ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ‘ಕನ್ನಡ ಸಂಭ್ರಮ-50’ರ ಅಂಗವಾಗಿ ಹಂಪಿಯಿಂದ ಗದಗಕ್ಕೆ ಕನ್ನಡ ಜ್ಯೋತಿ ಆಗಮಿಸಿದೆ. ಕನ್ನಡ ಜ್ಯೋತಿಯನ್ನು ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು.
ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. 1973ರ ನವೆಂಬರ್ 03ರಂದು ನಡೆದ ಕರ್ನಾಟಕ ನಾಮಕರಣ ಸಂಭ್ರಮದ ಕಾರ್ಯಕ್ರಮವನ್ನು, 2023ರ ನವೆಂಬರ್ 03ರಂದು 50ವರ್ಷದ ಸುವರ್ಣ ಸಂಭ್ರವನ್ನು ಪುನರಪಿಯಾಗಿ ಆಚರಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಅಂದು ಸಾಗಿದ ಮೆರವಣಿಗೆಯ ಮಾರ್ಗದಲ್ಲಿಯೇ ಇಂದು ಮೆರವಣಿಗೆ ಸಾಗಿದ್ದು ವಿಶೇಷವಾಗಿತ್ತು.
ಅದ್ದೂರಿ ಮೆರವಣಿಗೆಯಲ್ಲಿ ಮೈಸೂರಿನ ಚಂಡೆ, ಮದ್ದಳೆ ಕಲಾತಂಡಗಳು ಸೇರಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 25ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಕಲಾಪ್ರದರ್ಶನ ನೀಡಿದವು. ಮೈಸೂರು ದಸರಾದಲ್ಲಿ ಪ್ರದರ್ಶನಗೊಂಡ ಸಬರಮತಿ ಆಶ್ರಮ, ಲಕ್ಕುಂಡಿಯ ಬ್ರಹ್ಮಜೀನಾಲಯ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಗತವೈಭವ ಸಾರಿದವು.
ನಗರಸಭೆ ವತಿಯಿಂದ ಭುವನೇಶ್ವರಿ, ಸರಕಾರದಿಂದ ಅಧಿಕೃತಗೊಳಿಸಲಾದ ಲಾಂಛನ ಹಾಗೂ ಭುನೇಶ್ವರಿ ದೇವಿ ಮೂರ್ತಿ, ಕುಂಭಹೊತ್ತ ಮಹಿಳೆಯರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಮೆರವಣಿಗೆಗೆ ರಂಗು ತುಂಬಿದರು.
ಹಾದಿಯುದ್ದಕ್ಕೂ ಮನೆಗಳ ಮುಂದೆ ಕನ್ನಡದ ರಂಗೋಲಿ, ಬಾವುಟಗಳು ಕಣನ ಸೆಳೆಯುತ್ತಿದ್ದರೆ ಮಹಿಳೆಯರು, ಮಕ್ಕಳು ರಥಕ್ಕೆ ಹೂಮಳೆ ಗರೆಯುತ್ತಾ, ರಥದ ಚಕ್ರಗಳಿಗೆ ಹಣ್ಣು ಕಾಯಿ, ಹಾಲಿನ ಅಭಿಷೇಕ ನಡೆಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಮಂಕಳ ವೈದ್ಯ ಸೇರಿ ಹಲವು ಮುಖಂಡರು ಮೆರವಣಿಗೆಯಲ್ಲಿದ್ದರು.
ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪೌರಾಡಳಿತ ಸಚಿವ ರಹೀಂಖಾನ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಶಾಸಕರಾದ ಜಿ.ಎಸ್. ಪಾಟೀಲ, ಶ್ರೀನಿವಾಸ ಮಾನೆ, ಜೆ.ಟಿ. ಪಾಟೀಲ, ಸರಕಾರದ ಮುಖ್ಯಸಚೇತಕ ಸಲೀಂ ಅಹ್ಮದ್, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿ ಹಲವರು ಇದ್ದರು. ಸಿಎಂ ಆಗಮನ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.