿಲ್ಡರ್ಸ್ ಮನೆಗಳ ಮೇಲೆ ಐಟಿ ದಾಳಿ
“ಹರೀಶ್ ಅವರ ತಂದೆಯ ಹೆಸರಿನಲ್ಲಿ ತೆರೆಯಲಾದ ನಕಲಿ ಫೇಸ್ ಬುಕ್ ಖಾತೆಯನ್ನು ಬ್ಲಾಕ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹರೀಶ್ ಮತ್ತು ಅವರ ಕುಟುಂಬ ಸದಸ್ಯರಿಗೆ ಪಾಕಿಸ್ತಾನ ಮತ್ತು ಯುಎಇಯಿಂದ ಫೋನ್ ಕರೆ ಬಂದಿವೆ. ಇನ್ನುಳಿದವು ಸ್ಥಳೀಯ ಸಂಖ್ಯೆಗಳಿಂದ ಬಂದಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಇತರ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಸೈಬರ್ ಜಾಲದ ವಂಚನೆಯ ಬಗ್ಗೆ ಬೆಂಗಳೂರು ನಗರ ಪೊಲೀಸರು ಮಾಹಿತಿಯನ್ನು ಒಳಗೊಂಡ ಪೋಸ್ಟರ್, ಸಭೆ ಸೇರಿದಂತೆ ಸಾರ್ವಜನಿಕರಲ್ಲಿ ಸೈಬರ್ ವಂಚನೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಜತೆಗೆ ಸಾರ್ವಜನಿಕರು ಈ ಆ್ಯಪ್ ಮೂಲಕ ತ್ವರಿತವಾಗಿ ಸಿಗುವ ಸಾಲದ ಆಸೆಗೆ ಬೀಳಬೇಡಿ ಎಂದು ಮನವಿ ಮಾಡಿದ್ದಾರೆ. ಆದರೂ ಇಂತಹ ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಒಂದೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ.