ಮುಚ್ಚಿರುವ ಸರ್ಕಾರಿ ಶಾಲೆಯನ್ನು ಮತ್ತೆ ತೆರೆಯಬೇಕು. ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕು ಎಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹೆಬ್ಬಳಲು ಗ್ರಾಮದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಾ ವಿ,”ನಮ್ಮ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿದೆ. ಶಾಲೆ ಆರಂಭವಾದಾಗಿನಿಂದಲೂ ಉತ್ತಮ ಶಿಕ್ಷಣ ನೀಡಿದೆ. ನಾವೆಲ್ಲರೂ ಇದೇ ಶಾಲೆಯಲ್ಲಿ ಓದಿ ಬೆಳೆದಿದ್ದೇವೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಶಾಲೆಯ ವಿದ್ಯಾರ್ಥಿಗಳನ್ನು ಸಮೀಪದ ಕೆಪಿಎಸ್ ಶಾಲೆಗೆ ಬಲವಂತವಾಗಿ ಸ್ಥಳಾಂತರಿಸಿ, ಶಾಲೆಯನ್ನು ಮುಚ್ಚಿದೆ” ಎಂದು ಆರೋಪಿಸಿದ್ದಾರೆ.
“ಸ್ಥಳಾಂತರಿದ ಆರಂಭದಲ್ಲಿ ಶಾಲಾ ವಾಹನದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದರು. ಈಗ ಸಣ್ಣ ವಾಹನದಲ್ಲಿ ಕುರಿಗಳಂತೆ ತುಂಬಿಕೊಂಡು ಹೋಗುತ್ತಿದ್ದಾರೆ. ಪೋಷಕರು ಹಿಂದಿನಿಂದಲೂ ಶಾಲೆಯನ್ನು ಮುಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈಗಲೂ ಶಾಲೆಯನ್ನು ತೆರೆಯಬೇಕೆಂದು ಒತ್ತಾಯಿಸಿ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪೋಷಕರ ಮಾತನ್ನು ಕೇಳಿಕೊಳ್ಳತ್ತಿಲ್ಲ” ಎಂದು ಕಿಡಿಕಾರಿದ್ದಾರೆ.
“ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮುಚ್ಚಿರುವ ನಮ್ಮೂರಿನ ಸರ್ಕಾರಿ ಶಾಲೆಯನ್ನು ಮತ್ತೆ ತೆರೆಯಬೇಕು. ಇಲ್ಲಿಯೇ ಮಕ್ಕಳಿಗೆ ಪಾಠ ಮಾಡಬೇಕು. ಕೂಡಲೇ ಶಾಲೆ ಬೀಗ ತೆಗೆದು ತರಗತಿ ಆರಂಭಿಸಬೇಕು. ಇಲ್ಲದಿದ್ದರೆ, ಬಿಇಒ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಕವಿತಾ, ಪೋಷಕರಾದ ಅನುಸೂಯ, ಶಶಿಕಲಾ, ರೇಣುಕಾದೇವಿ, ಯಶೋದಮ್ಮ, ಶಿವಮ್ಮ, ಶ್ರೀನಿವಾಸ್, ಚಿಕ್ಕಣ್ಣ, ನಾಗರಾಜು, ಶಿವಕುಮಾರ್ ಎಚ್.ಸಿ, ಸಿದ್ದಪ್ಪ, ನಾಗರಾಜ್, ಶಿವಮ್ಮ, ಬಾನಮ್ಮ ಸೇರಿದಂತೆ ಹಲವಾರು ಗ್ರಾಮಸ್ಥರು ಇದ್ದರು.