ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಶ್ಚಿಮ ವಲಯದ ವ್ಯಾಪ್ತಿಗೆ ಬರುವ ಮಲ್ಲೇಶ್ವರಂ ವಿಭಾಗದ 8ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, 10ನೇ ಅಡ್ಡರಸ್ತೆ ಮಾರುಕಟ್ಟೆ ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪಾಲಿಕೆ ನಡೆಸಿದೆ.
“ಮಲ್ಲೇಶ್ವರಂನ ಮಲ್ಲೇಶ್ವರಂ ನಿವಾಸಿ ಕಲ್ಯಾಣ ಸಂಘ ಹಾಗೂ ವರ್ತಕರ ಸಂಘಗಳ ಮನವಿ ಜತೆಗೆ ಉಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶದನುಸಾರ ನ.3 ರಂದು ಬೆಳಗ್ಗೆ 11.30 ಘಂಟೆಯಿಂದ ಸಂಪಿಗೆ ರಸ್ತೆ, 8ನೇ ಅಡ್ಡರಸ್ತೆ, 7ನೇ ಅಡ್ಡರಸ್ತೆ, 10ನೇ ಅಡ್ಡರಸ್ತೆ, ಮಾರುಕಟ್ಟೆ ರಸ್ತೆಗಳ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು” ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
“4 ಟ್ರ್ಯಾಕ್ಟರ್ ಹಾಗೂ 20ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಿಕೊಂಡು ಪಾದಚಾರಿ ಮಾರ್ಗಗಳಲ್ಲಿ ಇಟ್ಟಿದ್ದ ಅನಧಿಕೃತ ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವು ಮಾಡಲಾಯಿತು” ಎಂದು ಹೇಳಿದೆ.
“ಕಾರ್ಯಾಚರಣೆ ನಡೆಯುವ ಮುನ್ನ ವ್ಯಾಪಾರಿಗಳ ಗಮನಕ್ಕೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡದಂತೆ ಧ್ವನಿವರ್ಧಕ ಮುಖಾಂತರ ಹೇಳಲಾಗಿದೆ. ಆದರೂ, ಸುಮಾರು 1.50 ಕೀ.ಮೀ ರಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ ಅನಧಿಕೃತವಾಗಿ ವ್ಯಾಪಾರ ಮುಂದುವರೆಸಿದ್ದರು. ಅಂತಹವರ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರಿಗೆ ದಂಡ ವಿಧಿಸುವ ಜತೆಗೆ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ಆ್ಯಪ್ ಮೂಲಕ ಸಾಲ, ಅಶ್ಲೀಲ ಫೋಟೋ ಬೆದರಿಕೆ, 45 ಲಕ್ಷ ಕಳೆದುಕೊಂಡ ಬಿಜೆಪಿ ಮುಖಂಡನ ಪುತ್ರ
ಈ ವೇಳೆ ಕಾರ್ಯಪಾಲಕ ಅಭಿಯಂತರ ಜಯಶಂಕರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಹರ್ಷ ನಾಯ್ಕ್, ಆರೋಗ್ಯಾಧಿಕಾರಿಗಳು, ಪೋಲಿಸ್ ಅಧಿಕಾರಿಗಳು/ಸಂಚಾರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಾರ್ಷಲ್, ಪೌರಕಾರ್ಮಿಕರು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.