ಅಂತರ್ಜಾತಿ ವಿವಾಹವಾದ ಪ್ರೇಮಿಗಳು ತಮ್ಮ ಪೋಷಕರಿಂದ ಬೆದರಿಕೆ ಇದೆ. ನಮಗೆ ರಕ್ಷಣೆ ನೀಡಬೇಕೆಂದು ಕೋರಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮೆಟ್ಟಿಲೇರಿದ್ದಾರೆ.
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜೆ ಕೆರೆಯ ಹರೀಶ್ ಮತ್ತು ಕೊಂಡ್ಲಹಳ್ಳಿ ಮೂಲದ ಹರ್ಷಿತಾ ಇಬ್ಬರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹರ್ಷಿತಾ ಪಾಲಕರ ವಿರೋಧದ ನಡುವೆಯೂ ಇಬ್ಬರು ಅಂತರ್ಜಾತಿ ವಿವಾಹವಾಗಿದ್ದಾರೆ. ಹರ್ಷಿತಾ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದರೆ, ಹರೀಶ್ ಐಟಿಐ ಓಡುತ್ತಿದ್ದಾರೆ.
ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರಿಂದ, ಇಬ್ಬರ ಮದುವೆಗೆ ಯುವತಿಯ ಪಾಲಕರು ವಿರೋಧ ವ್ಯಕ್ತಡಿಸಿದ್ದರು. ಆದಾಗ್ಯೂ, ಚಿತ್ರದುರ್ಗ ಹೊರವಲಯದ ದೇವಸ್ಥಾನದಲ್ಲಿ ಇಬ್ಬರು ಮದುವೆ ಮಾಡಿಕೊಂಡಿದ್ದಾರೆ. ಮದುವೆಯ ಬಳಿಕವೂ ತಮ್ಮಿಬ್ಬರನ್ನು ದೂರ ಮಾಡಲು ಪಾಲಕರು ಯತ್ನಿಸಿದ್ದಾರೆ ಎಂದು ಜೋಡಿ ಆರೋಪ ಮಾಡಿದೆ.
ಪಾಲಕರ ಬೆದರಿಕೆಯ ಕುರಿತು ಹರ್ಷಿತಾ ಪತ್ರ ಬರೆದು ಓದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ತೀವ್ರ ವಿರೋಧದ ಹಿನ್ನೆಲೆಯಲ್ಲಿ ನವೆಂಬರ್ 02ರಂದು ಹರೀಶ್ ಮತ್ತು ಹರ್ಷಿತಾ ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ, ತಮ್ಮ ಅಳಲನ್ನು ತೋಡಿಕೊಂಡು ರಕ್ಷಣೆ ಕೋರಿದ್ದಾರೆ.
ಸೂಕ್ತ ರಕ್ಷಣೆಯನ್ನು ನೀಡುವುದಾಗಿ ಭರವಸೆ ನೀಡಿರುವ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಅವರು ನವದಂಪತಿಗಳನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.